ವಿಚಾರಣಾಧೀನ ಕೈದಿ ಆತ್ಮಹತ್ಯೆ ಯತ್ನ

7

ವಿಚಾರಣಾಧೀನ ಕೈದಿ ಆತ್ಮಹತ್ಯೆ ಯತ್ನ

Published:
Updated:

ಬೆಂಗಳೂರು: ವಿಚಾರಣಾಧೀನ ಕೈದಿ­ಯೊಬ್ಬ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಎದುರು ಬ್ಲೇಡ್‌ನಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ನಡೆದಿದೆ.



ಆತ್ಮಹತ್ಯೆಗೆ ಯತ್ನಿಸಿದ ಇರ್ಫಾನ್‌ (24) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.



ಸರಗಳವು ಪ್ರಕರಣ ಸಂಬಂಧ ಸುಬ್ರ­ಹ್ಮಣ್ಯಪುರ ಪೊಲೀಸರು ಇರ್ಫಾನ್‌, ತಂದೆ ಅನ್ವರ್‌, ತಾಯಿ ಮೆಹರುನ್ನೀಸಾ, ಸೋದರ ಇಮ್ರಾನ್‌ ಹಾಗೂ ಸ್ನೇಹಿತ ಮುದಾಫಿರ್‌ ಎಂಬು­ವರನ್ನು 2012ರಲ್ಲಿ ಛತ್ತೀ­ಸಘಡದಲ್ಲಿ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಈ ಪೈಕಿ ಅನ್ವರ್‌ ಮತ್ತು ಮೆಹರುನ್ನೀಸಾ ಜಾಮೀ­ನಿನ ಮೇಲೆ ಹೊರಬಂದಿದ್ದರು. ಆರೋಪಿ ಇರ್ಫಾನ್‌ನ ಶಿಕ್ಷೆಯ ಪ್ರಮಾ­­ಣವನ್ನು ನ್ಯಾಯಾಧೀಶರು ಗುರು­ವಾರಕ್ಕೆ ಕಾಯ್ದಿರಿಸಿದ್ದರು. ಹೀಗಾಗಿ ಪೊಲೀಸರು ಗುರುವಾರ ಸಂಜೆ ಆತನನ್ನು ನ್ಯಾಯಾಲಯಕ್ಕೆ ಕರೆತಂ­ದಿದ್ದರು.



ಈ ಸಂದರ್ಭದಲ್ಲಿ ಸಾಕ್ಷ್ಯ ಹೇಳಲು ನ್ಯಾಯಾಲಯಕ್ಕೆ ಬಂದಿದ್ದ ಪ್ರತ್ಯಕ್ಷದ­ರ್ಶಿಗಳನ್ನು ಕಂಡು ಆತ ವಿಚಲಿತನಾದ. ಕೂಡಲೇ ಜೇಬಿನಿಂದ ಬ್ಲೇಡ್‌ ತೆಗೆದು ಕುತ್ತಿಗೆ ಕೊಯ್ದುಕೊಂಡ. ಸ್ಥಳದಲ್ಲಿದ್ದ ಸಿಬ್ಬಂದಿ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದರು.



ಆತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ 34 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿ­ದ್ದಾರೆ. ಈ ಸಂಬಂಧ ಹಲಸೂರು ಗೇಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ಬಂಧನ: ಪ್ರತಿಷ್ಠಿತ ಕಂಪೆನಿಗಳ ಹೆಸ­ರಿನಲ್ಲಿ ನಕಲಿ ಮೊಬೈಲ್‌ಗಳನ್ನು ಮಾರು­ತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿದ ನಗರದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಎಂಟು ಮಂದಿಯನ್ನು ಬಂಧಿಸಿ ` 30 ಲಕ್ಷ ಮೌಲ್ಯದ ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ. ಕಬ್ಬನ್‌ಪೇಟೆಯ ಗೋವಿ­­ಂದ­ರಾಮ್‌ (28), ಅರ್ಜುನ್‌­ಕುಮಾರ್‌ (21), ವಿಮಲ್ (28), ಕಿಲಾರಿ ರಸ್ತೆಯ ರಾಜಾರಾಂ (26), ಮಲ್ಲೇಶ್ವರದ ಇಸ್ಮಾಯಿಲ್ (26), ಓಕಳಿಪುರದ ಸುರೇಶ್‌ (19), ಹರಿ­ಸಿಂಗ್ (33) ಮತ್ತು ಕಾಮಾಕ್ಷಿಪಾಳ್ಯದ ಸಿದ್ದಯ್ಯ (41) ಬಂಧಿತರು.



ಗಾಂಧಿನಗರದ ಎಸ್‌.ಎನ್‌.­ಬಜಾ­ರ್‌ನಲ್ಲಿ ಮತ್ತು ಎಸ್‌.ಸಿ.­ರಸ್ತೆಯಲ್ಲಿ ಮೊಬೈಲ್‌ ಅಂಗಡಿಗಳನ್ನು ಇಟ್ಟು­ಕೊಂ­ಡಿದ್ದ ಆರೋಪಿಗಳು ಪ್ರತಿಷ್ಠಿತ ಕಂಪೆನಿಗಳ ಹೆಸರಿನಲ್ಲಿ ನಕಲಿ ಮೊಬೈ­ಲ್‌ಗಳು ಹಾಗೂ ಬಿಡಿ ಭಾಗಗಳನ್ನು ಮಾರುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿ ಅಂಗಡಿಗಳ ಮೇಲೆ ದಾಳಿ ನಡೆಸಿ ಅವರನ್ನು ಬಂಧಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry