ವಿಜಯ್‌ಗೆ ಕನ್ನಡದ ಪೇಟ

7

ವಿಜಯ್‌ಗೆ ಕನ್ನಡದ ಪೇಟ

Published:
Updated:

`ಎಲ್ಲರೂ ಚೆನ್ನಾಗಿದೀರಾ...~ ಎಂದು ತಮಿಳು ನಟ ವಿಜಯ್ ಕನ್ನಡದಲ್ಲಿ ಕೇಳಿದಾಗ ನೆರೆದಿದ್ದ ತಮಿಳಭಿಮಾನಿಗಳು ಕೇಕೆ ಹಾಕಿದರು. ಬೆಂಗಳೂರಿನ ಪೂರ್ಣಿಮಾ ಚಿತ್ರಮಂದಿರಕ್ಕೆ ಆಗಮಿಸಿದ್ದ ಅವರ ಮುಂದಿನ ಮಾತೆಲ್ಲವೂ ಹೊಮ್ಮಿದ್ದು ತಮಿಳಿನಲ್ಲೇ.`ವೇಲಾಯುಧಂ~ ತಮಿಳು ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುವ ಹಕ್ಕನ್ನು ನಿರ್ಮಾಪಕ ಕೆ.ಮಂಜು ಪಡೆದಿದ್ದಾರೆ. ಸಿನಿಮಾ ಪ್ರಚಾರದ ಕಾರಣಕ್ಕೆ ವಿಜಯ್ ಬರುತ್ತಾರೆಂಬ ವಿಷಯ ತಿಳಿದದ್ದೇ ಚಿತ್ರಮಂದಿರದ ಸುತ್ತಮುತ್ತ ಅಭಿಮಾನಿಗಳು ಜಮಾಯಿಸಿದ್ದರು. ವಿಜಯ್ ಕಣ್ತುಂಬಿಕೊಳ್ಳುವ ಧಾವಂತದಲ್ಲಿ ನುಗ್ಗಲು ಬಂದ ಕೆಲವರಿಗೆ ಪೊಲೀಸರ ಲಾಠಿ ಬಿಸಿ ಮುಟ್ಟಿಸಿತು.ಪುಟ್ಟ ಬಾಲಕನಿಂದ ಹಿಡಿದು ಮಧ್ಯವಯಸ್ಕರವರೆಗೆ ಅನೇಕರು ವಿಜಯ್ ಚಹರೆಯನ್ನೊಮ್ಮೆ ಇಣುಕಲು ಪಡಿಪಾಟಲು ಪಡುತ್ತಿದ್ದರು. `ವೇಲಾಯುಧಂ ತಮ್ಮ ವೃತ್ತಿ ಬದುಕಿನ ಬೇರೆ ರೀತಿಯ ಚಿತ್ರ.

 

ಜನರಿಗೆ ಇಷ್ಟವಾಗುವ ಅನೇಕ ಸಂಗತಿಗಳು ಅದರಲ್ಲಿವೆ. ಕರ್ನಾಟಕದಲ್ಲೂ ಚಿತ್ರವನ್ನು ಪ್ರೇಕ್ಷಕರು ಚೆನ್ನಾಗಿ ಸ್ವೀಕರಿಸುವಂತಾಗಲಿ~ ಎಂದು ಅವರು ಚುಟುಕಾಗಿ ಮಾತನಾಡಿದರು. ಚಿತ್ರ ನೂರು ದಿನ ಓಡಿ, ಮತ್ತೆ ವಿಜಯ್ ಇಲ್ಲಿಗೆ ಬರುವಂತಾಗಲಿ ಎಂಬುದು ಕೆ.ಮಂಜು ಬಯಕೆ. ಚಿತ್ರದ ಕೆಲವು ತುಣುಕುಗಳನ್ನು ಕೂಡ ಇದೇ ಸಂದರ್ಭದಲ್ಲಿ ತೋರಿಸಲಾಯಿತು.ಮೈಸೂರು ಪೇಟ ತೊಡಿಸಿ ವಿಜಯ್‌ಗೆ ಇದೇ ಸಂದರ್ಭದಲ್ಲಿ ಸನ್ಮಾನ ಕೂಡ ಮಾಡಲಾಯಿತು. ಅಭಿಮಾನಿಯೊಬ್ಬ ಕೊಟ್ಟ ಸಣ್ಣ  ಕತ್ತಿಯನ್ನು ಹಿಡಿದು ಅವರು ಪೋಸು ಕೊಟ್ಟರು. ಹಸ್ತಾಕ್ಷರಕ್ಕೆ ಕೈಚಾಚಿದಾಗ ಅದು ಸಿಗದೇಹೋದವರು ಬೇಸರದ ಮುಖ ಹೊತ್ತು ಮನೆಯತ್ತ ಭಾರದ ಹೆಜ್ಜೆಗಳನ್ನು ಹಾಕತೊಡಗಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry