ಶುಕ್ರವಾರ, ಏಪ್ರಿಲ್ 23, 2021
31 °C

ವಿಚಾರ ಸಂಕಿರಣದಲ್ಲಿ ರಾಜಧಾನಿ ಕೂಗು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ದಾವಣಗೆರೆಯನ್ನು 2ನೇ ರಾಜಧಾನಿಯನ್ನಾಗಿ ಮಾಡಬೇಕು. ಸರ್ಕಾರಿ ಕಚೇರಿಗಳ ವಿಕೇಂದ್ರೀಕರಣವಾಗಬೇಕು. ಬೇಡಿಕೆ ಈಡೇರದಿದ್ದರೆ ಅಂತಿಮವಾಗಿ ದೊಡ್ಡಮಟ್ಟದ ಹೋರಾಟ ಕೈಗೊಳ್ಳುವುದು...ಜಿಲ್ಲಾ ಅಭಿವೃದ್ಧಿ ಸಲಹಾ ಸಮಿತಿ, ಜನಪರ ಸಂಘಟನೆಗಳ ಆಶ್ರಯದಲ್ಲಿ ನಗರದಲ್ಲಿ ಬುಧವಾರ ‘ದಾವಣಗೆರೆಯನ್ನು 2ನೇ ರಾಜಧಾನಿ ಮಾಡಬೇಕು’ ಎನ್ನುವ ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಕೈಗೊಂಡ ನಿರ್ಣಯಗಳಿವು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಅಧ್ಯಕ್ಷ ಎಂ.ಎಸ್.ಕೆ. ಶಾಸ್ತ್ರಿ ಮಾತನಾಡಿ, ಮುಂಬರುವ ದಿನಗಳಲ್ಲಿ ಐದಾರು ಸಭೆಗಳನ್ನು ನಡೆಸಲಾಗುವುದು, ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲಾಗುವುದು ಎಂದು ತಿಳಿಸಿದರು.ಬೆಳಗಾವಿಯನ್ನು 2ನೇ ರಾಜಧಾನಿ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದ್ದರೆ ಅದಕ್ಕೆ ತಮ್ಮ ವಿರೋಧವಿಲ್ಲ. ಆದರೆ ದಾವಣಗೆರೆಗೆ ಮಾತ್ರ ರಾಜಧಾನಿಯ ಸ್ಥಾನಮಾನ ನೀಡಲೇಬೇಕು. ಭೌಗೋಳಿಕವಾಗಿ ಮಧ್ಯಭಾಗದಲ್ಲಿದೆ. ಸಂಪರ್ಕ ವ್ಯವಸ್ಥೆ ಉತ್ತಮವಾಗಿದೆ ಎಂದು ಅಭಿಪ್ರಾಯಪಟ್ಟರು.ಮುಂದಿನ ದಿನಗಳಲ್ಲಿ ಎಲ್ಲ ಸಮುದಾಯದ ಮಠಾಧೀಶರ ನೆರವನ್ನೂ ಪಡೆದು ದೊಡ್ಡ ಪ್ರಮಾಣದ ಹೋರಾಟಕ್ಕೆ ಕೈಹಾಕಲಾಗುವುದು. ಈ ಭಾಗದ ಶಾಸಕರು, ಸಂಸದರು, ಮೇಯರ್ ಸೇರಿದಂತೆ ಜನಪ್ರತಿನಿಧಿಗಳೆಲ್ಲ ಈ ಪ್ರಯತ್ನಕ್ಕೆ ಕೈಜೋಡಿಸಬೇಕು ಎಂದು ಆಗ್ರಹಿಸಿದರು.ಮಾನವ ಹಕ್ಕುಗಳ ವೇದಿಕೆಯ ಅಧ್ಯಕ್ಷ ಪ್ರೊ.ಎಸ್.ಎಚ್. ಪಟೇಲ್ ಮಾತನಾಡಿ, ರಾಜಧಾನಿಯ ಬೇಡಿಕೆ ಇಡುವ ಮುಂಚಿತವಾಗಿ, ವಿಷಯದ ಎಲ್ಲ ಮಗ್ಗಲುಗಳನ್ನೂ ಅವಲೋಕಿಸಬೇಕು. ರಾಜಧಾನಿ ಆಗದೇ ಹೋದರೂ ದಾವಣಗೆರೆಗೆ ಸಿಗಬೇಕಾದ ಸ್ಥಾನಮಾನ ಸಿಗುವ ನಿಟ್ಟಿನಲ್ಲಿ ಪ್ರಯತ್ನವಾಗಬೇಕು ಎಂದು ಸಲಹೆ ನೀಡಿದರು.ಶಿಕ್ಷಣ ಸಂಸ್ಥೆಗಳು ಬೆಳೆಯಬೇಕು. ಕೈಗಾರಿಕೆ ಹೆಚ್ಚಬೇಕು. ರೈತರ ಹಿತವನ್ನೂ ಗಮನದಲ್ಲಿರಿಸಬೇಕು. ಜನಸಾಮಾನ್ಯರ ಆದಾಯ, ಉದ್ಯೋಗಾವಕಾಶ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಮುಂದೆ ಸಮಗ್ರ ಬೇಡಿಕೆಗಳನ್ನು ಇಡಬೇಕು. ರೈತರು, ಕೈಗಾರಿಕೋದ್ಯಮಿಗಳು, ಜನಪ್ರತಿನಿಧಿಗಳು, ಸಮಾಜದ ವಿವಿಧ ವರ್ಗದವರನ್ನೂ ಒಗ್ಗೂಡಿಸಿ ಪ್ರಯತ್ನಿಸಬೇಕು ಎಂದು ಹೇಳಿದರು.ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕಾಸಲ್ ಎಸ್. ವಿಠ್ಠಲ್ ಮಾತನಾಡಿ, 2ನೇ ರಾಜಧಾನಿಯಾಗುವ ಬೇಡಿಕೆ ಸೂಕ್ತವಾಗಿದ್ದು ತಮ್ಮ ಸಂಸ್ಥೆಯ ಬೆಂಬಲವಿದೆ ಎಂದು ಪ್ರಕಟಿಸಿದರು.ರಾಜ್ಯ ರೈತಸಂಘದ ಕಾರ್ಯದರ್ಶಿ ಅರುಣ್ ಕುಮಾರ ಕುರುಡಿ ಮಾತನಾಡಿ, ಕೃಷಿ, ಪಶುಸಂಗೋಪನೆ, ಆರೋಗ್ಯ, ನೀರಾವರಿ ಮುಂತಾದ ಇಲಾಖೆಯ ರಾಜ್ಯಮಟ್ಟದ ಕಚೇರಿಗಳು ದಾವಣಗೆರೆಗೆ ಬರಬೇಕು ಎಂದರು. ಸಮಿತಿಯ ಮುಖಂಡ ಕೆ.ಜಿ. ಶರಣಪ್ಪ, ಕೆ.ಸಿ. ರಹಮತ್ ಉಲ್ಲಾ ಮಾತನಾಡಿದರು.ಮಾನವ ಹಕ್ಕುಗಳ ವೇದಿಕೆಯ ಮುಖಂಡ ಎಲ್.ಎಚ್. ಅರುಣ್ ಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಹನುಮಂತಪ್ಪ, ಅಸ್ಲಂ ಖಾನ್, ಮಹಮದ್ ಹಯಾತ್ ಉಲ್ಲಾ ಮುಂತಾದವರು ಅಭಿಪ್ರಾಯ ಹಂಚಿಕೊಂಡರು. ಬಿ.ಎಂ. ರವಿಕುಮಾರ್ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.