ಸೋಮವಾರ, ಮೇ 17, 2021
21 °C

ವಿಚಿತ್ರ, ವ್ಯರ್ಥ, ಹಾಸ್ಯಾಸ್ಪ ಆವಿಷ್ಕಾರಗಳು...

ಅಮಿತ್ ಎಂ.ಎಸ್. Updated:

ಅಕ್ಷರ ಗಾತ್ರ : | |

ಫುಡ್ ಕೂಲರ್!

ಮಾಡಿದ ಅಡುಗೆ ಬಿಸಿ ಬಿಸಿ ತಿಂದಾಗಲೇ ಅದರ ರುಚಿ ನಾಲಿಗೆಗೆ ಎಟುಕುವುದು. ಇನ್ನು ಶೀತಲಪೆಟ್ಟಿಗೆಯಲ್ಲಿಟ್ಟು ಕೊರೆಯುವಂತೆ ತಣ್ಣಗಾಗಿಸಿ ತಿನ್ನುವ ಆಹಾರಗಳೂ ಇವೆ. ಆದರೆ ಅತಿ ಬಿಸಿ ಇದ್ದ ಆಹಾರ ತಕ್ಷಣ ಬಾಯಿಗಿಟ್ಟುಕೊಂಡರೆ ನಾಲಿಗೆ ಸುಟ್ಟುಕೊಳ್ಳುವುದು ಖಚಿತ. ಮಕ್ಕಳಂತೂ ತಿನ್ನುವ ಆತುರದಲ್ಲಿ ಬಿಸಿ ಪದಾರ್ಥವನ್ನೇ ಬಾಯಿಗೆ ತುರುಕಿಕೊಂಡು ಸಂಕಟ ಪಡುವುದು ಮಾಮೂಲು.ಅದಕ್ಕೆ ಪರಿಹಾರ ಕಂಡುಹಿಡಿದಿರುವುದು ಅಮೆರಿಕದ ವಿಲಿಯಮ್ ಜೆ ಸ್ಟಾಕ್. ಎಂಥಹ ಪರಿಹಾರವೆನ್ನುತ್ತೀರಾ? ಅದು ಆಹಾರವನ್ನು ತಣ್ಣಗಾಗಿಸುವ ಫ್ಯಾನ್! ಚಿಕ್ಕದಾಗಿರುವ ಈ ಫ್ಯಾನ್ ವೇಗವನ್ನು ಅಗತ್ಯಕ್ಕೆ ಅನುಗುಣವಾಗಿ ಅಳವಡಿಸಬಹುದು.

 

ತುಂಬಾ ಬಿಸಿ ಇರುವ ಪದಾರ್ಥವನ್ನು ತಣಿಸುತ್ತಲೇ ತಿನ್ನಲು ಪ್ರಾರಂಭಿಸಬಹುದು! ನಮ್ಮವರಿಗೆ ಹಾಸ್ಯಾಸ್ಪದವಾಗಿ ಕಾಣಿಸುವ ಈ ಆವಿಷ್ಕಾರವನ್ನು ಬಾಯಿಸುಟ್ಟಿಕೊಳ್ಳುವ ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಿದ್ದೇನೆ ಎಂದಿದ್ದಾನೆ ಸ್ಟಾಕ್. ಪೇಟೆಂಟ್‌ಅನ್ನೂ ಪಡೆದಿರುವ ಈತನ ಸಂಶೋಧನೆಯ ಪ್ರತಿಫಲವಾದ ಫುಡ್ ಕೂಲರ್‌ಗೆ ಭಾರಿ ಬೇಡಿಕೆಯೂ ಇದೆಯಂತೆ!

 ಸೈಲೆಂಟ್ ಅಲಾರಾಂ!
ಬೆಳಗಿನ ಜಾವದಲ್ಲಿ ನಿದ್ರಾದೇವಿ ಮತ್ತಷ್ಟು ಬಿಗಿಯಾಗಿ ಅಪ್ಪಿಕೊಂಡಾಗಲೇ ಕರ್ಕಶ ಧ್ವನಿಯಲ್ಲಿ ಅಲಾರಾಂ ಅರಚುವ ಸದ್ದು ಎಂಥಹ ನಿದ್ರೆಯನ್ನೂ ಓಡಿಸುತ್ತದೆ. ನಿದ್ರಾಭಂಗ ಮಾಡುವ ಅಲಾರಾಂ ಸದ್ದಡಗಿಸಿ ನೆಮ್ಮದಿ ನೀಡುವ `ಸ್ನೂಜ್~ ನಿದ್ರಾಪ್ರೇಮಿಗಳ ಪ್ರಿಯಮಿತ್ರ.ಹಾಗೆಂದು ಅಲಾರಾಂಅನ್ನು ಸುಮ್ಮನಾಗಿಸಿ ಮತ್ತೆ ನಿದ್ರೆಗೆ ಶರಣಾಗಿ ತಡವಾಗಿ ಎದ್ದು ಬಳಿಕ ಗಡಿಬಿಡಿಯಲ್ಲಿ ಸಿದ್ಧರಾಗಿ ಮನೆಯಿಂದ ಹೊರಡುವ ಕಷ್ಟ ಎದುರಾಗುತ್ತಲೇ ಇರುತ್ತದೆ. ಹೀಗೆ ನಿದ್ರೆ ಮೊರೆ ಹೋಗುವವರನ್ನು ಸದ್ದು ಗದ್ದಲ ಮಾಡದೆಯೇ ಎಬ್ಬಿಸುವ ಅಲಾರಾಂ ಕೂಡ ಇದೆ.ಅದನ್ನು ಸುಮ್ಮನಾಗಿ ಮತ್ತೆ ನಿದ್ರೆಗೆ ಜಾರಿಕೊಂಡರೂ ಅದು ಬಿಡುವುದಿಲ್ಲ. ನಿಮ್ಮನ್ನು ಅಲುಗಾಡಿಸಿ ಸುಪ್ತಾವಸ್ಥೆಯಿಂದ ಎಚ್ಚರಗೊಳ್ಳುವವರೆಗೂ ಅದು ಬಿಡುವುದಿಲ್ಲ. ಕಡಗದಂತಿರುವ ತಂತಿ ರಹಿತ ಈ ರಬ್ಬರ್ ಯಂತ್ರಕ್ಕೆ ಅಲಾರಾಂ ಸಮಯ ಅಳವಡಿಸಿಕೊಂಡು ಕೈಗೆ ಕಟ್ಟಿಕೊಂಡು ಮಲಗಿದರಾಯಿತು. ಏಳಬೇಕೆಂದುಕೊಂಡ ಸಮಯಕ್ಕೆ ಅದು ನಿಮ್ಮನ್ನು ಅಲುಗಾಡಿಸತೊಡಗುತ್ತದೆ!

 

ಸ್ವಲ್ಪವೂ ಸದ್ದು ಮಾಡದೆ ವೈಬ್ರೇಷನ್ ಮೂಲಕ ಎಚ್ಚರಗೊಳಿಸುವ ಈ ಯಂತ್ರವನ್ನು `ಸ್ನೂಜ್~ಗೊಳಿಸಲು ಒಮ್ಮೆ ಕೈ ಕೊಡವಿದರೆ ಸಾಕು. ಸ್ವಲ್ಪ ಸಮಯದ ಬಳಿಕ ಮತ್ತೆ ವೈಬ್ರೇಷನ್ ಶುರುವಾಗುತ್ತದೆ. ಪದೇ ಪದೇ ಸ್ನೂಜ್ ಮಾಡಲು ಹೆಚ್ಚು ಹೆಚ್ಚು ಕೈಕೊಡವಬೇಕಾಗುತ್ತದೆ. ಹೀಗೆ ಮಾಡಿದಂತೆ ನಿದ್ರೆ ಸಂಪೂರ್ಣ ಹಾರಿಹೋಗುತ್ತದೆ. ನೀವು ಏಳಲೇಬೇಕಾಗುತ್ತದೆ!

ಫಾರ್ಮ್‌ವಿಲ್ಲೆ
ಫೇಸ್‌ಬುಕ್ ಬಳಕೆದಾರರಿಗೆ ಇದೊಂದು ಹೆಸರು ಚಿರಪರಿಚಿತ. ಗೆಳೆಯರೊಬ್ಬರ ಆಹ್ವಾನದ ನೆಪದಲ್ಲಿ ಫೇಸ್‌ಬುಕ್ ಅಪ್ಲಿಕೇಷನ್‌ಗೆ ಆಗಮಿಸುವ ಅತಿಥಿ ಇದು. ಇದರ ಹೆಸರು `ಫಾರ್ಮ್‌ವಿಲ್ಲೆ~. ಬಹುತೇಕ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿಯೂ ಇಣುಕುವ ವ್ಯರ್ಥ ಕಾಲಹರಣದ ಆಟ ಎಂಬ ಕುಖ್ಯಾತಿಯೂ ಇದಕ್ಕಿದೆ.

 

ಲಕ್ಷಾಂತರ ಫೇಸ್‌ಬುಕ್ ಬಳಕೆದಾರರು ಈ ಆಟದ ವ್ಯಸನಿಗಳಾಗಿದ್ದಾರೆ! ಭೂಮಿಯಲ್ಲಿ ಉತ್ತು ಬಿತ್ತು ಗೊತ್ತಿಲ್ಲದ ಜನರು ಸಹ ಕಂಪ್ಯೂಟರ್‌ನಲ್ಲಿ `ಡಿಜಿಟಲ್ ಬೆಳೆ~ ಬೆಳೆಯುವ ಆಟವಿದು! ಕೈ ಮತ್ತು ಕಣ್ಣಿಗೆ ಪುರುಸೊತ್ತು ಕೊಡದಂತೆ ಎಡಬಿಡದೆ ಮೌಸ್ ಬಟನ್ ಒತ್ತುತ್ತಾ ಗಿಡನೆಟ್ಟು ಬೆಳೆ ಬೆಳೆಯುವ ಈ ಆಟ ಮುಗಿಯುವುದೇ ಇಲ್ಲವಂತೆ.

 

2009ರಲ್ಲಿ ಜನ್ಮತಾಳಿದ ಫಾರ್ಮ್‌ವಿಲ್ಲೆ ಈಗಿನ ಅತ್ಯಂತ ಜನಪ್ರಿಯ ಅಂತರ್ಜಾಲ ಆಟಗಳಲ್ಲೊಂದು. ಫಾರ್ಮ್‌ವಿಲ್ಲೆಯ ಈ ಜನಪ್ರಿಯತೆಯ ಬೆನ್ನಲ್ಲೇ ಈ ಆಟವನ್ನೇ ಆಧಾರವಾಗಿಟ್ಟುಕೊಂಡು ಹಾಲಿವುಡ್‌ನಲ್ಲಿ ಸಿನಿಮಾವೊಂದನ್ನೂ ತಯಾರಿಸಲು ಮುಂದಾಗಿದ್ದಾರಂತೆ.

ಫೋನ್ ಫಿಂಗರ್ಸ್
ಈಗ ಎಲ್ಲರ ಕಿಸೆಯಲ್ಲೂ ಮೊಬೈಲ್‌ಫೋನ್ ಇದ್ದೇ ಇರುತ್ತದೆ. ಬೆರಳಿನ ತುದಿ ಸ್ಪರ್ಶಿಸಿ ಬಳಸುವ ಟಚ್ ಸ್ಕ್ರೀನ್ ಮೊಬೈಲ್ ಫೋನ್‌ಗಳಿಗೂ ಬಹು ಬೇಡಿಕೆ. ಬೆರಳಿನಿಂದ ಮುಟ್ಟಿದರೆ ಬೆರಳಚ್ಚು ಸ್ಕ್ರೀನ್ ಮೇಲೆ ಮೂಡುತ್ತದೆ. ಕೊಳೆಯಾಗಿದ್ದರಂತೂ ಅದನ್ನು ಒರೆಸಿ ಶುದ್ಧಪಡಿಸುವುದಕ್ಕೂ ಒದ್ದಾಡಬೇಕು. ಇಂತಹ ಕಿರಿಕಿರಿಗಳನ್ನು ತಪ್ಪಿಸಲು ಆಸ್ಟ್ರೇಲಿಯಾದ ಕಂಪೆನಿಯೊಂದು ಐಫೋನ್‌ಗಳಿಗಾಗಿ ಫೋನ್ ಫಿಂಗರ್ಸ್‌ಗಳನ್ನು ತಯಾರಿಸಿದೆ.

 

ಸಣ್ಣ ಚೀಲದಂತಿರುವ ಇದರೊಳಗೆ ಬೆರಳನ್ನು ತೂರಿಸಿದರಾಯಿತು. ಮೂರು ಬಣ್ಣಗಳಲ್ಲಿ ಸಿಗುವ ಈ ಕೃತಕ ಬೆರಳುಗಳನ್ನು ಬೇಕಾದಾಗ ಹಾಕಿಕೊಂಡು, ಬೇಡವೆನಿಸಿದಾಗ ತೆಗೆದುಹಾಕುವ ಉಸಾಬರಿ ಸ್ವಲ್ಪ ಕಷ್ಟವೇ. ಈ ಚೀಲಗಳನ್ನು ಬೆರಳಿಗೆ ತೊಡಿಸಿಕೊಂಡು ಬಳಿಕ ಫೋನ್ ಮೇಲೆ ಕೈಯಾಡಿಸುವ ಸಾವಧಾನವಿದ್ದವರಿಗೆ ಮಾತ್ರ ಇದು ಅನುಕೂಲಕರವಾಗಬಲ್ಲದು.ಉಗುರಿಗೆ ಹಚ್ಚಿದ ಬಣ್ಣ ಕಾಣಿಸದೆ ಇದ್ದರೆ ನೀಳ ಬೆರಳಿನ ಹೆಂಗಳೆಯರಿಗೂ ಬೇಸರವಾಗುವುದಿಲ್ಲವೇ? ಹಾಗಿದ್ದೂ ಅದನ್ನು ತೊಟ್ಟುಕೊಳ್ಳುವ ಮನಸ್ಸುಳ್ಳವರಿಗೆ ಮ್ಯಾಚಿಂಗ್ ಬಣ್ಣಕ್ಕಾಗಿ ಎಲ್ಲಿ ಹುಡುಕುವುದು?

ಡಾಗ್‌ಗ್ಲಾಸ್
ಬೇಸಗೆಯ ರಣ ಬಿಸಿಲಿನಿಂದ ಕಣ್ಣಿಗೆ ರಕ್ಷಣೆ ಪಡೆಯಲು ಜನ ತಂಪು ಕನ್ನಡಕಗಳ ಮೊರೆ ಹೋಗುವುದು ಸಾಮಾನ್ಯ. ಮನುಷ್ಯರೇನೋ ಕಪ್ಪ ಕನ್ನಡಕ ಹಾಕಿಕೊಂಡು ಸೂರ್ಯನ ಸವಾಲಿಗೆ ಧೈರ್ಯವಾಗಿ ಮುಖಕೊಡುತ್ತಾರೆ. ಆದರೆ ಪ್ರಾಣಿಗಳು? ಮಾನವನ ಆಪ್ತಮಿತ್ರ ನಾಯಿಗಳಿಗೂ ಸೂರ್ಯ ಬೆವರಿಳಿಸುವುದಿಲ್ಲವೇ?ನಮಗಷ್ಟೇ ಅಲ್ಲ ಶ್ವಾನಗಳಿಗೂ ತಂಪು ಕನ್ನಡಕ ಬೇಕು ಎಂದು ಕೆನ್ ಮತ್ತು ರಾನಿ ಡಿ ಲುಲ್ಲೋ ಎಂಬಿಬ್ಬರಿಗೆ ಅನಿಸಿತು. ಅವರ ಮುದ್ದಿನ ನಾಯಿಯ ಕಣ್ಣಿನ ಶಕ್ತಿ ಬಿಸಿಲಿನ ಪ್ರಖರತೆಯಿಂದಾಗಿ ಕಡಿಮೆಯಾಗುತ್ತಿದೆ ಎಂಬುದು ಅವರ ಗಮನಕ್ಕೆ ಬಂದಿತು. ಅದರ ಪ್ರತಿಫಲವೇ ಡಾಗ್ಲೆಸ್ ಕಂಪೆನಿ.ನಾಯಿಯ ಕಣ್ಣಿಗೆ ಹೊಂದಿಕೆಯಾಗುವಂತೆ ಮನುಷ್ಯನ ಸಾಮಾನ್ಯ ತಂಪು ಕನ್ನಡಕ ಮತ್ತು ಕ್ರೀಡೆಗಳ ಸಮಯದಲ್ಲಿ ಬಳಸುವ ತಂಪು ಕನ್ನಡಗಳನ್ನು ಬೆರೆಸಿ ಪ್ರಾಯೋಗಿಕವಾಗಿ ತಮ್ಮ ನಾಯಿಗೆ ಕನ್ನಡಕವೊಂದನ್ನು ಈ ಇಬ್ಬರು ತಯಾರಿಸಿದರು.ವಿಶ್ವದ ಅತ್ಯಂತ ನಿಷ್ಪ್ರಯೋಜಕ ಅನ್ವೇಷಣೆಗಳಲ್ಲಿ ಒಂದು ಎಂಬ ತೆಗಳಿಕೆ ಇದಕ್ಕೆ ಅಂಟಿಕೊಂಡರೂ ಈ ಕಂಪೆನಿ ಕೋಟ್ಯಂತರ ಡಾಲರ್ ಲಾಭ ಗಳಿಸಿತು.

16 ರಾಷ್ಟ್ರಗಳಲ್ಲಿ ಕಂಪೆನಿಯ ಶಾಖೆಗಳು ತೆರೆದುಕೊಂಡವು.

 

ಇರಾಕ್‌ನಲ್ಲಿ ಕೆಲಸ ಮಾಡಲು ತೆರಳಿದ ಅಮೆರಿಕ ಸೇನೆಯ ಶ್ವಾನಗಳಿಗೂ ತಂಪು ಕನ್ನಡಕ ತೊಡಿಸಲಾಗಿತ್ತು. ಫ್ಯಾಷನ್ ವಸ್ತುವಾಗಿ ಮಾರುಕಟ್ಟೆಯಲ್ಲಿ ಚಾಲ್ತಿಗೆ ಬಂದ ಈ ಕನ್ನಡಕಗಳು ನಾಯಿಗಳ ಕಣ್ಣುಗಳಿಗೆ ಹೆಚ್ಚಿನ ರಕ್ಷಣೆ ಒದಗಿಸಬಲ್ಲವು ಎಂಬ ವರದಿಗಳ ಹಿನ್ನೆಲೆಯಲ್ಲಿ ಹೆಚ್ಚಿನ ಬೇಡಿಕೆ ಗಿಟ್ಟಿಸಿಕೊಂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.