ಶುಕ್ರವಾರ, ಏಪ್ರಿಲ್ 16, 2021
31 °C

ವಿಜಯದೊಂದಿಗೆ ಹೊಸ ಋತುವಿನ ಆರಂಭ ನಿರೀಕ್ಷೆ: ಶ್ರೀಕಾಂತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): `ಈ ಕ್ರಿಕೆಟ್ ಋತುವಿನ ಮೊದಲ ಪ್ರವಾಸವು ವಿಜಯದೊಂದಿಗೆ ಆರಂಭವಾಗಬೇಕು. ಅದೇ ನಮ್ಮ ನಿರೀಕ್ಷೆಯಾಗಿದೆ~ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥ ಕೃಷ್ಣಮಾಚಾರಿ ಶ್ರೀಕಾಂತ್ ಹೇಳಿದ್ದಾರೆ.`ಲಭ್ಯವಿರುವ ಉತ್ತಮ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ತಂಡಕ್ಕೆ ಇದು ಈ ಋತುವಿನ ಮೊದಲ ವಿದೇಶ ಪ್ರವಾಸ. ಆದ್ದರಿಂದ ಸರಣಿ ವಿಜಯ ಸಾಧ್ಯವಾಗಬೇಕೆಂದು ಬಯಸುವುದು ಸಹಜ~ ಎಂದು ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.`ಸಚಿನ್ ತೆಂಡೂಲ್ಕರ್ ಈ ಪ್ರವಾಸಕ್ಕೆ ಲಭ್ಯವಾಗುತ್ತಿಲ್ಲ. ಆದರೆ ಅವರು ಭಾರತದಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಆಡುತ್ತಾರೆ~ ಎಂದ ಶ್ರೀಕಾಂತ್ `ಈಗ ಆಯ್ಕೆ ಮಾಡಿರುವ ತಂಡವು ಪ್ರಭಾವಿ ಬ್ಯಾಟಿಂಗ್ ಕ್ರಮಾಂಕವನ್ನು ಹೊಂದಿದೆ. ಬೌಲಿಂಗ್ ವಿಭಾಗದಲ್ಲಿಯೂ ಸಮರ್ಥರಿದ್ದಾರೆ. ಜಹೀರ್ ಖಾನ್ ಸೇರಿದಂತೆ ತಂಡದಲ್ಲಿರುವ ಎಲ್ಲ ಬೌಲರ್‌ಗಳೂ ಇತ್ತೀಚೆಗೆ ಒಳ್ಳೆಯ ಪ್ರದರ್ಶನ ನೀಡಿದ್ದಾರೆ~ ಎಂದು ವಿವರಿಸಿದರು.ಜುಲೈ 21ರಿಂದ ಆಗಸ್ಟ್ 7ರವರೆಗೆ ಶ್ರೀಲಂಕಾದಲ್ಲಿ ನಡೆಯಲಿರುವ ಏಕದಿನ ಸರಣಿ ಹಾಗೂ ಒಂದು ಟ್ವೆಂಟಿ-20 ಪಂದ್ಯಕ್ಕೆ ತಂಡವನ್ನು ಆಯ್ಕೆ ಮಾಡಿದ ನಂತರ ಮಾತನಾಡಿದ ಅವರು `ಸೆಪ್ಟೆಂಬರ್ 18ರಿಂದ ಅಕ್ಟೋಬರ್ 7ರವರೆಗೆ ಶ್ರೀಲಂಕಾದಲ್ಲಿಯೇ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ನಡೆಯಲಿದೆ.ಅದನ್ನು ಕೂಡ ಗಮನದಲ್ಲಿ ಇಟ್ಟುಕೊಂಡು ತಂಡವನ್ನು ರಚಿಸಲಾಗಿದೆ. ಅದರ ನಡುವೆ ನ್ಯೂಜಿಲೆಂಡ್ ವಿರುದ್ಧದ ಸರಣಿ ಇದೆ. ವರ್ಷದ ಕೊನೆಯಲ್ಲಿ ಇಂಗ್ಲೆಂಡ್ ಕೂಡ ಇಲ್ಲಿಗೆ ಬರಲಿದೆ. ಆದ್ದರಿಂದ ಸುದೀರ್ಘವಾದ ಕ್ರಿಕೆಟ್ ಕಾರ್ಯಕ್ರಮವಿದೆ. ಆದ್ದರಿಂದ ಲಂಕಾ ಸರಣಿಯೊಂದಿಗೆ ಯಶಸ್ಸಿನ ಓಟ ಆರಂಭವಾಗಬೇಕು~ ಎಂದು ಹೇಳಿದರು.`ಕೋಚ್ ಡಂಕನ್ ಫ್ಲೆಚರ್ ಜೊತೆಗೆ ಆಯ್ಕೆಗಾರರು ಮುಕ್ತ ಮನಸ್ಸಿನಿಂದ ಚರ್ಚೆ ಮಾಡಿದ್ದಾರೆ. ಕಳೆದ ಟೂರ್ನಿಯಲ್ಲಿ ಆದ ಕೆಲವು ತಪ್ಪುಗಳನ್ನು ಕೂಡ ತಿದ್ದುವ ಪ್ರಯತ್ನ ಮಾಡಲಾಗಿದೆ~ ಎಂದರು ಶ್ರೀಕಾಂತ್.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.