ವಿಕ್ರಮ್ ಸಂಪತ್‌ಗೆ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ

7

ವಿಕ್ರಮ್ ಸಂಪತ್‌ಗೆ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ

Published:
Updated:

ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿಯು ಇದೇ ಮೊದಲ ಬಾರಿಗೆ ನೀಡುತ್ತಿರುವ ಯುವ ಪುರಸ್ಕಾರಕ್ಕೆ ನಗರದ ವಿಕ್ರಮ್ ಸಂಪತ್ ಆಯ್ಕೆಯಾಗಿದ್ದಾರೆ.ರಾಜರ ಕಾಲದ ಆಸ್ಥಾನ ಗಾಯಕಿ ಗೌಹರ್ ಜಾನ್ ಅವರನ್ನು ಕುರಿತು ಸಂಪತ್ ಬರೆದ `ಮೈ ನೇಮ್ ಈಸ್ ಗೌಹರ್ ಜಾನ್~ ಕೃತಿಗೆ ಈ ಪುರಸ್ಕಾರ ಲಭಿಸಿದೆ.1902ರಲ್ಲಿ ಧ್ವನಿ ಮುದ್ರಣಗೊಂಡ ಭಾರತದ ಮೊದಲ ದನಿ ಎಂಬ ಹೆಗ್ಗಳಿಕೆ ಹೊಂದಿರುವ ಗೌಹರ್ ಜಾನ್ ಅವರ ಕುರಿತಾದ ಐತಿಹಾಸಿಕ ದಾಖಲೆಗಳು ಹೆಚ್ಚಾಗಿ ಲಭ್ಯವಿರಲಿಲ್ಲ. ಸಂಪತ್ ಬಹಳ ಶ್ರಮ ವಹಿಸಿ ಶತಮಾನದ ಹಿಂದಿನ ದಾಖಲೆಗಳನ್ನು ಸಂಗ್ರಹಿಸಿ ಈ ಕೃತಿ ರಚಿಸಿದ್ದಾರೆ.

 

ಆಸ್ಥಾನ ಗಾಯಕಿಯಾಗಿದ್ದ ಕಾರಣ ಗೌಹರ್ ಜಾನ್ ಬಗ್ಗೆ ಆಗಿನ ಕಾಲದ ಮುಖ್ಯವಾಹಿನಿಯ ಸಂಗೀತಗಾರರು ಅವಜ್ಞೆ ತೋರಿದ್ದರು. ಜಾನ್ ಕುರಿತ ಕೃತಿಯು ಆ ಕಾಲದ ವಸಾಹತು ಆಳ್ವಿಕೆ, ನೈತಿಕತೆಯ ದೃಷ್ಟಿಕೋನ ಮತ್ತು ಸಾಂಸ್ಕೃತಿಕ ವಾತಾವರಣದ ಬಗ್ಗೆ ಬೆಳಕು ಚೆಲ್ಲಿದೆ.`ದೇಶದ ಅತ್ಯುನ್ನತ ಸಾಹಿತ್ಯ ಸಂಸ್ಥೆಯು ಗುರುತಿಸಿರುವುದು ನನ್ನಲ್ಲಿ ವಿನೀತ ಭಾವವನ್ನು ಉಂಟು ಮಾಡಿದೆ. ದಾಖಲಾತಿಗಳು ಇಲ್ಲದಿದ್ದುದರಿಂದ ಕೃತಿ ರಚನೆಗೆ ತುಂಬಾ ಶ್ರಮ ಹಾಕಬೇಕಾಯಿತು~ ಎಂದು ಸಂಪತ್ ಪ್ರತಿಕ್ರಿಯೆ ನೀಡಿದ್ದಾರೆ.ಸ್ವತಃ ಶಾಸ್ತ್ರೀಯ ಸಂಗೀತ ತರಬೇತಿ ಪಡೆದಿರುವ 32ರ ಹರೆಯದ ಸಂಪತ್, ಎಂಬಿಎ ಪದವೀಧರರಾಗಿದ್ದಾರೆ. ವೀಣಾ ವಿದ್ವಾನ್ ಎಸ್.ಬಾಲಚಂದರ್ ಕುರಿತು ಸಂಪತ್ ಕೃತಿಯೊಂದನ್ನು ರಚಿಸಿದ್ದಾರೆ. ವೀರಣ್ಣ ಮಡಿವಾಳರ ಕವನ ಸಂಕಲನ `ನೆಲದ ಕರುಣೆಯ ದನಿ~ಗೂ ಈ ಬಾರಿಯ ಯುವ ಪುರಸ್ಕಾರ ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry