ಗುರುವಾರ , ಮೇ 19, 2022
21 °C

ವಿಜಯಶ್ರೀಪುರ, ಕುರುಬಾರಹಳ್ಳಿ ಒತ್ತುವರಿ ತೆರವಿಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ನಗರದ ವಿಜಯಶ್ರೀಪುರ ಹಾಗೂ ಕುರುಬಾರಹಳ್ಳಿ ಪ್ರದೇಶಗಳಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಜಮೀನುಗಳನ್ನು ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯುವಂತೆ ಜಿಲ್ಲಾಧಿಕಾರಿ ಹರ್ಷಗುಪ್ತ ಅಧಿಕಾರಿಗಳಿಗೆ  ಕಟ್ಟುನಿಟ್ಟಿನ ಸೂಚನೆ ನೀಡಿದರು.ಡಿಸಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಅವರು ಇತ್ತೀಚೆಗೆ ತಾವು  ತಪಾಸಣೆ ನಡೆಸಿದ ವಿಜಯಶ್ರೀಪುರ ಸರ್ವೆ ಸಂಖ್ಯೆ 1 ಹಾಗೂ ಕುರುಬಾರಹಳ್ಳಿ ಸರ್ವೆ ಸಂಖ್ಯೆ 4ರ ಬಗ್ಗೆ ಸಂಬಂಧಿಸಿದ  ಅಧಿಕಾರಿಗಳೊಡನೆ ವಿವರ ಚರ್ಚೆ ನಡೆಸಿದರು. ವಿಜಯಶ್ರೀಪುರದಲ್ಲಿ ಹಳ್ಳ ಮತ್ತು ಪೂರ್ಣಯ್ಯ ನಾಲೆಯ ಬಗ್ಗೆ ಭೂಮಾಪನ ಇಲಾಖೆ ಗುರುತಿಸಿ ವರದಿ  ನೀಡಬೇಕು. ಇದಕ್ಕೆ ಸಂಬಂಧಿಸಿದಂತೆ ಕೆಲವು ಒತ್ತುವರಿಗಳ ಕಂಡು ಬಂದಿದ್ದು, ತಹಶೀಲ್ದಾರ್ ಮತ್ತು ಮುಡಾ  ಒತ್ತುವರಿ ತೆಗೆದುಹಾಕಬೇಕು. ಜಯಶ್ರೀಪುರ ಬಡಾವಣೆಯ ಖಾಲಿ ಜಾಗಗಳನ್ನು ರಕ್ಷಿಸಲು ಮುಡಾ ತಕ್ಷಣವೇ  ಕ್ರಮ ಕೈಗೊಂಡು ವರದಿ ನೀಡಬೇಕು ಹಾಗೂ ಈ ಬಡಾವಣೆಯಲ್ಲಿ ರಾಜ್ಯ ಉಚ್ಚನ್ಯಾಯಾಲಯ ಹಾಗೂ  ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಸಕ್ರಮಗೊಳಿಸಬೇಕಾದ ಪ್ರದೇಶಗಳನ್ನು ಮುಡಾ ಆಯುಕ್ತರು  ನಮೂದಿಸಿ ಸಕ್ರಮಗೊಳಿಸುವ ಸಂಬಂಧ ನ್ಯಾಯಾಲಯದ ಆದೇಶದೊಡನೆ ವರದಿ ನೀಡಬೇಕು ಎಂದು ಹೇಳಿದರು.ಭೂಮಾಪನ ಇಲಾಖೆ, ಮುಡಾ ವಶಪಡಿಸಿಕೊಂಡಿರುವ 94 ಎಕರೆ ಪ್ರದೇಶವನ್ನು ಸ್ಪಷ್ಟವಾಗಿ  ಕಂಡುಹಿಡಿಯಬೇಕು. ವಿಜಯಶ್ರೀಪುರ ಬಡಾವಣೆಗೆ ಸಂಬಂಧಿಸಿದಂತೆ ಹುಣಸೂರು ರಸ್ತೆಯಿಂದ ಬರುವಾಗ ಮುಖ್ಯ  ರಸ್ತೆಯಲ್ಲಿ ಅನೇಕ ವಾಣಿಜ್ಯ ಅಂಗಡಿಗಳು ಹಾಗೂ ಆಸ್ತಿಗಳು ಕಂಡುಬದಿವೆ. ಇವುಗಳನ್ನು ತೆರವುಗೊಳಿಸಲು  ಕಾನೂನು ಸಮಸ್ಯೆಗಳಿರುವ ಬಗ್ಗೆ ಮುಡಾ ಆಯುಕ್ತರು ಪರಿಶೀಲಿಸಿ ವರದಿ ನೀಡಬೇಕು ಎಂದರುಬಹು ಕಚೇರಿ ಸಂಕೀರ್ಣ ಕಟ್ಟಡ ನಿರ್ಮಾಣ: ವಿಜಯಶ್ರೀಪುರ ಬಡಾವಣೆ ಸರ್ವೆ ನಂ. 1ರಲ್ಲಿ ಹುಣಸೂರು ರಸ್ತೆಯ ಮತ್ತೊಂದು ಪಕ್ಕ 27 ಎಕರೆ ಖಾಲಿ  ಜಾಗದ ಲಭ್ಯತೆ ಇದೆ. ಈ ಸ್ಥಳವು ಸರ್ಕಾರದ ಬಹು ಕಚೇರಿ ಸಂಕೀರ್ಣ ಕಟ್ಟಡ ನಿರ್ಮಿಸಲು ಸೂಕ್ತವಾಗಿದೆ.  ಮುಡಾ ಆ ಸ್ಥಳವನ್ನು ಡಿಸಿ ಕಚೇರಿಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಲು ಸೂಚಿಸಿದರು.ಕುರುಬಾರಹಳ್ಳಿಸರ್ವೆ ನಂ. 4ರಲ್ಲಿ ಗುರುತಿಸಬೇಕಾಗಿರುವ ಅನೇಕ ಬ್ಲಾಕ್‌ಗಳಲ್ಲಿ ಕೆಲವು ಜನರ ಸ್ವಾಧೀನದಲ್ಲಿರುವುದು ಹಾಗೂ ಸ್ವಾಧೀನದಲ್ಲಿರುವಂತಹ ಚಿಹ್ನೆಗಳಿರುವುದು ಕಂಡುಬರುತ್ತದೆ. ಆದರೆ ಅಂತಹವರು ತಮ್ಮ ಮಾಲಿಕತ್ವ ಸಾಬೀತುಪಡಿಸುವ ಯಾವುದೇ ದಾಖಲೆ ಹಾಜರುಪಡಿಸಿಲ್ಲ. ಇದಲ್ಲದೆ ಸರ್ಕಾರದ ಕಂದಾಯ  ದಾಖಲೆಗಳಲ್ಲಿ ಇಂತಹ ಬ್ಲಾಕ್‌ಗಳಲ್ಲಿ ಖಾಸಗಿ ವ್ಯಕ್ತಿಗಳು ಇದ್ದಲ್ಲಿ ಅಂತಹ ಯಾವುದೇ ದಾಖಲೆ ಇಲ್ಲ. ಆದ್ದರಿಂದ  ಭೂಮಾಪನ ಉಪನಿರ್ದೇಶಕರು ಇಂತಹ ಬ್ಲಾಕ್‌ಗಳ ಬಗ್ಗೆ (ಉದಾಹರಣೆಗೆ ಬ್ಲಾಕ್ ನಂ.137) ಒಂದು ಪಟ್ಟಿ  ತಯಾರಿಸಿ ನೀಡಬೇಕು. ಇದರಿಂದ ಅಂತಹ ಪ್ರದೇಶಗಳಲ್ಲಿ ಸರ್ಕಾರ ವಶಕ್ಕೆ ಪಡೆಯಲು ಕಾನೂನು ಕ್ರಮ ಜರುಗಿಸಲು ಅನುಕೂಲವಾಗುತ್ತದೆ.ಇಲ್ಲಿ ಎರಡು ಕೆರೆಗಳಿವೆ. ಒಂದು ತಾವರೆಕಟ್ಟೆ ಹಾಗೂ ಮತ್ತೊಂದು ಬ್ಲಾಕ್ ನಂ.59ರಲ್ಲಿರುವ ಪೀಟರ್ ಫಾರಂನವರು ಒತ್ತುವರಿ ಮಾಡಿರುವಂತಹುದು. ಡಿಡಿಎಲ್‌ಆರ್ ಅವರು ಈ ಕೆರೆಗಳ ಗಡಿಗಳನ್ನು ಕಂದಾಯ ದಾಖಲೆಗಳು ಅಂದರೆ ಆರ್‌ಟಿಸಿ ಅಥವಾ ಸಿಟಿ ಸರ್ವೆ ರೆಕಾರ್ಡ್ ಇತ್ಯಾದಿಗಳ ಆಧಾರದಲ್ಲಿ ಗುರುತಿಸಿ ಈ ಬಗ್ಗೆ   ವರದಿ ನೀಡಬೇಕು. ಕಾರಂಜಿ ಕೆರೆಗೆ ನೀರು ಹರಿದುಬರುವ ಮಾರ್ಗವನ್ನು ಅನೇಕ ಕಡೆಗಳಲ್ಲಿ ಅನೇಕ ಖಾಸಗಿ  ವ್ಯಕ್ತಿಗಳು ತಡೆ ಒಡ್ಡಿರುವುದು ಕಂಡುಬಂದಿರುತ್ತದೆ. ಸರ್ವೆ ವರದಿ ಈ ನಾಲೆಯ ನಿಖರತೆ ತಿಳಿಸುತ್ತದೆ.  ಈ ನಾಲೆಯ ದಾರಿ ಸುಗಮಗೊಳಿಸಿ ಮಳೆಗಾಲದಲ್ಲಿ ಕಾರಂಜಿ ಕೆರೆಗೆ ನೀರು ಹರಿದುಬರಲು ಸರಿಪಡಿಸಲು ತಿಳಿಸಬೇಕು.ಬ್ಲಾಕ್ ನಂ. 28ರಲ್ಲಿನ 17.20 ಎಕರೆ ಪ್ರದೇಶವು ಮೈಸೂರು ವಿಶ್ವವಿದ್ಯಾನಿಲಯದ ಸ್ವತ್ತಿನಲ್ಲಿದೆ. ಈ  ಪ್ರದೇಶದಲ್ಲಿ ಇಬ್ಬರು ಖಾಸಗಿ ವ್ಯಕ್ತಿಗಳು ತಲಾ 4 ಎಕರೆ ಪ್ರದೇಶ ತಮ್ಮದೆಂದು ಹೇಳುತ್ತಿರುವುದಾಗಿ  ಸರ್ವೆಯರ್ ಗಳು ತಿಳಿಸಿರುತ್ತಾರೆ. ಈ ಬಗ್ಗೆ ಸರ್ವೋಚ್ಚ ನ್ಯಾಯಾಲ ಯದಲ್ಲಿ ಪ್ರಕರಣ ಇರುವುದಾಗಿ ಕಂಡುಬರುತ್ತದೆ. ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳು ಈ ಬಗ್ಗೆ ಗಮನಹರಿಸಿ ಈ ಕಚೇರಿಗೆ ವಿವರ ನೀಡಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ.ಆಡಳಿತ ತರಬೇತಿ ಸಂಸ್ಥೆಯ ಎದುರಿನಲ್ಲಿರುವ ಜಾಕಿ ಕ್ವಾರ್ಟರ್ಸ್‌ ಎಂದು ಕರೆಯುವ ಪ್ರದೇಶವು ಪೊಲೀಸ್  ಇಲಾಖೆಯ ಸ್ವಾಧೀನದಲ್ಲಿದೆ. ಈ ಪ್ರದೇಶಕ್ಕೆ ಹೊಂದಿಕೊಂಡಂತೆ ರಸ್ತೆ ಬದಿಯಲ್ಲಿ ಒಂದಷ್ಟು ಜಾಗವು ಖಾಲಿ  ಇರುವುದು ಕಂಡುಬರುತ್ತದೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತರು ಪರಿಶೀಲಿಸಿ, ವರದಿಯನ್ನು ಕಳುಹಿಸಲು  ಕೋರಲಾಗಿದೆ. ಇದು ಬ್ಲಾಕ್ ಸಂ.6994ಕ್ಕೆ ಸಂಬಂಧಿಸಿದ್ದಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.ಬ್ಲಾಕ್ ನಂ.111ರಲ್ಲಿ ಪ್ಲಾನೆಟ್ ಎಕ್ಸ್ ಹಾಗೂ ಇತರ ಖಾಸಗಿ ವ್ಯಕ್ತಿಗಳ ಸುಪರ್ದಿನಲ್ಲಿ ಹೆಚ್ಚುವರಿ ಭೂಮಿ  ಇರುವುದು ಕಂಡುಬರುತ್ತದೆ. ನಕಾಶೆಯಂತೆ ಈ ಹೆಚ್ಚುವರಿ ಪ್ರದೇಶವು ಶೂಟಿಂಗ್ ರೇಂಜ್‌ಗೆ ಸೇರಿರುವುದು  ನಿಖರವಾಗಿ ಕಂಡುಬರುತ್ತದೆ. ಡಿಡಿಎಲ್‌ಆರ್ ಅವರು ಈ ಬಗ್ಗೆ ಪರಿಶೀಲಿಸಿ ಒಂದು ನಕಾಶೆ ಸಿದ್ಧಪಡಿಸಿ ನೀಡಿದ್ದಲ್ಲಿ  ಅದರಂತೆ ಹೆಚ್ಚುವರಿ ಸ್ವಾಧೀನದಲ್ಲಿರುವ ಈ ಖಾಸಗಿ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ವಹಿಸಬಹುದಾಗಿದೆ.ಬ್ಲಾಕ್ ನಂ.87,88,98 ಇತ್ಯಾದಿಗಳಲ್ಲಿ ಕೆಲವೆಡೆ ತುಂಡು ಜಾಗಗಳಲ್ಲಿ ತಾತ್ಕಾಲಿಕ ಬೇಲಿ ನಿರ್ಮಿಸಿರುವುದು  ಹೊರತುಪಡಿಸಿದರೆ, ಯಾವ ಖಾಸಗಿ ವ್ಯಕ್ತಿಗಳು ಸ್ವಾಧೀನದಲ್ಲಿಲ್ಲದಿರುವುದನ್ನು ಗಮನಿಸಲಾಗಿದೆ. ವಿಚಾರಣೆ  ಸಮಯದಲ್ಲಿ ಯಾವುದೇ ಖಾಸಗಿ ವ್ಯಕ್ತಿಗಳು ಈ ಜಾಗವು ತಮ್ಮದೆಂದು ಹೇಳಿಕೆ ನೀಡಿದ್ದಾಗಲಿ ಅಥವಾ ದಾಖಲೆಗಳನ್ನಾಗಲಿ ಹಾಜರುಪಡಿಸಿರುವುದಿಲ್ಲ. ಮೈಸೂರು ತಹಶೀಲ್ದಾರ್ ಅವರು ಡಿಡಿಎಲ್‌ಆರ್ ರವರಿಗೆ ಸಹಕರಿಸಿ  ಈ ಎಲ್ಲಾ ಬ್ಲಾಕ್ ಗಳನ್ನು ಒಂದುಗೂಡಿಸಿ ಒಂದು ಬ್ಲಾಕ್ ಎಂದು ತೋರಿಸಿ ಅದನ್ನು ಸರ್ಕಾರಿ ಸ್ವತ್ತು, ಅದು ಸರ್ಕಾರದ ವಶದಲ್ಲಿದೆ ಎಂದು ತೋರಿಸಬೇಕು.

ಮುಡಾ ಆಯುಕ್ತರು ಅವರ ಅಧೀನದಲ್ಲಿರುವ ಮುಡಾ ಸರ್ವೆಯರ್‌ಗೆ ನಿರ್ದೇಶನ ನೀಡಿ, ಸರ್ವೆ ನಂ.ನಲ್ಲಿ ಮುಡಾದವರು ಭೂ ಸ್ವಾಧೀನಪಡಿಸಿಕೊಳ್ಳಲಿರುವ ಪ್ರದೇಶ ವನ್ನು ಅದೇ ನಕಾಶೆಯಲ್ಲಿ ತೋರಿಸುವಂತೆ ಸೂಚಿ

ಸಭೆಯಲ್ಲಿ ಮುಡಾ ಆಯುಕ್ತ ಡಾ. ಸಿ.ಜಿ. ಬೆಟಸೂರ ಮಠ, ಕಾರ್ಯದರ್ಶಿ ವಿದ್ಯಾಕುಮಾರಿ, ಮುಡಾ ನಗರ ಯೋಜನೆ ಜಂಟಿನಿರ್ದೇಶಕ ಎಂ.ಎನ್. ಕುಮಾರ್, ಭೂದಾಖಲೆಗಳ ಉಪನಿರ್ದೇಶಕ  ಕುಲಕರ್ಣಿ, ಡಿಸಿಪಿ  ಬಸವರಾಜ್ ಮಾಲಗತ್ತಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.