ಬುಧವಾರ, ಮೇ 18, 2022
25 °C

ವಿಜಯಶಾಂತಿ ಮತ್ತೆ ಬಿಜೆಪಿಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಶಾಂತಿ ಮತ್ತೆ ಬಿಜೆಪಿಗೆ?

ಹೈದರಾಬಾದ್:   ತೆಲುಗು ಚಿತ್ರರಂಗದ ಲೇಡಿ ಅಮಿತಾಭ್, ನಟಿ ವಿಜಯಶಾಂತಿ ಟಿಆರ್‌ಎಸ್ ತೊರೆದು ಬಿಜೆಪಿ ಸೇರಲಿದ್ದಾರೆಯೇ?

ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ತಮ್ಮ ಜನ ಚೇತನ ಯಾತ್ರೆಯೊಂದಿಗೆ ಬುಧವಾರ  ಗಾಜ್ವೆಲ್ ಬಳಿ ಆಗಮಿಸಿದಾಗ ಹಾರ ಹಿಡಿದು ಕಾಯುತ್ತಿದ್ದ ಟಿಆರ್‌ಎಸ್ ಸಂಸದೆ ವಿಜಯಶಾಂತಿ ಬಿಜೆಪಿ ನಾಯಕರನ್ನೂ ಅಚ್ಚರಿಗೊಳಿಸಿದರು.

ಆದರೆ ಕರೀಂನಗರ ಜಿಲ್ಲೆಗೆ ಹೊಂದಿಕೊಂಡಂತಿರುವ ತಮ್ಮ ತವರು ಸ್ಥಳ ಸಿದ್ದಿಪೇಟ್‌ನಿಂದ ಈ ಯಾತ್ರೆ ಹಾದು ಹೋದರೂ ಟಿಆರ್‌ಎಸ್ ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್  ಅಡ್ವಾಣಿ ಅವರನ್ನು ಭೇಟಿ ಮಾಡುವ ಗೋಜಿಗೆ ಹೋಗಲಿಲ್ಲ.

ವಿಜಯಶಾಂತಿ ಬಿಜೆಪಿ ಮೂಲಕವೇ ರಾಜಕೀಯ ಪ್ರವೇಶ ಮಾಡಿದವರು. ಮಾಜಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ವಿದ್ಯಾಸಾಗರ್ ರಾವ್ 2003ರಲ್ಲಿ ವಿಜಯಶಾಂತಿ ಅವರಿಗೆ ಅಡ್ವಾಣಿ ಪರಿಚಯ ಮಾಡಿಸಿದ್ದರು. ರಾಜ್ಯಸಭಾ ಸ್ಥಾನಕ್ಕಾಗಿ ಅಡ್ವಾಣಿ ತಮ್ಮ ಬದಲಿಗೆ ಹೇಮಮಾಲಿನಿ ಅವರನ್ನು ಆಯ್ಕೆ ಮಾಡಿದಾಗ ಕೋಪಗೊಂಡ ವಿಜಯಶಾಂತಿ ಬಿಜೆಪಿ ತೊರೆದಿದ್ದರು.

ಬುಧವಾರ ಪ್ರಗ್ಯಾಪುರದಿಂದ ಹೈದರಾಬಾದ್‌ವರೆಗೆ ವಿಜಯಶಾಂತಿ ಜನ ಚೇತನ ಯಾತ್ರೆಯಲ್ಲಿ ಅಡ್ವಾಣಿ ಅವರೊಂದಿಗೆ ಭಾಗವಹಿಸಿದ್ದರು.

ವಿಜಯಶಾಂತಿ ಶೀಘ್ರವೇ ಬಿಜೆಪಿಗೆ ಸೇರ್ಪಡೆಯಾಗಿ 2014ರ ಲೋಕಸಭಾ ಚುನಾವಣೆಗೆ ಪಕ್ಷದ ಟಿಕೆಟ್ ಪಡೆಯಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಆರೋಪಗಳಿವೆ. ತೆಲಂಗಾಣ ರಾಜ್ಯದ ಕನಸು ನನಸಾಗುವುದು ಎನ್‌ಡಿಎ ಆಡಳಿತದಲ್ಲಿ ಮಾತ್ರ. ಕಾಂಗ್ರೆಸ್ ಆಡಳಿತದಲ್ಲಲ್ಲ ಎಂದೂ ಅವರು ಸಾರ್ವಜನಿಕ ಸಭೆಯೊಂದರಲ್ಲಿ ಹೇಳಿದ್ದಾರೆ.

`ಕಾಂಗ್ರೆಸ್ ಎಂದಿಗೂ ತೆಲಂಗಾಣವನ್ನು ರಾಜ್ಯವಾಗಿ ಪರಿಗಣಿಸುವುದಿಲ್ಲ. ಆದರೆ ನಮ್ಮ ಪಕ್ಷದ ಅಧ್ಯಕ್ಷ ಚಂದ್ರಶೇಖರರಾವ್ ಕಾಂಗ್ರೆಸ್ಸನ್ನು ನಂಬಿಕೊಂಡಿರುವುದಕ್ಕೆ ನನಗೆ ವಿಷಾದವಿದೆ. ಆದರೆ ಅವರು ನಮ್ಮ ನಾಯಕರು. ಅವರ ಮಾರ್ಗದರ್ಶನದಲ್ಲಿ ನಾನು ನಡೆಯಬೇಕು~ ಎಂದು ಅವರು ವರದಿಗಾರರಿಗೆ ತಿಳಿಸಿದ್ದಾರೆ.

ಅಡ್ವಾಣಿ ಅವರನ್ನು ಭೇಟಿ ಮಾಡಿದ ಬಳಿಕ `ಬಿಜೆಪಿ ಸೇರುವಿರಾ~ ಎಂಬ ಪ್ರಶ್ನೆಗೆ ನೇರವಾಗಿ ಉತ್ತರಿಸಲು ನಿರಾಕರಿಸಿದ ಅವರು `ತೆಲಂಗಾಣವನ್ನು ಎನ್‌ಡಿಎ ನೀಡುತ್ತದೆ. ಕಾಂಗ್ರೆಸ್ ಆಡಳಿತ ಕೊನೆಗೊಳ್ಳುವುದನ್ನು ಟಿಆರ್‌ಎಸ್ ನೋಡಬೇಕಾಗುತ್ತದೆ~ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.