ವಿಜಯಾ ಬ್ಯಾಂಕ್ ಶುಭಾರಂಭ

7

ವಿಜಯಾ ಬ್ಯಾಂಕ್ ಶುಭಾರಂಭ

Published:
Updated:
ವಿಜಯಾ ಬ್ಯಾಂಕ್ ಶುಭಾರಂಭ

ಬೆಂಗಳೂರು: ಸಾಕಷ್ಟು ಹೋರಾಟ, ಮರು ಹೋರಾಟ ಕಂಡು ಬಂದ ಪಂದ್ಯದಲ್ಲಿ ಆತಿಥೇಯ ವಿಜಯಾ ಬ್ಯಾಂಕ್ ತಂಡದವರು ಸಮರ್ಥ ಪ್ರದರ್ಶನ ತೋರಿದರು. ಈ ಪರಿಣಾಮ ಕರ್ನಾಟಕ ಪುರುಷರ ತಂಡ 27ನೇ ಫೆಡರೇಷನ್ ಕಪ್ ಬ್ಯಾಸ್ಕೆಟ್‌ಬಾಲ್ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿ ಶುಭಾರಂಭ ಮಾಡಿತು.ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ವಿಜಯಾ ಬ್ಯಾಂಕ್ 72-68 ಪಾಯಿಂಟ್‌ಗಳಿಂದ ಕೇರಳದ ಸೆಂಟ್ರಲ್ ಮತ್ತು ಎಕ್ಸೈಜ್ ತಂಡವನ್ನು ಮಣಿಸಿತು. ಆತಿಥೇಯ ತಂಡದ ಶ್ರೀನಿವಾಸ್ ನಾಯಕ್ ಹಾಗೂ ಅರವಿಂದ್ ಮತ್ತು ಸಂಜಯ್ ರಾಜ್ ಉತ್ತಮ ಪ್ರದರ್ಶನ ತೋರಿದರು.ಇವರು ಕ್ರಮವಾಗಿ ತಲಾ 17, 19 ಮತ್ತು 15 ಅಂಕ ಗಳಿಸಿದರು. ಕರ್ನಾಟಕ ಮೊದಲಾರ್ಧ ಅಂತ್ಯ ಕಂಡಾಗ 34-33 ಗಳಿಸಿ ಕೇವಲ ಒಂದು ಅಂಕದಿಂದ ಮುನ್ನಡೆಯಲ್ಲಿತ್ತು. ನಂತರ ಚುರುಕಾದ ಆಟ ಪ್ರದರ್ಶಿಸಿ ಪಂದ್ಯವನ್ನು ಗೆಲ್ಲುವ ಜೊತೆಗೆ ಸ್ಥಳೀಯ ಕ್ರೀಡಾಭಿಮಾನಿಗಳ ಮನವನ್ನೂ ಗೆದ್ದರು. ಮಹಿಳಾ ತಂಡಕ್ಕೆ ನಿರಾಸೆ: ಕರ್ನಾಟಕ ಮಹಿಳಾ ತಂಡದವರು ಮೊದಲ ಪಂದ್ಯದಲ್ಲಿ ನಿರಾಸೆ ಅನುಭವಿ ಸಿದರು. ಕೇರಳದ ಆಟಗಾರ್ತಿಯರು 85-79 ಪಾಯಿಂಟ್‌ಗಳಿಂದ ಕರ್ನಾಟಕವನ್ನು ಮಣಿಸಿದರು.ಇದೇ ವಿಭಾಗದ ಇತರ ಪಂದ್ಯಗಳಲ್ಲಿ ತಮಿಳುನಾಡು 60-20 ಅಂಕಗಳಿಂದ ಆಂಧ್ರಪ್ರದೇಶದ ಮೇಲೂ, ಮಹಾರಾಷ್ಟ್ರ 78-62ರಲ್ಲಿ ಚತ್ತೀಸ್‌ಗಡದ ವಿರುದ್ಧವೂ ಜಯ ಸಾಧಿಸಿತು.ಚಾಲನೆ: ಇದಕ್ಕೂ ಮುನ್ನ ನಡೆದ ಕಾರ್ಯಕ್ರಮ ದಲ್ಲಿ ಯುವಜನ ಸೇವಾ ಹಾಗೂ ಕ್ರೀಡಾ ಸಚಿವ ಅಪ್ಪಚ್ಚು ರಂಜನ್ ಫೆಡರೇಷನ್ ಕಪ್ ಚಾಂಪಿಯನ್‌ಷಿಪ್‌ಗೆ ಚಾಲನೆ ನೀಡಿದರು.ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಕೆ. ಗೋವಿಂದರಾಜ್ ಸ್ವಾಗತ ಭಾಷಣ ಮಾಡಿದರು. ಯುವಜನ ಸೇವಾ ಇಲಾಖೆಯ ನಿರ್ದೇಶಕ ಬಲದೇವ ಕೃಷ್ಣ, ಕರ್ನಾಟಕ ಬ್ಯಾಸ್ಕೆಟ್‌ಬಾಲ್ ಸಂಸ್ಥೆ (ಕೆಬಿಎ) ಅಧ್ಯಕ್ಷ ಓಂ ಪ್ರಕಾಶ್, ಕೆಒಎ ಪ್ರಧಾನ ಕಾರ್ಯದರ್ಶಿ ಅನಂತರಾಜು, ಅಂತರರಾಷ್ಟ್ರೀಯ ಮಾಜಿ ಆಟಗಾರ ಆರ್. ರಾಜನ್, ಮಾಜಿ ಆಟಗಾರ್ತಿ ನಂದಿನಿ ಬಸಪ್ಪ ಹಾಗೂ ಭಾರತ ಬ್ಯಾಸ್ಕೆಟ್‌ಬಾಲ್ ಫೆಡರೇಷನ್ ಕಾರ್ಯದರ್ಶಿ ಅಜಯ್ ಸೂದ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry