ವಿಜಯಯಾತ್ರೆ ತವಕದಲ್ಲಿ ಪೂಜಾರ ಪಡೆ

7
ಕ್ರಿಕೆಟ್‌: ಭಾರತ ‘ಎ’ –ವೆಸ್ಟ್ ಇಂಡೀಸ್ ‘ಎ‘ ಪಂದ್ಯ ಇಂದಿನಿಂದ

ವಿಜಯಯಾತ್ರೆ ತವಕದಲ್ಲಿ ಪೂಜಾರ ಪಡೆ

Published:
Updated:
ವಿಜಯಯಾತ್ರೆ ತವಕದಲ್ಲಿ ಪೂಜಾರ ಪಡೆ

ಮೈಸೂರು: ಹಚ್ಚಹಸಿರಿನಿಂದ ನಳನಳಿಸುತ್ತಿರುವ ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದ ಪಕ್ಕದ ಕುಕ್ಕರಹಳ್ಳಿ ಕೆರೆಯ ಮೇಲಿಂದ ಬೀಸಿ ಬರುವ ತಂಗಾಳಿಯಲ್ಲೂ ಈಗ ಕ್ರಿಕೆಟ್‌ ಸುಗಂಧ.ಬರೋಬ್ಬರಿ ಹದಿನಾರು ವರ್ಷಗಳ ನಂತರ ಅಂತರರಾಷ್ಟ್ರೀಯ ದರ್ಜೆಯ ಕ್ರಿಕೆಟ್‌ ಪಂದ್ಯಕ್ಕೆ ಗ್ಲೇಡ್ಸ್ ಸಿದ್ಧವಾಗಿದೆ. ಭಾರತ ‘ಎ’ ಮತ್ತು ವೆಸ್ಟ್ ಇಂಡೀಸ್ ‘ಎ’ ತಂಡಗಳ ನಡುವೆ ನಡೆಯಲಿರುವ ಮೂರು ಟೆಸ್ಟ್ (4 ದಿನಗಳ ಪಂದ್ಯ) ಸರಣಿಯ ಮೊದಲ ಪಂದ್ಯ ಬುಧವಾರ ಇಲ್ಲಿ ಆರಂಭವಾಗಲಿದೆ. ಭಾರತ ತಂಡದ ‘ಗೋಡೆ’ ರಾಹುಲ್ ದ್ರಾವಿಡ್ ಜಾಗವನ್ನು ತುಂಬುವ ಹಾದಿಯಲ್ಲಿರುವ ಚೇತೇಶ್ವರ್ ಪೂಜಾರ ನಾಯಕತ್ವದ ಭಾರತ ‘ಎ‘ ತಂಡ ಮತ್ತು ಬ್ಯಾಟಿಂಗ್‌ ಪ್ರತಿಭೆ ಕರ್ಕ್‌ ಎಡ್ವರ್ಡ್ಸ್ ನೇತೃತ್ವದ ಕೆರಿಬಿಯನ್ ಪಡೆಯ ಹಣಾಹಣಿಯನ್ನು ಕಣ್ತುಂಬಿಕೊಳ್ಳಲು ಮೈಸೂರು ಕ್ರಿಕೆಟ್‌ ಪ್ರೇಮಿಗಳು ಸಜ್ಜಾಗಿದ್ದಾರೆ.1997ರಲ್ಲಿ ಮಹಿಳಾ ಕ್ರಿಕೆಟ್‌ ವಿಶ್ವಕಪ್ ಟೂರ್ನಿಯ ಡೆನ್ಮಾರ್ಕ್‌ ಮತ್ತು ಪಾಕಿಸ್ತಾನ ನಡುವಣ ಪಂದ್ಯವು ಗಂಗೋತ್ರಿಯಲ್ಲಿ ನಡೆದಿತ್ತು. 2007ರಿಂದ ಈಚೆಗೆ  ಇಲ್ಲಿಯವರೆಗೆ ರಣಜಿ ಟ್ರೋಫಿ ಟೂರ್ನಿಯ ಪಂದ್ಯಗಳು ಇಲ್ಲಿ ನಡೆದಿವೆ. 2010ರಲ್ಲಿ ರಣಜಿ ಫೈನಲ್ ಪಂದ್ಯ ಸುನಿಲ್ ಗಾವಸ್ಕರ್ ಮತ್ತು ರಾಹುಲ್ ದ್ರಾವಿಡರಿಂದ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಪುರುಷರ ಕ್ರಿಕೆಟ್‌ನ ಅಂತರರಾಷ್ಟ್ರೀಯ ಪಂದ್ಯದ ಆತಿಥ್ಯ ವಹಿಸುವ ಮೂಲಕ ಗಂಗ್ರೋತ್ರಿಯ ಅಂಗಳವು ಮಮತ್ತೊಂದು ಐತಿಹಾಸಿಕ ದಾಖಲೆ ಬರೆಯಲಿದೆ. ಈಗಾಗಲೇ ಟೀಮ್ ಇಂಡಿಯಾದಲ್ಲಿ ಆಡಿರುವ ಪೂಜಾರಾ, ಅಶೋಕ್ ದಿಂಡಾ, ಮೊಹಮ್ಮದ ಶಮಿ ಮತ್ತು ಅಂತರರಾಷ್ಟ್ರೀಯ ಪ್ರಥಮ ದರ್ಜೆ ಪಂದ್ಯಗಳಲ್ಲಿ ಮಿಂಚಿರುವ ಧವಳ್ ಕುಲಕರ್ಣಿ, ಜಮ್ಮು ಮತ್ತು ಕಾಶ್ಮೀರದ ಪರ್ವೇಜ್ ರಸೂಲ್ ಪ್ರಮುಖ ಆಕರ್ಷಣೆಯಾಗಿದ್ದಾರೆ. ವಿಂಡೀಸ್ ರಾಷ್ಟ್ರೀಯ ತಂಡದ ಆಟಗಾರರಾದ ಕ್ರಿಕ್ ಎಡ್ವರ್ಡ್ಸ, ಕಿರನ್ ಪೊವೆಲ್, ಕ್ರೆಗ್ ಬ್ರೆತ್ ವೇಟ್, ನರಸಿಂಗ್ ದೇವ್‌ನಾರಾಯಣ್‌, ನಿಕಿತ ಮಿಲ್ಲರ್, ವೀರಸ್ವಾಮಿ ಪೆರುಮಾಳ್, ಶೇನ್ ಶಿಲ್ಡಿಂಗ್ ಫೋರ್ಡ್ ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ಅನುಭವಿಗಳು.ಬೆಂಗಳೂರಿನಲ್ಲಿ ಈಚೆಗೆ ಮುಕ್ತಾಯವಾದ  ‘ಎ’ ಏಕದಿನ ಸರಣಿಯಲ್ಲಿ ಯುವರಾಜ್ ಸಿಂಗ್ ಬಳಗದ ವಿರುದ್ಧ  2–1ರಿಂದ ಜಯಭೇರಿ ಬಾರಿಸಿ ಬಂದಿರುವ ಕೆರಿಬಿಯನ್ ಬಳಗವು ಪೂಜಾರ ‘ಚಿಂಟೂ’ ಬಳಗವನ್ನು ಹಣಿಯುವ ಹುಮ್ಮಸ್ಸಿನಲ್ಲಿದೆ. ‘ಸ್ಪೋರ್ಟಿಂಗ್ ವಿಕೆಟ್’ ಎಂಬ ಹೆಗ್ಗಳಿಕೆಯಿರುವ ಗಂಗೋತ್ರಿಯಲ್ಲಿ ಬೆಳಿಗ್ಗೆಯ ಮೊದಲ ಒಂದು ತಾಸು ಮತ್ತು ದಿನದಾಟದ ಕೊನೆಯ 45 ನಿಮಿಷಗಳಲ್ಲಿ ಕುಕ್ಕರಹಳ್ಳಿ ಕೆರೆಯ ಮೇಲಿಂದ ಬೀಸುವ ಗಾಳಿಯೇ ನಿರ್ಣಾಯಕ. ಈ ಸಮಯವು ಬೌಲರ್ ಗಳ ‘ಚಾಣಕ್ಷತೆ’ಯೊಂದಿಗೆ ಕೈಜೋಡಿಸುವುದು ಖಚಿತ.ಬೆಂಗಳೂರಿನ ಸರಣಿಯಲ್ಲಿ ಮಿಂಚಿದ್ದ ಪ್ರವಾಸಿ ಬಳಗದ ನಿಕಿತ ಮಿಲ್ಲರ್, ಜೋನಾಥನ್ ಕಾರ್ಟರ್ ಈ ಅವಧಿಯನ್ನು ಬಳಸಿಕೊಂಡರೆ, ಆತಿಥೇಯ ತಂಡದ ಪೂಜಾರ, ಕೆ.ಎಲ್. ರಾಹುಲ್, ಹರ್ಷದ್ ಖಡಿವಾಲೆ, ಮನಪ್ರೀತ್ ಜುನೇಜ ಅವರ ರನ್ ಗಳಿಕೆಗೆ ಕಡಿವಾಣ ಹಾಕಬಹುದು.ವಿಂಡೀಸ್ ತಂಡದ ಬ್ಯಾಟಿಂಗ್‌ ಸಾಲು ಕೂಡ ಬಲಿಷ್ಠವಾಗಿದೆ. ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಭರ್ಜರಿ ಶತಕ ಗಳಿಸಿದ್ದ ಕ್ರಿಕ್, ಸ್ಫೋಟಕ ಬ್ಯಾಟ್ಸ್ ಮನ್ ಕಿರನ್ ಪೋವೆಲ್, ಲಿಯೋನ್ ಜಾನ್ಸನ್, ಶಾಡ್ವಿಕ್ ವಾಲ್ಸನ್ ದೊಡ್ಡ ಮೊತ್ತ ಕಲೆ ಹಾಕುವಂತಹ ಸಮರ್ಥರು.

ಇವರನ್ನು ಎದುರಿಸಲು ಭಾರತ ತಂಡವು ಇಬ್ಬರು ಸ್ಪಿನ್ನರ್‌ ಮತ್ತು ಮೂವರು ಮಧ್ಯಮವೇಗಿಗಳೊಂದಿಗೆ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಆಡಿರುವ ಅನುಭವಿ ಮಧ್ಯಮ ವೇಗಿ ಅಶೋಕ ದಿಂಡಾ, ಮೊಹಮದ್ ಶಮಿ, ಧವಳ್ ಕುಲಕರ್ಣಿಗೆ ಅವಕಾಶ ಸಿಗಬಹುದು. ಎಡಗೈ ಸ್ಪಿನ್ನರ್ ಭಾರ್ಗವ್ ಭಟ್ ಮತ್ತು ಕಾಶ್ಮೀರಿ ಹುಡುಗ ಪರ್ವೇಜ್ ರಸೂಲ್ ಅವರ ಕೈಚಳಕವೂ ಪ್ರಮುಖ ಪಾತ್ರ ವಹಿಸುತ್ತದೆ.ಉಭಯ ತಂಡಗಳ ಆಟಗಾರರಿಗೆ ತಮ್ಮ ತಮ್ಮ ರಾಷ್ಟ್ರಗಳ ತಂಡಗಳಿಗೆ ಆಯ್ಕೆಯಾಗುವ ಏಣಿಯಾಗಿರುವ  ‘ಎ’ ಟೆಸ್ಟ್ ಟೂರ್ನಿಯ ಮೊದಲ ಪಂದ್ಯಕ್ಕೆ ವೇದಿಕೆಯಾಗುತ್ತಿರುವ ‘ಮಲ್ಲಿಗೆ ನಗರಿ’ಯು ಯಾರ ಕೊರಳಿಗೆ ವಿಜಯಮಾಲೆಯನ್ನು ಹಾಕಲಿದೆ ಎಂಬ ಕುತೂಹಲ ಈಗ ಕುಡಿಯೊಡೆದಿದೆ.ತಂಡಗಳು ಇಂತಿವೆ

ಭಾರತ ‘ಎ’ : ಚೇತೇಶ್ವರ ಪೂಜಾರ (ನಾಯಕ), ಜೀವನಜ್ಯೋತ್ ಸಿಂಗ್, ಕೆ.ಎಲ್. ರಾಹುಲ್, ಮನಪ್ರೀತ್ ಜುನೇಜ, ರಜತ್ ಪಲಿವಾಲ್, ಹರ್ಷದ್ ಖಡಿವಾಲೆ, ಪರ್ವೇಜ್ ರಸೂಲ್, ಭಾರ್ಗವ್ ಭಟ್, ಈಶ್ವರಚಂದ್ ಪಾಂಡೆ, ಮೊಹಮದ್ ಶಮಿ, ಅಶೋಕ ದಿಂಡಾ, ರೋಹಿತ್ ಮೋಟವಾನಿ (ವಿಕೆಟ್ ಕೀಪರ್), ಧವಳ್ ಕುಲಕರ್ಣಿ, ಪರಸ್ ಡೋಗ್ರ.

ತರಬೇತುದಾರ: ಲಾಲಚಂದ್ ರಜಪೂತ್.ವೆಸ್ಟ್ ಇಂಡೀಸ್ 'ಎ' : ಕರ್ಕ್‌ ಎಡ್ವರ್ಡ್ಸ್ (ನಾಯಕ), ಕಿರನ್ ಪೋವೆಲ್, ಕ್ರೇಗ್ ಬೇರತ್‌ ವೇಟ್, ಜೋನಾಥನ್ ಕಾರ್ಟರ್, ಶೆಲ್ಡನ್ ಕಾಟ್ರೆಲ್, ಮಿಗೆಲ್ ಕಮ್ಮಿಂಗ್ಸ್, ನರಸಿಂಗ್ ದೇವ ನಾರಾಯಣ್‌, ಅಸ್ಸದ್ ಫುಡಿನ್, ಜಮೇರ್ ಹ್ಯಾಮಿಲ್ಟನ್, ಡಿಲ್ರೋನ್ ಜಾನ್ಸನ್, ಲಿಯೋನ್ ಜಾನ್ಸನ್, ನಿಕಿತ ಮಿಲ್ಲರ್, ವೀರಸ್ವಾಮಿ ಪೆರುಮಾಳ್, ಶೇನ್ ಶಿಲ್ಡಿಂಗ್ ಫೋರ್ಡ್, ಚಾಡ್ವಿಕ್ ವಾಲ್ಟನ್ (ವಿಕೆಟ್ ಕೀಪರ್), ಆ್ಯಸ್ಲೆ ನರ್ಸಿ. 

ತರಬೇತುದಾರ: ಬೆನೆಟ್ ಜೂನಿಯರ್.ಅಂಪೈರ್ : ಅಮಿಶ್ ಸಾಹೇಬ್, ಎ. ನಂದಕಿಶೋರ್.  ಪಂದ್ಯದ ರೆಫರಿ: ಸಂಜಯ್ ಪಾಟೀಲ.

ಸಮಯ: ಬೆಳಿಗ್ಗೆ 9.30 ರಿಂದ 11.30

ಮಧ್ಯಾಹ್ನ 12.10ರಿಂದ 2.10

ಮಧ್ಯಾಹ್ನ 2.30 ರಿಂದ 4.30.

ಸ್ಥಳ: ಗಂಗೋತ್ರಿ ಗ್ಲೇಡ್ಸ್, ಮಾನಸಗಂಗೋತ್ರಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry