ಬುಧವಾರ, ನವೆಂಬರ್ 20, 2019
27 °C

`ವಿಜಯ'ನಿಗೆ ಸುನಾದ ಸ್ವಾಗತ

Published:
Updated:
`ವಿಜಯ'ನಿಗೆ ಸುನಾದ ಸ್ವಾಗತ

ಅಂದು ಸಭಾಂಗಣದೊಳಗೆ ಹೊರಟ ಶ್ರೋತೃಗಳನ್ನು ಕಾರ್ಯಕ್ರಮದ ಆಯೋಜಕರು ಎಳ್ಳು-ಬೆಲ್ಲ, ಕಡಬು ಹಾಗೂ ಕಲ್ಲು ಸಕ್ಕರೆಯೊಂದಿಗೆ ಸ್ವಾಗತಿಸಿದ್ದರು. ಒಳಗೆ ಹೋದೊಡನೆ ಥಟ್ಟನೆ ಎಲ್ಲರನ್ನು ಸೆಳೆದದ್ದು ವೇದಿಕೆ ಅಲಂಕಾರ. ಮಾವು, ಬೇವು, ಮಲ್ಲಿಗೆ, ಕನಕಾಂಬರದ ಅಲಂಕಾರಗಳು ಒಂದೆಡೆಯಾದರೆ, ವೇದಿಕೆಯ ಗೋಡೆಯ ಮೇಲೆ ಜೋತು ಬಿಡಲಾಗಿದ್ದ ತಬಲಾ, ವಯಲಿನ್, ವೀಣೆ, ಸಿತಾರ್, ತಂಬೂರಿ ಹಾಗು ಮೃದಂಗಗಳು ಹಬ್ಬದ ವಾತಾವರಣವನ್ನು ಸೃಷ್ಟಿಸಿದ್ದವು.  ಇದು ಶ್ರಿ ವಿಜಯ ಸಂವತ್ಸರ ಯುಗಾದಿಯ ಪ್ರಯುಕ್ತ ಏಪ್ರಿಲ್ 9ರಂದು ಭಾರತೀಯ ಆಕಾಶವಾಣಿ, ಭಾರತೀಯ ವಿದ್ಯಾಭವನ ಹಾಗೂ ಅನನ್ಯ ಸಂಸ್ಥೆಗಳು ಜಂಟಿಯಾಗಿ `ಸಂಗೀತ ವಿಜಯ' ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದವು. ಭಾರತೀಯ ವಿದ್ಯಾಭವನದ ಖಿಂಚ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಇಬ್ಬರು ಕಲಾವಿದರ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ವೈಶಿಷ್ಟ್ಯವೆಂದರೆ ಇದೇ ಮೊದಲ ಬಾರಿಗೆ ಆಕಾಶವಾಣಿಯಲ್ಲಿ ಹೊರಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದನ್ನು ನೇರವಾಗಿ ಆಕಾಶವಾಣಿಯಲ್ಲಿ ಬಿತ್ತರಿಸಲಾಯಿತು.ಮೊದಲಿಗೆ ಆಕಾಶವಾಣಿಯ `ಎ' ಗ್ರೇಡ್ ಕಲಾವಿದೆಯಾದ ಐಶ್ವರ್ಯ ವಿದ್ಯಾ ರಘುನಾಥ್ ಕರ್ನಾಟಕ ಶಾಸ್ತ್ರೀಯ ಗಾಯನವನ್ನು ಪ್ರಸ್ತುತಪಡಿಸಿದರು. ಇವರು ವಿದುಷಿ ಸೀತಾಲಕ್ಷ್ಮಿ ವೆಂಕಟೇಶನ್ ಅವರ ಶಿಷ್ಯೆ. ಮೊದಲಿಗೆ ಹರಿ ಕಾಂಬೋಜಿ ರಾಗದಲ್ಲಿ ಮೈಸೂರು ಸದಾಶಿವರಾಯರ ರಚನೆಯನ್ನು ಪ್ರಸ್ತುತಪಡಿಸಿ, ನಂತರ ಕೀರ್ವಾಣಿ ರಾಗದಲ್ಲಿ ಗಾಯನವನ್ನು ಮುಂದುವರಿಸಿ, ಕೊನೆಯಲ್ಲಿ ಪುರಂದರದಾಸರ ಕೀರ್ತನೆಯೊಂದಿಗೆ ಕಛೇರಿಯನ್ನು ಮುಗಿಸಿದರು.ಮೂರೂ ಪ್ರಸ್ತುತಿಗಳನ್ನು ಪ್ರಬುದ್ಧತೆಯಿಂದ ಹಾಗೂ ಹಸನ್ಮುಖಿಯಾಗಿ ಹಾಡಿ ಶ್ರೋತೃಗಳ ಮೆಚ್ಚುಗೆಗೆ ಪಾತ್ರವಾದರು. ಇವರಿಗೆ ಆಕಾಶವಾಣಿ ಕಲಾವಿದರುಗಳಾದ ಸಿ. ಎನ್. ಚಂದ್ರಶೇಖರ್- ವಯೋಲಿನ್, ಎಂ. ಆರ್. ಸಾಯಿನಾಥ್- ಮೃದಂಗ, ಎಂ. ಗುರುರಾಜ್- ಮೋರ್ಚಿಂಗ್ ಹಾಗೂ ಶೃತಿ ವಾದನದಲ್ಲಿ ಆರ್. ಚಂದ್ರಿಕಾ ಸಹಕಾರ ನೀಡಿದರು. ತನಿ ನುಡಿಸುವಲ್ಲಿ ವಾದ್ಯ ಕಲಾವಿದರ ವಾದನಕ್ಕೆ ಶ್ರೋತೃಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.ಕರ್ನಾಟಕ ಶಾಸ್ತ್ರೀಯ ಸಂಗೀತದ ನಂತರ ಹಿಂದೂಸ್ತಾನಿ ಸಂಗೀತ ಕೇಳಲು ಕಾತರರಾಗಿದ್ದ ಶ್ರೋತೃಗಳ ಮನದಿಂಗಿತವನ್ನು ಅರಿತ ಮೈಸೂರಿನ ಪಂ. ಸಮೀರ್ ರಾವ್ ವೇದಿಕೆಗೆ ಬಂದರು. ಅಂತರರಾಷ್ಟ್ರೀಯ ಖ್ಯಾತ ಬಾನ್ಸುರಿ ವಾದಕ ಪಂ. ಹರಿಪ್ರಸಾದ್ ಚೌರಾಸಿಯಾ ಅವರ ಶಿಷ್ಯರಾದ ಸಮೀರ್ ಆಕಾಶವಾಣಿಯ `ಎ' ಗ್ರೇಡ್ ಕಲಾವಿದರು. ಧ್ವನಿವರ್ಧಕವನ್ನು ಪರಿಶೀಲಿಸಲು `ಲಾಗಿ ಲಗನಪತಿ ಸಖಿ' ಗೀತೆಯ ಸಾಲುಗಳನ್ನು ನುಡಿಸಿ ಶ್ರೋತೃಗಳಿಗೆ ತಮ್ಮ ಬಾನ್ಸುರಿ ವಾದನದ ಝಲಕ್ ಕೇಳಿಸಿದರು. ಮೊದಲಿಗೆ ಮಧುಕೌಂಸ ರಾಗವನ್ನು (ಥಾಟ್- ಕಾಫಿ, ಜಾತಿ- ಔಡವ) ಆರಿಸಿಕೊಂಡ ಸಮೀರ್ ಆಲಾಪ್ ಜೋಡ್ ಹಾಗೂ ಗತ್ ನುಡಿಸಿದರು.ಆಲಾಪ್ ನುಡಿಸಾಣಿಕೆಯ ನಂತರ ಜೋಡ್ ವಾದನದಿಂದ ತಬಲಾ ಸಾಥ್ ಆರಂಭವಾಯಿತು. ನಂತರ ಗತ್ ನುಡಿಸುವಾಗ ರಾಗದಲ್ಲಿ ಅಡಕವಾಗಿದ್ದ ಸ್ವರಗಳನ್ನು ವಿಭಿನ್ನ ರೀತಿಗಳಲ್ಲಿ ಸಂಯೋಜಿಸಿ, ನುಡಿಸಿ ಅದರ ಸಾಧ್ಯತೆಗಳನ್ನು ಬಾನ್ಸುರಿ ನಾದದ ಮೂಲಕ ಶ್ರೋತೃಗಳಿಗೆ ಮುಟ್ಟಿಸಿದರು.  ಎರಡನೆಯದಾಗಿ ಆರಿಸಿಕೊಂಡ ರಾಗ ದೇಶ್ (ಥಾಟ್- ಖಮಾಜ್). ಆಲಾಪ್ ವಾದನದ ನಂತರ ಜೋಡ್ ಜಾಲಾ ವಾದನ ಆರಂಭವಾಯಿತು. ಮಧ್ಯಲಯ ಹಾಗೂ ಧೃತ್ ತೀನ್ ತಾಳದಲ್ಲಿ ದೇಶ್ ರಾಗದ ಸೌಂದರ್ಯವನ್ನು ಎಳೆಎಳೆಯಾಗಿ ಅನಾವರಣಗೊಳಿಸಿದ ರೀತಿ ಶ್ರೋತೃಗಳನ್ನು ನಾದ ಲೋಕದಲ್ಲಿ ವಿಹರಿಸುವಂತೆ ಮಾಡಿತು. ಈ ರಾಗದ ಸವಿಯನ್ನು ನೀವೂ ಮೆಲುಕು ಹಾಕಬೇಕಾದರೆ `ವಂದೇ ಮಾತರಂ' ಗೀತೆಯನ್ನೊಮ್ಮೆ ನೆನಪಿಸಿಕೊಳ್ಳಿ.  ಕಾಲದ ತೆಕ್ಕೆಗೆ ಸಿಕ್ಕ ನಾವು ಆಧುನಿಕ ಬದುಕಿಗೆ ಎಷ್ಟೇ ಹೊಂದಿಕೊಂಡಿದ್ದರೂ ಹಬ್ಬ ಹರಿದಿನಗಳಲ್ಲಿ ಜಾನಪದ ಸಂಸ್ಕೃತಿಗೆ ಮನ ಸೋತುಬಿಡುತ್ತದೆ. ಆ ದೃಷ್ಟಿಕೋನದಿಂದ ಸಮೀರ್ ಕಾರ್ಯಕ್ರಮದ ಕೊನೆಗೆ ಧಾನಿ ರಾಗದಲ್ಲಿ (ಥಾಟ್- ಕಾಫಿ) ಸಂಯೋಜಿಸಲಾಗಿದ್ದ ಅಸ್ಸಾಮಿನ ಬಿಹು ಧುನ್ ಒಂದನ್ನು ಆಯ್ಕೆ ಮಾಡಿಕೊಂಡದ್ದು ಶ್ರೋತೃಗಳಲ್ಲಿ ಆಹ್ಲಾದಕರ ಭಾವ ಉಂಟುಮಾಡಿತು. ಜಾನಪದ ಸಂಗೀತದ ಸೊಗಡಿನಲ್ಲಿದ್ದ ರಚನೆ ಶ್ರೋತೃಗಳನ್ನು ನೇರವಾಗಿ ಹುಲ್ಲುಗಾವಲಿನ ಪ್ರದೇಶವೊಂದಕ್ಕೆ ಕರೆದೊಯ್ದು, ಸ್ವಚ್ಛಂದವಾಗಿ ಓಡಾಡಲು ಆಹ್ವಾನವಿತ್ತಂತೆ ಇತ್ತು.ತಾಳ ತೀವ್ರತೆಯನ್ನು ಪಡೆದುಕೊಂಡಂತೆ ಕೊರಳ ಮೂಲಕ ಹೊಮ್ಮಿದ ಸ್ವರಗಳು ಸುರುಳಿ ಸುರುಳಿಯಾಗಿ ಬಾನ್ಸುರಿಯ ಕಿಂಡಿಗಳಿಂದ ಚಿಮ್ಮಿ ಶ್ರೋತೃಗಳ ಕಿವಿ ಮುಟ್ಟಿ ಮನಸೂರೆಗೊಂಡವು. ತೀವ್ರವಾಗಿದ್ದ ತಾಳ ಕ್ರಮೇಣ ನಿಧಾನಗತಿಗಿಳಿದು ವಾದನ ಮುಕ್ತಾಯಗೊಂಡಾಗ ಹೊಮ್ಮಿದ ಕರತಾಡನ ಶ್ರೋತೃಗಳ ಮೆಚ್ಚುಗೆಗೆ ಕನ್ನಡಿ ಹಿಡಿಯಿತು. ಬಾನ್ಸುರಿಯ ನಾದಕ್ಕೆ ಪಂ. ವಿಶ್ವಾನಾಥ್ ನಾಕೋಡರ ತಬಲಾ ಲಯಗಾರಿಕೆಯ ಸಾಥ್ ಶ್ರೋತೃಗಳ ಕೈ ಕಾಲುಗಳನ್ನು ತಾಳಕ್ಕೆ ತಕ್ಕಂತೆ ಕುಣಿಸತೊಡಗಿತ್ತು. ಇವರಿಗೆ ಬಸವರಾಜ್ ಗೋನಾಳ್ ಶೃತಿ ಸಹಕಾರ ನೀಡಿದರು. ವಾರದ ನಡುವಿನ ದಿನವಾದ್ದರಿಂದ ಕಾರ್ಯಕ್ರಮದಲ್ಲಿ ಶ್ರೋತೃಗಳ ಕೊರತೆ ಎದ್ದು ಕಾಣುತ್ತಿತ್ತಷ್ಟೆ.

 

ಪ್ರತಿಕ್ರಿಯಿಸಿ (+)