ಗುರುವಾರ , ಫೆಬ್ರವರಿ 25, 2021
29 °C
ಮೆಜೆಸ್ಟಿಕ್‌ನ ಬಿಎಂಟಿಸಿ ಬಸ್‌ ನಿಲ್ದಾಣದಲ್ಲಿ ಘಟನೆ

ವಿಚಾರಣಾಧೀನ ಕೈದಿ 3ನೇ ಸಲವೂ ಪರಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಚಾರಣಾಧೀನ ಕೈದಿ 3ನೇ ಸಲವೂ ಪರಾರಿ

ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹದ ವಿಚಾರಣಾಧೀನ ಕೈದಿ ಕಿರಣ್ (29) ಎಂಬಾತ ಬೆಂಗಾವಲು ಸಿಬ್ಬಂದಿ ಕಣ್ತಪ್ಪಿಸಿ, ಕೈಕೋಳ ಸಮೇತ ಪರಾರಿಯಾಗಿರುವ ಘಟನೆ ಮೆಜೆಸ್ಟಿಕ್‌ನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಶುಕ್ರವಾರ  ರಾತ್ರಿ ನಡೆದಿದೆ.ಕೊಲೆ, ದರೋಡೆ ಹಾಗೂ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಈತ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಈ ರೀತಿ ತಪ್ಪಿಸಿಕೊಂಡಿರುವುದು ಮೂರನೇ ಬಾರಿ. ಹಾಸನ ಜಿಲ್ಲೆಯ ಹಂಗರಹಳ್ಳಿಯವನಾದ ಕಿರಣ್‌ನನ್ನು, ಕಳ್ಳತನ ಪ್ರಕರಣವೊಂದರ ವಿಚಾರಣೆಗಾಗಿ ಇಬ್ಬರು ಬೆಂಗಾವಲು ಸಿಬ್ಬಂದಿ ತಿಪಟೂರಿನ ನ್ಯಾಯಾಲಯಕ್ಕೆ ಮಧ್ಯಾಹ್ನ ಹಾಜರುಪಡಿಸಿ ವಾಪಸ್ ನಗರಕ್ಕೆ ಕರೆದುಕೊಂಡು ಬರುತ್ತಿದ್ದರು.ರಾತ್ರಿ 9ರ ಸುಮಾರಿಗೆ ಕೈದಿ ಸಮೇತ ಸಿಬ್ಬಂದಿ ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಂದಿಳಿದಿದ್ದರು. ನಂತರ ಬಿಎಂಟಿಸಿ ಬಸ್‌ ನಿಲ್ದಾಣಕ್ಕೆ ಬಂದು ಪರಪ್ಪನ ಅಗ್ರಹಾರ ಮಾರ್ಗದ ಬಸ್ ಹತ್ತುವಾಗ, ಕಿರಣ್ ಬೆಂಗಾವಲು ಸಿಬ್ಬಂದಿಯ ಕಣ್ತಪ್ಪಿಸಿ ಜನಸಂದಣಿ ಮಧ್ಯೆ ತಪ್ಪಿಸಿಕೊಂಡಿದ್ದಾನೆ. ಸಿಬ್ಬಂದಿ ಆತನ ಬೆನ್ನತ್ತಿ, ನಿಲ್ದಾಣದ ಸುತ್ತುಮತ್ತ ಹುಡುಕಾಡಿದರೂ ಪತ್ತೆಯಾಗಿಲ್ಲ. ಘಟನೆ ಸಂಬಂಧ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪತ್ತೆ ಕಾರ್ಯ ಮುಂದುವರೆದಿದೆ ಎಂದು ಉಪ್ಪಾರಪೇಟೆ ಠಾಣೆ ಪೊಲೀಸರು ತಿಳಿಸಿದರು.ಹಿಂದೆಯೂ ತಪ್ಪಿಸಿಕೊಂಡಿದ್ದ: ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರಣ್‌ನನ್ನು 2014ರಲ್ಲಿ ಅರಸಿಕೆರೆಯ ಕೋರ್ಟ್‌ಗೆ ಹಾಜರುಪಡಿಸಿ ಕರೆತರುವಾಗ ಮಾರ್ಗ ಮಧ್ಯೆ ಸಿಬ್ಬಂದಿಯ ಗಮನವನ್ನು ಬೇರೆಡೆ ಸೆಳೆದು ತಪ್ಪಿಸಿಕೊಂಡಿದ್ದ. ನಂತರ ಗಂಡಸಿ ಠಾಣೆ ಪೊಲೀಸರು ಮತ್ತೆ ಬಂಧಿಸಿದ್ದರು.

ಅಲ್ಲದೆ, ಇದೇ ವರ್ಷ ತಿಪಟೂರಿಗೆ ಕರೆದೊಯ್ದಿದ್ದಾಗಲೂ ಬಸ್ ನಿಲ್ದಾಣದಿಂದ ಪರಾರಿಯಾಗಿದ್ದ ಈತನನ್ನು, ತಿಪಟೂರು ಪೊಲೀಸರು ಬಂಧಿಸಿ ಜೈಲು ಸಿಬ್ಬಂದಿಗೆ ಒಪ್ಪಿಸಿದ್ದರು.ಅಪರಾಧವನ್ನೇ ವೃತ್ತಿಯಾಗಿಸಿಕೊಂಡಿದ್ದ ಕಿರಣ್, 2014ರಲ್ಲಿ ಆಡುಗೋಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ದರೋಡೆ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.