ವಿಚಾರಣಾಧೀನ ಆಪಾದನಾ ರಾಜಿ ಅರಿವು ಅಗತ್ಯ

ಸೋಮವಾರ, ಜೂಲೈ 22, 2019
24 °C

ವಿಚಾರಣಾಧೀನ ಆಪಾದನಾ ರಾಜಿ ಅರಿವು ಅಗತ್ಯ

Published:
Updated:

ಕಡೂರು: ಅನಿರೀಕ್ಷಿತ ಮತ್ತು ಆಕಸ್ಮಿಕ ಸಂದರ್ಭಗಳಲ್ಲಿ ಅಪರಾಧವೆಸಗಿ ವಿಚಾರಣಾಧೀನ ಕೈದಿಗಳಾಗಿರುವವರಿಗೆ ಅವರ ತಪ್ಪೊಪ್ಪಿಗೆ ಕುರಿತು ಇರುವ ಪ್ಲಿ-ಬಾರ್‌ಗೇನಿಂಗ್ ಕಾನೂನಿನ ಅರಿವು ಮೂಡಿಸುವುದು ಅಗತ್ಯ ಎಂದು ಸಹಾಯಕ ಸರ್ಕಾರಿ ವಕೀಲ ಅನುರೇವು ತಿಳಿಸಿದರು.

ಕಡೂರು ಉಪಕಾರಾಗೃಹದಲ್ಲಿ ಸೋಮವಾರ ಸಂಜೆ ತಾಲ್ಲೂಕು ಕಾನೂನು ಸೇವಾಸಮಿತಿ ಮತ್ತು ವಕೀಲರ ಸಂಘ ಆಯೋಜಿಸಿದ್ದ ವಿಚಾರಣಾಧೀನ ಕೈದಿಗಳಿಗೆ ಕಾನೂನು ಅರಿವು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಯಾವುದೇ ಅಪರಾಧ ಪ್ರಕರಣದಲ್ಲಿ 7ವರ್ಷಗಳಿಗಿಂತ ಕಡಿಮೆ ಅವಧಿಯ ಶಿಕ್ಷೆಗೆ ಒಳಗಾಗಬಹುದಾದ ವಿಚಾರಣಾಧೀನ ಆರೋಪಿಗಳು ತಮ್ಮ ಸ್ವ ಇಚ್ಛೆಯಿಂದ ಅಥವಾ ಒತ್ತಾಯದ ಮೇರೆಗೆ ಪ್ಲಿ-ಬಾರ್‌ಗೇನಿಂಗ್ ಅಡಿ ಅರ್ಜಿ ಸಲ್ಲಿಸಿ ತಾವು ಒಳಗಾಗಬಹುದಾದ ಶಿಕ್ಷೆಯ ಅರ್ಧಭಾಗದಿಂದ ವಿನಾಯಿತಿ ಪಡೆಯಬಹುದು. ಆದರೆ ಇದಕ್ಕೆ ಎದುರುದಾರರು ಮತ್ತು ಅವರ ವಕೀಲರ ಸಹಮತದ ಅಗತ್ಯವಿದೆ,ಅಲ್ಲದೆ ವಿಚಾರಣಾಧೀನ ಆರೋಪಿ ತಾನು ಮಾಡಿರಬಹುದಾದ ಅಪರಾಧದ ಕುರಿತು ಸ್ಪಷ್ಟವಾಗಿ ತಪ್ಪೊಪ್ಪಿಗೆ ಮಾಡಿಕೊಳ್ಳಬೇಕಾದ್ದು ಅವಶ್ಯಕ ಎಂದು ಅವರು ಮಾಹಿತಿ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನ ಸಿವಿಲ್ ನ್ಯಾಯಾಧೀಶ ಡಿ.ಸುರೇಶ್, ಯಾವುದೇ ವ್ಯಕ್ತಿ ತನ್ನ ಆರ್ಥಿಕ ಪರಿಸ್ಥಿತಿ, ತಿಳಿವಳಿಕೆ ಕೊರತೆ ಮತ್ತು ಒತ್ತಡದಿಂದ ಎಸಗಬಹುದಾದ ಅಪರಾಧ ತಡೆಗಟ್ಟಲು ಕಾನೂನು ಅರಿವು ಮೂಡಿಸುವ ಸಲುವಾಗಿ ರಾಷ್ಟ್ರೀಯ ಮತ್ತು ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಈ ಕಾರ್ಯಾಗಾರಗಳನ್ನು ನಡೆಸುತ್ತಿದೆ. ಜನಸಾಮಾನ್ಯರು ಇದರ ಸದುಪಯೋಗ ಪಡೆಯುವಂತೆ ತಿಳಿಸಿದರು.

ವಕೀಲರಾದ ಸೂರಿ ಶ್ರೀನಿವಾಸ್, ಶೇಖರ್, ಸಹಾಯಕ ಸರ್ಕಾರಿ ವಕೀಲರಾದ ಪಾರ್ವತಿ ಅಪರಾಧ ಕಾನೂನು ಕುರಿತು ಉಪನ್ಯಾಸ ನೀಡಿದರು. ಉಪಕಾರಾಗೃಹದ ಅಧೀಕ್ಷಕ ಕೆ.ಎಂ.ಶಿವಮೂರ್ತಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry