ಶನಿವಾರ, ಏಪ್ರಿಲ್ 17, 2021
33 °C

ವಿಜಯನಗರ ವೈಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯನಗರ ಸಾಮ್ರಾಜ್ಯ ದಕ್ಷಿಣ ಭಾರತದ ಸಾಂಸ್ಕೃತಿಕ ಇತಿಹಾಸವನ್ನು ಬದಲಿಸಿದ ಸಾಮ್ರಾಜ್ಯ. ಕ್ರಿ.ಶ. 1336ರಿಂದ ಕ್ರಿ.ಶ. 1684ರ ಅವಧಿಯಲ್ಲಿ ವಿಜಯನಗರದ ಅರಸರು ದಕ್ಷಿಣ ಭಾರತದಲ್ಲಿ ಆಳ್ವಿಕೆ ನಡೆಸಿದರು. ಈ ಅವಧಿಯಲ್ಲಿ ಏಕಮುಖಿ ಸಂಸ್ಕೃತಿಯ ಸಮಾಜ ಪ್ರಚಲಿತದಲ್ಲಿತ್ತೆಂದು ಸಾಮಾನ್ಯ ನಂಬಿಕೆ.ಆದರೆ, ಆ ಕಾಲದಲ್ಲಿ ದಕ್ಷಿಣ ಭಾರತದ ಸಮಾಜ ಬಹು ಸಂಸ್ಕೃತಿ, ಬಹು ಭಾಷಿಕರ ಸಮಾಜವಾಗಿತ್ತು ಎಂಬುದಕ್ಕೆ ಐತಿಹಾಸಿಕ ದಾಖಲೆಗಳು ಲಭ್ಯವಿವೆ. ವಿಜಯನಗರದ ಕಾಲಾವಧಿ ಒಂದು ಸಂಕ್ರಮಣ ಕಾಲವೂ ಹೌದು. ಈ ಅವಧಿಯಲ್ಲಿಯೇ ದೆಹಲಿಯಲ್ಲಿ ಮೊಘಲರು ಆಳ್ವಿಕೆಗೆ ಬಂದರು. 1498ರಲ್ಲಿ ಪೋರ್ಚುಗಲ್ ನಾವಿಕ ವಾಸ್ಕೋಡಿಗಾಮ ಮಲಬಾರ್ ಕರಾವಳಿ ಪ್ರವೇಶಿಸಿದ. ಆ ನಂತರ ದಕ್ಷಿಣ ಭಾರತದಲ್ಲಿ ಬೃಹತ್ ಆರ್ಥಿಕ ಸಮಾಜಿಕ ಬದಲಾವಣೆ ಕಾಣಿಸಿಕೊಂಡಿತು.ವಿಜಯನಗರವನ್ನು ಹಿಂದು ಅರಸರು ಆಳುತ್ತಿದ್ದಾಗಲೇ ಪಕ್ಕದಲ್ಲಿ ಬಹಮನಿ ಸುಲ್ತಾನರು ಆಳ್ವಿಕೆ ನಡೆಸುತ್ತಿದ್ದರು. ಬಿಜಾಪುರ, ಬೀದರ್‌ಗಳಲ್ಲಿ ಆದಿಲ್‌ಷಾಹಿ, ಕುತುಬ್‌ಷಾಹಿಗಳು ಆಳ್ವಿಕೆ ನಡೆಸುತ್ತಿದ್ದರು. ಇವೆಲ್ಲ ದಕ್ಷಿಣ ಭಾರತದ ಸಂಸ್ಕೃತಿಯ ಮೇಲೆ ಪರೋಕ್ಷ ಪರಿಣಾಮ ಬೀರಿತ್ತು.ಸೂಫಿಗಳು, ಶರಣರು, ದಾಸರು ಆ ಕಾಲದಲ್ಲಿ ಬದುಕಿದ್ದರು. ಪರ್ಷಿಯನ್, ಅರೇಬಿಕ್, ಕನ್ನಡ, ತೆಲುಗು, ಮರಾಠಿ, ತಮಿಳು ಮತ್ತು ಡಚ್ ಭಾಷೆಗಳಿಗೆ ಆ ಕಾಲದಲ್ಲಿ ಪ್ರೋತ್ಸಾಹ ನೀಡಲಾಗಿತ್ತು.ಇಂಥ ವಿಜಯನಗರ ಸಾಮ್ರಾಜ್ಯದ ಮೇಲೆ ಬೆಳಕು ಚೆಲ್ಲುತ್ತದೆ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತು ಏರ್ಪಡಿಸಿರುವ ‘ವಿಜಯನಗರ ಸಾಮ್ರಾಜ್ಯ ಕಾಲದ ಸಮಾಜ ಮತ್ತು ಸಂಸ್ಕೃತಿ’ ಕುರಿತ ಐತಿಹಾಸಿಕ ದಾಖಲೆಗಳ ಛಾಯಾಚಿತ್ರ ಪ್ರದರ್ಶನ.ಹಂಪಿ, ಬಿಜಾಪುರ, ಗುಲ್ಬರ್ಗ, ಬೀದರ್, ಅಹ್ಮದ್‌ನಗರ, ಗೋಲ್ಕೊಂಡ, ಚಿತ್ರದುರ್ಗ, ಉಚ್ಚಂಗಿದುರ್ಗ, ಮಂಗಳೂರು, ಬೆಂಗಳೂರು, ಮಧುರೈ, ತಿರುಚ್ಚಿ, ಕಣ್ಣೂರ ಇತ್ಯಾದಿ ಸ್ಥಳಗಳ ಐತಿಹಾಸಿಕ ಸ್ಮಾರಕಗಳ ಛಾಯಾಚಿತ್ರ, ರೇಖಾಚಿತ್ರ ಮತ್ತು ಹಳೆಯ ನಕ್ಷೆಯನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.ಒಟ್ಟು 140 ಚಿತ್ರಗಳು ಪ್ರದರ್ಶನದಲ್ಲಿದ್ದು ಇತಿಹಾಸ ಪ್ರಿಯರಿಗೆ, ಇತಿಹಾಸದ ವಿದ್ಯಾರ್ಥಿಗಳಿಗೆ ಆಕರ, ಮಾಹಿತಿ ಒದಗಿಸುವಂತಿದೆ. ಪ್ರದರ್ಶನ ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ತೆರೆದಿರುತ್ತದೆ. ಗುರುವಾರ ಮುಕ್ತಾಯ. ಸ್ಥಳ: ಐಸಿಎಚ್‌ಆರ್ ಕೇಂದ್ರ, ಹಳೆಯ ಕಾನೂನು ಕಾಲೇಜು ಆವರಣ, ಮೈಸೂರು ಬ್ಯಾಂಕ್ ವೃತ್ತ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.