ವಿಜಯಪುರ ಸಾರಿಗೆ; `ವಿಜಯ'ದ ನಗೆ

7

ವಿಜಯಪುರ ಸಾರಿಗೆ; `ವಿಜಯ'ದ ನಗೆ

Published:
Updated:
ವಿಜಯಪುರ ಸಾರಿಗೆ; `ವಿಜಯ'ದ ನಗೆ

ವಿಜಾಪುರ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಜಾಪುರ ನಗರದಲ್ಲಿ ಆರಂಭಿಸಿರುವ `ವಿಜಯಪುರ ಸಾರಿಗೆ'ಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದಿನದಿಂದ ದಿನಕ್ಕೆ ಆದಾಯವೂ ಹೆಚ್ಚುತ್ತಿದ್ದು, ಪ್ರಯಾಣಿಕರ ಜೊತೆಗೆ ಸಂಸ್ಥೆಯವರೂ ಖುಷಿ ಪಡುತ್ತಿದ್ದಾರೆ.`ವಿಜಾಪುರದಲ್ಲಿ ಆಟೋ ರಿಕ್ಷಾ ಮತ್ತು ಟಂಟಂಗಳ ಆಟಾಟೋಪ ಹೆಚ್ಚಾಗಿತ್ತು. 4000ಕ್ಕೂ ಹೆಚ್ಚು ಆಟೋ-ಟಂಟಂಗಳು ನಗರದಲ್ಲಿದ್ದು, ಹಣದ ಆಸೆಗಾಗಿ ಮಿತಿಮೀರಿದ ಪ್ರಯಾಣಿಕರನ್ನು ತುಂಬಿಕೊಳ್ಳುವುದು- ಮನಸೋ ಇಚ್ಛೆ ಚಾಲನೆ ಮಾಡುವುದರಿಂದ ಅವುಗಳ ಪ್ರಯಾಣ ಅಸುರಕ್ಷಿತವಾಗಿತ್ತು. ಇದರಿಂದ ಬೇಸತ್ತಿದ್ದ ಪ್ರಯಾಣಿಕರು ನಗರ ಸಾರಿಗೆಯ ಹೊಸ ಬಸ್‌ಗಳಲ್ಲಿ ಮುಗಿಬಿದ್ದು ಪ್ರಯಾಣಿಸುತ್ತಿದ್ದಾರೆ' ಎನ್ನುತ್ತಾರೆ ಇಲ್ಲಿಯ ಜನತೆ.ಫೆಬ್ರುವರಿ 9ರಿಂದ ನಗರದಲ್ಲಿ 40 ಹೈಟೆಕ್ ಬಸ್ ಸೇವೆ ಆರಂಭಿಸಲಾಗಿದೆ. ಫೆ.12ರಿಂದ ನಗರದ ವಿವಿಧ ಮಾರ್ಗಗಳಲ್ಲಿ ಈ ಬಸ್‌ಗಳನ್ನು ಓಡಿಸಲಾಗುತ್ತಿದೆ. ಹೊಸ ಸಿಬ್ಬಂದಿ ಬರದಿದ್ದರೂ, ಲಭ್ಯವಿದ್ದ ಸಿಬ್ಬಂದಿಯೇ ಶುಭ್ರ ಬಿಳಿ ಬಣ್ಣದ ಸಮವಸ್ತ್ರ ಧರಿಸಿ ಸೇವೆ ಸಲ್ಲಿಸುವ ಮೂಲಕ ಹೈಟೆಕ್ ಬಸ್‌ಗಳಿಗೆ ಮತ್ತಷ್ಟು ಮೆರಗು ತಂದಿದ್ದಾರೆ.ರೈಲು ನಿಲ್ದಾಣಕ್ಕೆ 20 ಬಸ್: ತೊರವಿಯಿಂದ ರೈಲು ನಿಲ್ದಾಣಕ್ಕೆ ನೇರವಾದ ಮಾರ್ಗದಲ್ಲಿ 10 ಬಸ್, ಜಿಲ್ಲಾ ಆಸ್ಪತ್ರೆಯಿಂದ ಜಾಮಿಯಾ ಮಸೀದೆ ಮಾರ್ಗವಾಗಿ ರೈಲು ನಿಲ್ದಾಣಕ್ಕೆ  ನಾಲ್ಕು, ಟಕ್ಕೆಯಿಂದ ಗಾಂಧಿಚೌಕ್-ಜಾಮಿಯಾ ಮಸೀದೆ ಮಾರ್ಗವಾಗಿ ರೈಲು ನಿಲ್ದಾಣಕ್ಕೆ ಎರಡು, ಘೇವರ್‌ಚಂದ್ ಕಾಲೊನಿ ಹಾಗೂ ಸ್ವಾತಂತ್ರ್ಯ ಯೋಧರ ಕಾಲೊನಿಯಿಂದ ಜಾಮಿಯಾ ಮಸೀದೆ ಮಾರ್ಗವಾಗಿ ರೈಲ್ವೆ ನಿಲ್ದಾಣ ತಲಾ ಒಂದೊಂದು ಬಸ್ ಓಡಿಸಲಾಗುತ್ತಿದೆ. ರೈಲು ನಿಲ್ದಾಣದಿಂದ ಒಟ್ಟಾರೆ 20 ಬಸ್‌ಗಳ ಸೇವೆ ಲಭ್ಯ.ಜ್ಞಾನಯೋಗಾಶ್ರಮದಿಂದ ಜಲನಗರ ಮಾರ್ಗವಾಗಿ ಗಣೇಶನಗರಕ್ಕೆ ಹೊಸದಾಗಿ 10 ಬಸ್‌ಗಳನ್ನು ಬಿಡಲಾಗಿದೆ. ಈ ಮಾರ್ಗದಲ್ಲಿ ಮೊದಲು ಇದ್ದ ಐದು ಬಸ್‌ಗಳ ಸೇವೆ ಮುಂದುವರಿಸಲಾಗಿದೆ. ಆದರ್ಶನಗರದಿಂದ ಬಂಜಾರಾ ಕ್ರಾಸ್-ಕಾಲೇಜು ಮೂಲಕ ವಜ್ರಹನುಮಾನ ನಗರ ಮಾರ್ಗದಲ್ಲಿ 10 ಬಸ್‌ಗಳನ್ನು ಓಡಿಸಲಾಗುತ್ತಿದೆ.`ಪ್ರತಿ ಬಸ್ 20 ಟ್ರಿಪ್ ಮಾಡಬೇಕು. ಒಟ್ಟಾರೆ 650 ಟ್ರಿಪ್‌ಗಳಲ್ಲಿ ನಿತ್ಯ 8000 ಕಿ.ಮೀ. ಕಾರ್ಯಾಚರಣೆ ಮಾಡಲಾಗುತ್ತಿದೆ. ಬೆಳಿಗ್ಗೆ 6.30ರಿಂದ ರಾತ್ರಿ 10 ಗಂಟೆಯವರೆಗೆ ಹೊಸ ಬಸ್‌ಗಳು ಕಾರ್ಯಾಚರಣೆ ಮಾಡುತ್ತಿವೆ. ರಾತ್ರಿ ವೇಳೆ ರೈಲ್ವೆ ನಿಲ್ದಾಣಕ್ಕೆ ಈ ಹಿಂದೆ ಇದ್ದ ಬಸ್ ಸೇವೆ ಮುಂದುವರಿಸಲಾಗಿದೆ.

ಗಾಂಧಿ ಚೌಕ್‌ನಲ್ಲಿ ಪ್ರತಿ ಮೂರು ನಿಮಿಷಕ್ಕೊಂದು, ರೈಲು ನಿಲ್ದಾಣದಲ್ಲಿ ಪ್ರತಿ 10 ನಿಮಿಷಕ್ಕೊಂದು, ಆಶ್ರಮದಲ್ಲಿ ಪ್ರತಿ ಐದು ನಿಮಿಷಕ್ಕೆ, ತೊರವಿಯಲ್ಲಿ ಪ್ರತಿ 10 ನಿಮಿಷಕ್ಕೊಂದು ನಮ್ಮ ಬಸ್ ಸೇವೆ ಲಭ್ಯವಿದೆ' ಎಂಬುದು ಅಸಿಸ್ಟಂಟ್ ಟ್ರಾಫಿಕ್ ಮ್ಯಾನೇಜರ್ ಎಂ.ಎಸ್. ಹಿರೇಮಠ ಅವರ ವಿವರಣೆ.ಹೆಚ್ಚುತ್ತಿರುವ ಆದಾಯ: `ಸಾಹಿತ್ಯ ಸಮ್ಮೇಳನದ ಅವಧಿಯಲ್ಲಿ (ಫೆ 9ರಿಂದ 11 ರ ವರೆಗೆ) ಮೂರು ದಿನಗಳಲ್ಲಿರೂ8.63 ಲಕ್ಷ ಆದಾಯ ಬಂದಿದೆ. ಆಗ ಪ್ರತಿ ಕಿ.ಮೀ.ಗೆ ಸರಾಸರಿ ಆದಾಯರೂ50 ಬಂದಿತ್ತು. ಒಟ್ಟಾರೆ 1.50 ಲಕ್ಷ ಜನ ಪ್ರಯಾಣಿಸಿದ್ದರು' ಎನ್ನುತ್ತಾರೆ ಅಧಿಕಾರಿಗಳು.`ಸಾಹಿತ್ಯ ಸಮ್ಮೇಳನದ ನಂತರ ಇದೇ 13ರಂದು ರೂ 2.14 ಲಕ್ಷ, 14ರಂದು ರೂ 2.42 ಲಕ್ಷ, 15ರಂದು ರೂ 2.45 ಲಕ್ಷ ಆದಾಯ ಬಂದಿದೆ. ಆದಾಯದಲ್ಲಿ ನಿತ್ಯವೂ ಹೆಚ್ಚಳವಾಗುತ್ತಿದ್ದು, ಪ್ರತಿ ಕಿ.ಮೀ.ಗೆ ಸರಾಸರಿ ರೂ 34 ಬರುತ್ತಿದೆ' ಎನ್ನುತ್ತಾರೆ ಅವರು.ಇಲ್ಲದ ಮಾಹಿತಿ: `ನಗರ ಸಾರಿಗೆಗೆ ಹೆಚ್ಚಿನ ಬಸ್ ಸೇವೆ ಆರಂಭಿಸಿದ್ದರೂ ಬಸ್ ಸಂಚಾರದ ವೇಳಾಪಟ್ಟಿಯನ್ನು ಎಲ್ಲಿಯೂ ಅಳವಡಿಸಿಲ್ಲ. ಹೊಸ ಬಸ್‌ಗಳನ್ನು ಮಹಿಳಾ ವಿಶ್ವವಿದ್ಯಾಲಯದ ತೊರವಿ ಕ್ಯಾಂಪಸ್‌ಗೆ, ನಗರದ ಹೊರ ವಲಯದಲ್ಲಿರುವ ಹೊಸ ಬಡಾವಣೆಗಳಿಗೆ, ರಿಂಗ್ ರಸ್ತೆಯಲ್ಲಿ ಓಡಿಸಬೇಕು' ಎಂಬುದು ಸ್ನೇಹಾ, ಹರೀಶ್ ಮತ್ತಿತರ  ಪ್ರಯಾಣಿಕರ ಆಗ್ರಹ.`ನಗರಾಭಿವೃದ್ಧಿ ಪ್ರಾಧಿಕಾರದವರು ಕೆಲವೆಡೆ ಹೊಸ ಬಸ್ ತಂಗುದಾಣ ನಿರ್ಮಿಸುತ್ತಿದ್ದಾರೆ. ಅವುಗಳಲ್ಲಿ ಬಸ್ ವೇಳಾಪಟ್ಟಿ ಪ್ರಕಟಿಸಲಾಗುವುದು. ನಮ್ಮ ಕೇಂದ್ರ ಕಚೇರಿಯವರು ಸಮೀಕ್ಷೆ ನಡೆಸಿದ ಮಾರ್ಗಗಳಲ್ಲಿ ಮಾತ್ರ ಈಗ ಬಸ್‌ಗಳನ್ನು ಓಡಿಸಲಾಗುತ್ತಿದೆ. 

ಅಲ್ಲದೆ ಈ ಬಸ್‌ಗಳಲ್ಲಿ ಸ್ವಯಂ ಚಾಲಿತ ಮಾಹಿತಿ ಮತ್ತು ಫಲಕ ಪ್ರದರ್ಶನ ವ್ಯವಸ್ಥೆ ಇದೆ. ಹೀಗಾಗಿ ತಕ್ಷಣಕ್ಕೆ ಮಾರ್ಗ ಬದಲಾಯಿಸುವುದು ಕಷ್ಟ' ಎನ್ನುತ್ತಾರೆ ಅಧಿಕಾರಿಗಳು.ಪ್ರತ್ಯೇಕ ಘಟಕ: `ಈ ಬಸ್‌ಗಳ ನಿರ್ವಹಣೆ ಉತ್ತಮ ವಾಗಿರಬೇಕು ಎಂಬ ಸಲಹೆ ಬಂದಿದೆ. ವಿಜಾಪುರ ನಗರ ಸಾರಿಗೆಗೆ ಪ್ರತ್ಯೇಕ ಘಟಕ ಆರಂಭಿಸುವ ಚಿಂತನೆ ಇದ್ದು, ಸಂಸ್ಥೆಯ ಆಡಳಿತ ಮಂಡಳಿಯ ಮುಂದಿನ ಸಭೆಯಲ್ಲಿ ಈ ವಿಷಯ ಚರ್ಚಿಸಲಾಗುವುದು' ಎನ್ನುತ್ತಾರೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಶಿವಾನಂದ ಕಲ್ಲೂರ.`ಗುಲ್ಬರ್ಗ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತಿತರ ಮಹಾನಗರಗಳಲ್ಲಿ ಮಾಸ್ಟರ್ ಪ್ಲಾನ್ ಜಾರಿಯಾಗಿದೆ. ಆದರೆ, ವಿಜಾಪುರದಲ್ಲಿ ಇನ್ನೂ ಕೆಲವೆಡೆ ರಸ್ತೆಗಳು ವಿಶಾಲವಾಗಿರದ ಕಾರಣ ಬಸ್‌ಗಳನ್ನು ಓಡಿಸಲು ಸಾಧ್ಯವಾಗುತ್ತಿಲ್ಲ. ಅವಶ್ಯಕತೆಗೆ ತಕ್ಕಂತೆ ಇನ್ನೂ ಹೆಚ್ಚಿನ ಬಸ್ ಸೇವೆ ಕಲ್ಪಿಸಲು ಬದ್ಧ' ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry