`ವಿಚಿತ್ರ' ಕನ್ನಡ ಹುಡುಗರು

7

`ವಿಚಿತ್ರ' ಕನ್ನಡ ಹುಡುಗರು

Published:
Updated:

`ಸಂಜೆಯಾಗುತ್ತಿದ್ದಂತೆ ಅಲ್ಲಿ ಇಲ್ಲಿ ಕೇಳುತ್ತಿದ್ದ ಬ್ಯಾಂಡ್ ಸಂಗೀತದ ಸದ್ದು ಗೊತ್ತೇ ಆಗದಂತೆ ಎದೆಯೊಳಗೆ ಸೇರಿಕೊಂಡಿತ್ತು. ಮಾಮೂಲಿ ಹುಡುಗರಂತೆ ಓಡಾಡಿಕೊಂಡಿದ್ದ ನಮಗೆ ಅದ್ಯಾವಾಗ ಸಂಗೀತದ ಗೀಳು ಹತ್ತಿಕೊಂಡಿತೋ ಗೊತ್ತೇ ಆಗಲಿಲ್ಲ. ಅಂದಿನಿಂದ ಇಂದಿನವರೆಗೂ ಹೃದಯದಲ್ಲಿ ಸಂಗೀತ ಸೋನೆ ತಂಪೆರೆಯುತ್ತಲೇ ಇದೆ. ಸಂಗೀತದ ಅಮಲು ಮತ್ತೇರಿದಷ್ಟೂ ಆನಂದ ಅಗಾಧ. ಹ್ಹಾಂ, ನಮ್ಮದು ಕನ್ನಡದ ತಂಡ...' ಹೀಗೆ ಒಂದೇ ಉಸಿರಿಸನಲ್ಲಿ ತಮ್ಮ ತಂಡದ ಸ್ವರೂಪ ಬಣ್ಣಿಸಿದವರು `ವಿಚಿತ್ರ' ಬ್ಯಾಂಡ್‌ನ ಸುಜಿತ್ ವೆಂಕಟರಾಮಯ್ಯ.ಸೃಜನ್ (ಸಾಹಿತ್ಯ ಮತ್ತು ಗಾಯನ), ಅಮಿತ್ (ಗಿಟಾರ್), ಋತ್ವಿ (ಬೇಸ್ ಗಿಟಾರ್), ಅಪೂರ್ವ್ (ಡ್ರಮ್ಸ) `ವಿಚಿತ್ರ' ಬ್ಯಾಂಡ್‌ನ ಸಾರಥಿಗಳು. ಈ ಪೈಕಿ ಅಪೂರ್ವ ಇನ್ನೂ ಶಾಲಾ ವಿದ್ಯಾರ್ಥಿ! ಅಪೂರ್ವ ನಮ್ಮ ಬ್ಯಾಂಡ್‌ನ ಪುಟ್ಟ ಗಿಫ್ಟ್ ಎಂದು ನಗುತ್ತಾರೆ ಸೃಜನ್.ಎಲ್ಲಿ ಹೋದರೂ ಇಂಗ್ಲಿಷ್ ಹಾಡುಗಳ ರಾಕ್ ಸಂಗೀತವೇ ಕಿವಿಗೆ ಅಪ್ಪಳಿಸುತ್ತಿದ್ದ ಸಂದರ್ಭದಲ್ಲಿ ಕನ್ನಡದಲ್ಲೇ ರಾಕ್ ಸಂಗೀತವನ್ನು ಉಣಬಡಿಸಬೇಕು ಎಂಬ ಉಮೇದು ಇವರದು. ಆದರೆ ಹತ್ತರಲ್ಲಿ ಹನ್ನೊಂದನೆಯವರಾಗಬಾರದು ಎಂಬ ಸವಾಲು. ಬ್ಯಾಂಡ್ ಕಟ್ಟುವ ಹುಮ್ಮಸ್ಸು ಬಂದಾಗಲೆಲ್ಲ ಈ ಗುಂಪು ಹಿಂದೇಟು ಹಾಕುವಂತಾಗಿದ್ದು ಇದೇ ಕಾರಣಕ್ಕೆ. ಅಂತೂಇಂತೂ ಬ್ಯಾಂಡ್ ಕಟ್ಟುವ ಕನಸು ನನಸಾದದ್ದು 2010ರಲ್ಲಿ. ಅಲ್ಲಿಂದೀಚೆ ತಂಡ ವಿರಮಿಸಿದ್ದೇ ಇಲ್ಲವಂತೆ.`ನನ್ನ ತಮ್ಮ ಅಮಿತ್ ಗಿಟಾರಿಸ್ಟ್. ನನಗೆ ಚಿಕ್ಕಂದಿನಿಂದಲೂ ಪದ್ಯ, ಕವನ ಬರೆಯುವ ಹುಮ್ಮಸ್ಸು. ಕೊಠಡಿಯಲ್ಲಿ ಸುಮ್ಮನೆ ಕೂತು ಅಮಿತ್ ಗಿಟಾರ್ ನುಡಿಸುತ್ತಿದ್ದರೆ ನನಗೇ ಗೊತ್ತಿಲ್ಲದಂತೆ ಕವನದ ಸಾಲುಗಳು ಜೊತೆಯಾಗುತ್ತಿದ್ದವು. ಬಹುಶಃ ಅಲ್ಲಿಂದಲೇ ನಮ್ಮ ಬ್ಯಾಂಡ್‌ನ ಕನಸು ಚಿಗುರಿದ್ದು. ಬ್ಯಾಂಡ್ ಹಾಡುಗಳನ್ನು ಕೇಳಲು ಹೋಗುತ್ತಿದ್ದಾಗ ನಮ್ಮದೇ ಅಭಿರುಚಿ ಇರುವ ಇಬ್ಬರು ಪರಿಚಿತರಾದರು. ಆ ನಿರಂತರ ಸ್ನೇಹ ನಮ್ಮ ಬ್ಯಾಂಡ್‌ಗೆ ನಾಂದಿಯಾಯಿತು' ಎಂದು ಸಿಂಹಾವಲೋಕನ ಮಾಡುತ್ತಾರೆ ಸೃಜನ್.ಒಬ್ಬೊಬ್ಬರದ್ದೂ ಒಂದೊಂದು ದಾರಿ. ಆದರೆ ಸಂಗೀತ ಇವರೆಲ್ಲರನ್ನೂ ಒಂದುಗೂಡಿಸಿದೆ. ಸಾಫ್ಟ್‌ವೇರ್ ಎಂಜಿನಿಯರ್ ಸೃಜನ್, ಗ್ರಾಫಿಕ್ ಡಿಸೈನರ್ ಅಮಿತ್, 10ನೇ ತರಗತಿ ವಿದ್ಯಾರ್ಥಿ ಅಪೂರ್ವ, ದ್ವಿತೀಯ ಪಿಯುಸಿ ವಿದ್ಯಾರ್ಥಿ ಋತ್ವಿ ಈ ತಂಡದ ಸದಸ್ಯರು.`ವಾರಾಂತ್ಯ ಬಂದರೆ ಸಾಕು ಶಾಲೆ, ಕಾಲೇಜು, ಕೆಲಸ ಎಲ್ಲಕ್ಕೂ ತಾತ್ಕಾಲಿಕ ಬ್ರೇಕ್. ಅಪೂರ್ವ ಮನೆಯೇ ನಮ್ಮೆಲ್ಲರ ಅಡ್ಡಾ. ಒಂದಷ್ಟು ಚಿಂತನೆ, ಒಂದಷ್ಟು ಮೋಜು, ಸಾಕಷ್ಟು ಸಂಗೀತವನ್ನು ಹಂಚಿಕೊಳ್ಳುವ ನಮಗೆ ರಜಾ ದಿನಗಳು ಬಂತೆಂದರೆ ಸಖತ್ ಖುಷಿ. ನಮ್ಮೆಲ್ಲರಿಗೂ ಸಂಗೀತವೇ ಉಸಿರು. ಪ್ರತಿ ಮನೆಯಲ್ಲೂ ಇದ್ದಂತೆ ನಮ್ಮ ಮನೆಗಳಲ್ಲೂ ಮೊದಲು ವಿರೋಧವಿತ್ತು. ಆದರೆ ನಂತರ ಅವರೇ ನಮಗೆ ಬೆಂಬಲವಾಗಿ ನಿಂತರು' ಎಂದು ಋತ್ವಿ ನೆನಪಿಸಿಕೊಳ್ಳುತ್ತಾರೆ.`ನಮ್ಮ ಮೊದಲ ಶೋ ನಡೆದದ್ದು ಜೈನ್ ಕಾಲೇಜಿನಲ್ಲಿ. ಬ್ಯಾಂಡ್ ಎಂದರೆ ಇಂಗ್ಲಿಷ್ ಹಾಡುಗಳು ಎಂದು ನಿರೀಕ್ಷಿಸಿದ್ದ ಮಂದಿ ಇದ್ದಕ್ಕಿಂದ್ದಂತೆ ಕನ್ನಡ ಹಾಡು ಕೇಳಿ ಕುಣಿದು ಕುಪ್ಪಳಿಸಿದರು. ಅದೇ ನಮ್ಮ ಕನ್ನಡದ ಕನಸಿಗೆ ನೀರೆರೆದಿದ್ದು. ಬೇರೆಯವರ ಹಾಡಿಗೆ ನಮ್ಮ ಸಂಗೀತ ಸೇರಿಸುವುದರಲ್ಲಿ ಹೆಚ್ಚುಗಾರಿಕೆಯಿಲ್ಲ. ಅದೇ ಕಾರಣಕ್ಕೆ ಮೊದಲು `ಬೋಧನೆ' ಎಂಬ ಭಕ್ತಿಗೀತೆ ರಚಿಸಿ ಕೈರೊ ರೆಸ್ಟೊರೆಂಟ್‌ನಲ್ಲಿ ಶೋ ನೀಡಿದೆವು. ಅನೇಕರು ಪ್ರಶಂಸಿಸಿದರು. ಆ ಪ್ರಶಂಸೆ ಪ್ರಶಸ್ತಿಗೂ ಮೀರಿದ್ದು' ಎಂದು ಕಣ್ಣರಳಿಸುತ್ತಾರೆ ಈ ಹುಡುಗರು.ಪ್ರೀತಿ, ಪ್ರೇಮ, ವೈರಾಗ್ಯ ಕೇಂದ್ರಿತವಾದ ಹಾಡುಗಳು ಎಲ್ಲಾ ಕಡೆ ಸಿಗುತ್ತವೆ. ತಾವೂ ಅದೇ ಹಾದಿಯಲ್ಲಿ ಹೋಗಬಾರದು ಎಂದುಕೊಂಡು ಜೀವನದ ಕತ್ತಲನ್ನು ವಸ್ತುವಾಗಿಸಿಕೊಂಡು ಗೀತಸಾಹಿತ್ಯ ರಚಿಸುವುದು ಪ್ರಾರಂಭಿಸಿದರಂತೆ. ಗ್ರಾಮೀಣ ಭಾರತದ ರೈತರ ಸಂಕಷ್ಟ, ಅಧ್ಯಾತ್ಮ ಇವರ ಹಾಡಿಗೆ ವಸ್ತುವಾಗಿರುವುದು ವಿಶೇಷ. ಬೋಧನೆ, ಗಣೇಶ ಬಂದ, ಕಣ್ಣಾಮುಚ್ಚಾಲೆಯಂತಹ ಗೀತೆಗಳನ್ನು ರಚಿಸಿ ತಾವೇ ಸಂಗೀತ ಸಂಯೋಜಿಸಿದ್ದಾರೆ.`ಸಂಗೀತ ಶುಷ್ಕವಾಗಿರಬಾರದು. ಅದನ್ನು ಕೇಳಿಗರೂ ಅನುಭವಿಸುವಂತೆ ಮಾಡಿ ಗೆಲ್ಲಬೇಕು' ಎಂಬ ಧ್ಯೇಯವಿರುವ ಈ ತಂಡಕ್ಕೆ ತಮ್ಮದೇ ಕನ್ನಡ ಆಲ್ಬಂ ತರುವುದು ಹೆಬ್ಬಯಕೆ.`ವಿಚಿತ್ರ ಎಂದರೆ ಕುತೂಹಲದ ಗೂಡು. ನಮ್ಮ ಸಂಗೀತ ಪ್ರತಿ ಸಲ ಕುತೂಹಲಗಳನ್ನು ಹೊತ್ತು ತರುತ್ತದೆ, ನೋಡುತ್ತಿರಿ' ಎನ್ನುವ ಈ ಹುಡುಗರಲ್ಲಿ ಉತ್ಸಾಹದ ಬನಿಯಂತೂ ಇದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry