ಮಂಗಳವಾರ, ಜನವರಿ 28, 2020
23 °C

ವಿಜಯ್ ಕುಮಾರ್‌ಗೆ ಬಂಗಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೋಹಾ (ಪಿಟಿಐ): ಭಾರತದ ವಿಜಯ್ ಕುಮಾರ್ ಅವರು ಇಲ್ಲಿ ನಡೆಯುತ್ತಿರುವ ಏಷ್ಯನ್ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ಸ್ವರ್ಣ ಪದಕ ಗೆದ್ದರು. ಆದರೆ ಲಂಡನ್ ಒಲಿಂಪಿಕ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು.ಸ್ಟ್ಯಾಂಡರ್ಡ್ ಪಿಸ್ತೂಲ್ ಶೂಟಿಂಗ್‌ನಲ್ಲಿ ಪದಕ ಗೆಲ್ಲುವ ಮಟ್ಟವನ್ನು ಮುಟ್ಟಿದರೂ ಒಲಿಂಪಿಕ್ ಅರ್ಹತಾ ಹಂತವನ್ನು ತಲುಪಲು ಮಾತ್ರ ಅವರಿಂದ ಸಾಧ್ಯವಾಗಲಿಲ್ಲ. ಸೇನಾ ಪಡೆಯ ಅಧಿಕಾರಿಯಾದ ವಿಜಯ್ ಸ್ಟ್ಯಾಂಡರ್ಡ್ ಪಿಸ್ತೂಲ್‌ನಲ್ಲಿ ವಿಫಲರಾದರೂ ಈಗಾಗಲೇ ಅವರು ರ‌್ಯಾಪಿಡ್ ಫೈರ್ ವಿಭಾಗದಲ್ಲಿ ಸ್ಪರ್ಧಿಸಲು ಭಾರತ ತಂಡದಲ್ಲಿ ಸ್ಥಾನ ಖಚಿತಪಡಿಸಿಕೊಂಡಿದ್ದಾರೆ.ವಿಜಯ್ ಹಾಗೂ ಚೀನಾದ ಯಾಂಗ್ ಜಿನ್ ಅವರು ಸ್ಟ್ಯಾಂಡರ್ಡ್ ಪಿಸ್ತೂಲ್‌ನಲ್ಲಿ ಲಭ್ಯವಿದ್ದ 600ರಲ್ಲಿ 572 ಪಾಯಿಂಟುಗಳನ್ನು ಗಿಟ್ಟಿಸಿದರು. ಆದರೆ ಒಳವೃತ್ತಕ್ಕೆ ಗುರಿಯಿಟ್ಟು ಹತ್ತು ಪಾಯಿಂಟುಗಳನ್ನು ಗಿಟ್ಟಿಸುವಲ್ಲಿ ಭಾರತದ ಶೂಟರ್ ಪ್ರಾಬಲ್ಯ ಮೆರೆದರು. ಜಿನ್ ಕೇವಲ ಹತ್ತರ ಪಾಯಿಂಟುಗಳನ್ನು ಗಿಟ್ಟಿಸಿದ್ದು 15 ಬಾರಿ. ಆದರೆ ವಿಜಯ್ 17 ಸಾರಿ ಹೀಗೆ ಒಳವೃತ್ತಕ್ಕೆ ಗುರಿಯಿಟ್ಟರು. ಆದ್ದರಿಂದ ಅಗ್ರಸ್ಥಾನ ಅವರದ್ದಾಯಿತು.150 ಸೆಕೆಂಡ್‌ನಲ್ಲಿ ಹತ್ತು ಶೂಟ್‌ನ ಮೊದಲ ಸರಣಿಯಲ್ಲಿ ವಿಜಯ್ 98 ಪಾಯಿಂಟುಗಳನ್ನು ಗಳಿಸಿದರು. ಇಪ್ಪತ್ತು ಹಾಗೂ ಹತ್ತು ಸೆಕೆಂಡ್‌ನ ಪ್ರಯತ್ನದ ಹೊತ್ತಿಗಾಗಲೇ ಅವರು ಚೀನಾದ ಸ್ಪರ್ಧಿಯಿಂದ ಕೇವಲ ಎರಡು ಪಾಯಿಂಟ್ ಹಿಂದೆ ಉಳಿದರು. ಆನಂತರ ಅಚ್ಚರಿ ಪಡುವ ರೀತಿಯಲ್ಲಿ ಚೇತರಿಕೆ ಕಂಡರು.ಈ ವಿಭಾಗದ ಸ್ಪರ್ಧೆಯಲ್ಲಿ ಕಂಚಿನ ಪದಕವು ಜಪಾನ್‌ನ ಟೊಮೊಹಿರೊ ಕಿಡಾ ಪಾಲಾಯಿತು.

ಅವರು 568 ಒಪಾಯಿಂಟುಗಳನ್ನು ಸಂಗ್ರಹಿಸಿದರು. ಭಾರತದ ಸಮರೇಶ್ ಜಂಗ್ (552) ಹಾಗೂ ಮಹಾವೀರ್ ಸಿಂಗ್ (542) ಅವರು ಕ್ರಮವಾಗಿ 16 ಹಾಗೂ 24ನೇ ಸ್ಥಾನ ಪಡೆದರು.ವಿಜಯ್, ಸಮರೇಶ್ ಹಾಗೂ ಮಹಾವೀರ್ ಅವರನ್ನೊಳಗೊಂಡ ಭಾರತ ತಂಡವು ಒಟ್ಟಾರೆ 1666 ಪಾಯಿಂಟುಗಳೊಂದಿಗೆ ಐದನೇ ಸ್ಥಾನಕ್ಕೆ ಸಮಾಧಾನಪಟ್ಟಿತು.

ಚೀನಾ (1695), ಥಾಯ್ಲೆಂಡ್ (1683) ಹಾಗೂ ಜಪಾನ್ (1680) ತಂಡದವರು ಕ್ರಮವಾಗಿ ಮೊದಲ ಮೂರು ಪಡೆದು, ವಿಜಯ ವೇದಿಕೆ ಏರಿದರು.

ಪ್ರತಿಕ್ರಿಯಿಸಿ (+)