ವಿಜಯಪುರ ಪುರಸಭೆಗೆ ಮಹಿಳೆಯರ ಮುತ್ತಿಗೆ

7

ವಿಜಯಪುರ ಪುರಸಭೆಗೆ ಮಹಿಳೆಯರ ಮುತ್ತಿಗೆ

Published:
Updated:

ವಿಜಯಪುರ: ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ 1 ನೇ ವಾರ್ಡಿನ ಮಹಿಳೆಯರು ಶನಿವಾರ ಮತ್ತೆ ಪುರಸಭಾ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ನಗರ್ತ ಮಹಿಳಾ ಸಂಘ, ಸ್ತ್ರೀ ಶಕ್ತಿ ಸಂಘ, ಇನ್ನರ್‌ವೀಲ್ ಸಂಘ, ವಾಲ್ಮೀಕಿ ಜನಾಂಗದ ಸಂಘಗಳ ಬೆಂಬಲದೊಂದಿಗೆ ಪುರಸಭೆ ಮುಂದೆ ಪ್ರತಿಭಟನೆ ನಡೆಸಿದ ಮಹಿಳೆಯರು ಕೂಡಲೇ ವಾರ್ಡಿಗೆ ನೀರು ಸರಬರಾಜು ಮಾಡಬೇಕು ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ನೀರು ಸರಬರಾಜು ಮಾಡಿಸವುಲ್ಲಿ ವಾರ್ಡಿನ ಸದಸ್ಯೆ ಭಾರತಿ ರಾಜಣ್ಣ ತಾರತಮ್ಯ ಮಾಡುತ್ತಿದ್ದಾರೆ. ವಾರ್ಡಿನ ಸುಮಾರು 50-60 ಮನೆಗಳಿಗೆ ಮಾತ್ರವೇ ನೀರು ಸರಬರಾಜು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಉಳಿದವರ ಬಗ್ಗೆ ಉದಾಸೀನತೆ ತೋರಿಸಲಾಗುತ್ತಿದ್ದು ಇಲ್ಲಿನ ನಿವಾಸಿಗಳನ್ನು ಸಂಕಷ್ಟಕ್ಕೆ ಸಿಲುಕಿಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಇದು ಕೇವಲ ನೀರಿನ ಪೂರೈಕೆಯ ಸಮಸ್ಯೆಯಾಗಿರದೆ ಇದರ ಹಿಂದೆ ರಾಜಕೀಯ ಪಿತೂರಿ ಅಡಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.`ಈ ಬಗ್ಗೆ ವಾರ್ಡಿನ ನಿವಾಸಿಗಳು ಪುರಸಭೆಗೆ ಹಲವು ಬಾರಿ ದೂರು ಸಲ್ಲಿಸಿದ್ದಾರೆ. ಆದರೆ ಸದಸ್ಯರು ತಮಗೂ-ಇದಕ್ಕೂ ಯಾವುದೇ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಅವರು ಚುನಾವಣೆಯಲ್ಲಿ ಗೆದ್ದನಂತರ ಮತದಾರರನ್ನು ಸಂಪರ್ಕಿಸಿಯೇ ಇಲ್ಲ. ದೂರವಾಣಿ ಕರೆಗಳನ್ನೂ ಸ್ವೀಕರಿಸುವುದಿಲ್ಲ. ಯಾರಿಗೂ ಮುಖಾಮುಖಿ ಭೇಟಿಗೂ ಸಿಗುತ್ತಿಲ್ಲ. ಈಗಲೇ ಅವರನ್ನು ಪುರಸಭೆಯ ಬಳಿ ಕರೆಸಬೇಕು. ನಮ್ಮೆಲ್ಲರ ಪ್ರಶ್ನೆಗಳಿಗೆ ಅವರು ಉತ್ತರಿಸಲೇ ಬೇಕು~ ಎಂದು ಶಾಂತಾ ಬಸವರಾಜ್ ಕೆಂಡಾಮಂಡಲವಾದರು.ಮಹಿಳಾ ಸದಸ್ಯೆಯಾಗಿ ಅವರು ತಮ್ಮ ವಾರ್ಡಿನ ಮಹಿಳೆಯರ ಸಮಸ್ಯೆಯನ್ನೇ ಮರೆತಿದ್ದಾರೆ ಎಂದು ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಸುಜಾತ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.ಪುರಸಭೆಯ ವರ್ಗ ಪೈಪ್‌ಲೈನ್ ಹಾಕಿಸಿ ನೀರಿನ ಸಮಸ್ಯೆಯನ್ನು ಬಗೆಹರಿಸಲು ಸಿದ್ಧರಿರುವಾಗ ವಾರ್ಡಿನ ಸದಸ್ಯರೇ ಇದಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಪ್ರತಿಷ್ಠೆಯಿಂದ ಸಮಸ್ಯೆಯನ್ನು ಬಗೆಹರಿಯಲು ಬಿಡದೆ ಬೇಜವಾಬ್ದಾರಿ ತನದಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ನಗರ್ತ ಮಹಿಳಾ ಸಂಘದ ಅಧ್ಯಕ್ಷೆ ಭಾರತಿ ಪ್ರಭುದೇವ್ ಟೀಕಿಸಿದರು.ಯಾವ ಅಧಿಕಾರಿಗಳು ಭರವಸೆ ಕೊಟ್ಟರೂ ವಾರ್ಡಿನ ಸದಸ್ಯರು ನೇರವಾಗಿ ಸಮಸ್ಯೆಗೆ ಸ್ಪಂದಿಸದ ಹೊರತು ಪರಿಹಾರ ದೊರೆಯುವುದಿಲ್ಲ. ಇದನ್ನು ಹೀಗೆಯೇ ಬೆಳೆಯಲು ಬಿಟ್ಟು ನೋಡುತ್ತಾ ಕುಳಿತಿರುವ ಸದಸ್ಯರು ಜನರ ತಾಳ್ಮೆ ಪರೀಕ್ಷೆ ಮಾಡಬಾರದು ಎಂದು ವಿಜಯಪುರದ ವಾಲ್ಮೀಕಿ ಜನಾಂಗದ ಅಧ್ಯಕ್ಷ ರಮೇಶ್ ಹೇಳಿದರು.ಪ್ರತಿಭಟನಾಕಾರ ಮಾತಿಗೆ ಸ್ಪಂದಿಸಿದ ಪುರಸಭೆಯ ಉಪಾಧ್ಯಕ್ಷ ಎಂ.ಎಲ್. ಕೃಷ್ಣಪ್ಪಗೌಡ, ಪಟ್ಟಣದ ಎಲ್ಲಾ ಕಡೆ ನೀರಿನ ಸಮಸ್ಯೆಯನ್ನು ಸಾಧ್ಯವಾದಷ್ಟು ಬಗೆಹರಿಸುತ್ತಾ ಬಂದಿದ್ದು, ಒಂದನೇ ವಾರ್ಡಿಗೂ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡುವುದಾಗಿ ಹೇಳಿದರು. ಆದರೆ ಇದಕ್ಕೆ ಒಪ್ಪದ ಪ್ರತಿಭಟನಾಕಾರರು `ನಮಗೆ ತಾತ್ಕಾಲಿಕ ಪರಿಹಾರ ಬೇಡ. ಇದು ತಾರತಮ್ಯದ ಪ್ರಶ್ನೆ. ವಾರ್ಡಿನ ಇತರೆ ಭಾಗದಲ್ಲಿ ಹರಿಯುವ ನೀರು ನಮ್ಮ ಭಾಗಕ್ಕೂ ಹರಿಯುವ ವ್ಯವಸ್ಥೆ ಮಾಡಿ.ಕೇವಲ ನಲ್ಲಿಯನ್ನು ಹಾಕಿಸಿ ಪ್ರಯೋಜನವಿಲ್ಲ. ನೀರು ಪೂರೈಕೆ ಮಾಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಿಸಬೇಕು~ ಎಂದರು.ಅಂತಿಮವಾಗಿ ಉಪಾಧ್ಯಕ್ಷರು ಮುಂದಿನ ಶನಿವಾರದೊಳಗೆ  ಪೈಪ್‌ಲೈನ್ ಮೂಲಕವೇ ನೀರು ಸಿಗುವ ಹಾಗೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ಕೊಟ್ಟರು. `ನಮಗೆ ಮಾತಿನ ಆಶ್ವಾಸನೆ ಬೇಡ. ಲಿಖಿತ ರೂಪದಲ್ಲಿ ನೀಡಿ~ ಎಂದು ಇನ್ನರ್‌ವೀಲ್ ಸಂಘದ ಸದಸ್ಯೆ ಮಾಲತಿ ಆನಂದ್ ಅವರು ಹೇಳಿದರು.ಇದೊಂದು ಬಾರಿ ಅವಕಾಶ ನೀಡಿ. ಸಮಸ್ಯೆ ಬಗೆಹರಿಸುತ್ತೇನೆ ಎಂದು ಉಪಾಧ್ಯಕ್ಷರು ಪ್ರತಿಭಟನಾಕಾರರ ಮನವೊಲಿಸಿ ಅವರನ್ನು ವಾಪಸು ಕಳುಹಿಸಿವಲ್ಲಿ ಯಶಸ್ವಿಯಾದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry