ಮಂಗಳವಾರ, ನವೆಂಬರ್ 19, 2019
28 °C

ವಿಜಯ ಸಂವತ್ಸರದ ಫಲಾಫಲ...

Published:
Updated:

28ನೇ ಮಹಾಯುಗದಲ್ಲಿ ಕೃತ, ತ್ರೇತ, ದ್ವಾಪರಗಳು ಕಳೆದು ಇದೀಗ ಕಲಿಯುಗದ 5114ನೇ ವರ್ಷದಲ್ಲಿದ್ದೇವೆ. 1935ನೇ ಶಾಲೀವಾಹನ ಶಕದಲ್ಲಿ  `ವಿಜಯ'ವೆಂಬ  ಸಂವತ್ಸರದಲ್ಲಿದ್ದೇವೆ. ವಿಜಯ ಸಂವತ್ಸರದ ಶುಭಾಶುಭ ಫಲಗಳ ಸಂಕ್ಷಿಪ್ತ ಪರಿಚಯ ಇಂತಿದೆ.ವಿಜಯ ಸಂವತ್ಸರದಲ್ಲಿ ಚಾಂದ್ರಮಾನದವರಿಗೆ ಗುರುವು ರಾಜ, ಶನಿಯು ಮಂತ್ರಿ, ಶುಕ್ರನು ಸೈನ್ಯಾಧಿಪತಿ, ಅರ್ಘ, ಮೇಘಗಳ ಅಧಿಪತಿ ಆಗುವನು. ಕುಜ- ಸಸ್ಯನೀರಸಗಳ ಅಧಿಪತಿ, ರವಿ- ಧಾನ್ಯಾಧಿಪತಿ ಮತ್ತು ಗುರು- ರಸಾಧಿಪತಿಯೂ ಅಗುವರು.ಸರ್ಕಾರದ ಬೊಕ್ಕಸ ಸಮೃದ್ಧವಾಗಿ ತುಂಬಿರುವುದು. ಈ ವರ್ಷದಲ್ಲಿ ಗುರು ರಾಜನಾದುದರಿಂದ ಧಾರಾಳ ಮಳೆಯಾಗಿ ಎಲ್ಲ ವಿಧದ ಧಾನ್ಯಗಳು ಹುಲುಸಾಗಿ ಬೆಳೆಯುವವು. ಬಿಳಿ ಬಣ್ಣದ ಧಾನ್ಯಗಳು ವಿಶೇಷವಾಗಿ ಸಮೃದ್ಧಿಗೊಳ್ಳುವವು. ಭೂಮಿಯು ಫಲ, ಸಸ್ಯ ಸಂಕುಲಗಳಿಂದ ಕಂಗೊಳಿಸುವುದು. ಕೃಷಿಕರಿಗೆ ಸಂತೋಷ.ಜನರು ಸುಖಸಂತೋಷಗಳಿಂದ ಮೆರೆಯುವರು. ಬಿತ್ತನೆ ಬೀಜಗಳು, ಧಾನ್ಯಗಳು, ಗೆಡ್ಡೆಗೆಣಸು ಮೊದಲಾದವು ಸ್ವಲ್ಪ ತುಟ್ಟಿಯಾಗುವುದು. ರಾಷ್ಟ್ರದಲ್ಲಿ ಎಲ್ಲಾ ಕಡೆ ವಿಜಯ ಕಾಣಬಹುದಾಗಿದೆ. ಜಲಾಶಯಗಳು ನೀರಿನಿಂದ ತುಂಬಿರುವವು. ಪ್ರಜೆಗಳು ನಿರ್ಭಯರೂ ಧನವಂತರೂ ಆಗುವರು.ಗೋವುಗಳು ಧಾರಾಳವಾಗಿ ಹಾಲನ್ನೀಯುವವು. ಸಜ್ಜನರು ಧರ್ಮ ಕರ್ಮಗಳಲ್ಲಿ ಆಸಕ್ತಿ ಹೊಂದುವರು. ವಿವಿಧ ವೈದಿಕ ಉತ್ಸವಗಳನ್ನು ಆಚರಿಸುವರು. ಜನರು ಪರಸ್ಪರ ಪ್ರೀತಿ ವಿಶ್ವಾಸದಿಂದಿರುವರು. ಶನಿಯು ಮಂತ್ರಿಯಾದುದರಿಂದ ದೇಶದ ಕೆಲವು ಭಾಗಗಳಲ್ಲಿ ಮಳೆಯು ಕಡಿಮೆಯಾಗುವುದು. ಮೇಘಾಧಿಪತಿಯು  ಶುಕ್ರನಾದುದರಿಂದ ಬಹು ಜನರು ಸುಖ ಸಮೃದ್ಧಿ ಹೊಂದುವರು. ಸ್ತ್ರೀಯರು ನೆಮ್ಮದಿ ಅನುಭವಿಸುವರು.ಕುಜನು ಸಸ್ಯಾಧಿಪತಿಯಾದುದರಿಂದ ದೇಶದಲ್ಲಿ ಅಗ್ನಿ ಆಕಸ್ಮಿಕಗಳೂ, ಕಳ್ಳಕಾಕರ ಉಪಟಳವೂ ಕೆಲವೆಡೆ ಕಾಣಿಸಿಕೊಳ್ಳುವವು.  ಕುಜನು ನೀರಸಾಧಿಪತಿಯಾದುದರಿಂದ ಹವಳ, ಕೆಂಪುವಸ್ತ್ರಗಳು, ರಕ್ತಚಂದನ, ತಾಮ್ರ ಮೊದಲಾದ ಕೆಂಪು ಬಣ್ಣದ ಪದಾರ್ಥಗಳ ಬೆಲೆ ಏರಲಿದೆ. ಅಕ್ಕಿ, ರಾಗಿ, ಗೋಧಿ, ಜೋಳ ಇತ್ಯಾದಿ ಆಹಾರ ವಸ್ತುಗಳು ಸಮೃದ್ಧಿಯಾಗಿ ಬೆಳೆಯುತ್ತವೆ. ಉದ್ದು, ಹುರುಳಿ, ಹೆಸರು, ತೊಗರಿ, ಕಡಲೆ, ಎಳ್ಳು, ಸಾಸಿವೆ, ಬೆಲ್ಲ, ಸಕ್ಕರೆ, ಎಣ್ಣೆ ಪದಾರ್ಥಗಳ ಬೆಲೆಯು ವಿಶೇಷವಾಗಿ ಏರುವುದು. ಆಹಾರ ಪದಾರ್ಥ ಮತ್ತು ರಸ ಪದಾರ್ಥಗಳು ಸಹ ಏರಿಕೆಗೊಳ್ಳಲಿವೆ.ರವಿಯು ಧಾನ್ಯಾಧಿಪತಿಯಾಗಿರುವದರಿಂದ ರಾಜಕೀಯ ವ್ಯಕ್ತಿಗಳು ಪರಸ್ಪರ ಕಲಹ ನಿರತರಾಗುವರು. ಮುಂಗಾರಿನ ಬೆಳೆಗಳು ಮಧ್ಯಮವಾಗಿ, ಹಿಂಗಾರಿನ ಬೆಳೆಗಳು ಅಲ್ಪವಾಗುವುವು. ಗುರುವು ರಸಾಧಿಪತಿ ಆಗಿರುವುದರಿಂದ ಬಂಗಾರ, ತುಪ್ಪ, ರೇಷ್ಮೆಬಟ್ಟೆ ಹಾಗೂ ರೇಷ್ಮೆ ಉತ್ಪನ್ನಗಳು, ಹತ್ತಿ ಬಟ್ಟೆ  ಹಾಗೂ ಹತ್ತಿಯ ಉತ್ಪನ್ನಗಳು ಸುಲಭವಾಗಿ ಲಭಿಸುವವು. ಸುಗಂಧ ದ್ರವ್ಯ, ರಸಪದಾರ್ಥ, ಸಕ್ಕರೆ, ಕರ್ಪೂರ, ಇಂಗು ಮೊದಲಾದವುಗಳು ತುಟ್ಟಿಯಾಗಲಿವೆ. ಈ ವರ್ಷ ಹಣ್ಣು, ತರಕಾರಿಗಳು ಕಡಿಮೆ ಬೆಲೆಯಲ್ಲಿ ದೊರಕುವುವು.ಕಬ್ಬಿಣ, ಕಲ್ಲಿದ್ದಲು, ಕಪ್ಪುಧಾನ್ಯ, ಕಂಬಳಿ, ತ್ಯಾಜ್ಯವಸ್ತು, ಗೊಬ್ಬರ, ದಂತ, ಕರಕುಶಲವಸ್ತುಗಳ ಉತ್ಪಾದನೆ ಹಾಗೂ ಮಾರಾಟದಲ್ಲಿ ಲಾಭವಿದೆ. ಸುಗಂಧ ದ್ರವ್ಯಗಳು, ಅಲಂಕಾರಿಕ ಸಾಮಗ್ರಿಗಳು, ಚಿನ್ನಾಭರಣ, ತರಕಾರಿ, ಹಣ್ಣು ಹಣ್ಣಿನ ರಸ ಮಾರುವವರಿಗೆ, ಸಿಹಿತಿಂಡಿ ಅಂಗಡಿಯವರಿಗೆ ಅಧಿಕ ಲಾಭ. ರಬ್ಬರ್, ಕಬ್ಬು, ಬಾಳೆ, ತೆಂಗು, ಕುಂಬಳಕಾಯಿ ವರ್ತಕರು ಅಧಿಕ ಲಾಭಗಳಿಸುತ್ತಾರೆ.ಶೇರು ವಹಿವಾಟುದಾರರು, ಮದ್ಯ, ಸೇಂದಿ ಮಾರಾಟಗಾರರು, ವಸ್ತ್ರವ್ಯಾಪಾರಸ್ತರಿಗೆ ಅಧಿಕ ಲಾಭ. ಜಮೀನುದಾರರಿಗೆ, ಕಬ್ಬಿಣ ಜಲ್ಲಿ, ಸಿಮೆಂಟು, ಖನಿಜ ಪದಾರ್ಥಗಳ ಮಾರಾಟಗಾರರಿಗೆ ಶುಭ.ಸಂಕ್ರಾಂತಿ ಪುರುಷ

ಮೇಷ ಸಂಕ್ರಮಣವು ರಾತ್ರಿಯಾದ್ದರಿಂದ ದೇಶವು ಜಲ ಸಮೃದ್ಧಿಯಿಂದ ಕೂಡಿರುವದು. ರಾಕ್ಷಸೀ ಎಂಬ ಆನೆ ಜಾತಿಯ ಸಂಕ್ರಾತಿ ಪುರುಷನು, ಎಳ್ಳೆಣ್ಣೆ ಹಚ್ಚಿಕೊಂಡು ಸಿಂಧೂ ನದಿಯಲ್ಲಿ ಸ್ನಾನ ಸಂಧ್ಯಾವಂದನೆಯನ್ನು ಮಾಡಿ ಪೀತಾಂಬರ ಉಟ್ಟುಕೊಂಡು ಗೋರೋಚನಯುಕ್ತ ಗಂಧವನ್ನು ಲೇಪಿಸಿಕೊಂಡು ಎಳ್ಳಿನ ಅಕ್ಷತೆಯನ್ನು ಹಾಕಿಕೊಂಡು ಜಪಾಕುಸುಮ ಹೂ ಮಾಲೆಯನ್ನು ಧರಿಸಿಕೊಂಡು  ಹವಳದ ಕರ್ಣಕುಂಡಲಗಳನ್ನು,  ವೈಢೂರ್ಯಖಚಿತ ಕಿರೀಟ, ಗೋಮೇಧಕಯುಕ್ತ ಆಭರಣಗಳನ್ನು ಧರಿಸಿಕೊಂಡು, ಕೈಯಲ್ಲಿ ಬಿಲ್ಲು ಬಾಣ ಆಯುಧವನ್ನು ಹಿಡಿದುಕೊಂಡು ಆನೆಯ ಮೇಲೆ ಕುಳಿತುಕೊಂಡು ಸೀಸದ ಪಾತ್ರೆಯಲ್ಲಿ ಪಾಯಸವನ್ನು ತಿಂದುಕೊಂಡು, ಉತ್ತರ ದಿಕ್ಕನ್ನು ನೋಡುತ್ತಾ ದಕ್ಷಿಣ ದಿಕ್ಕಿಗೆ ಪ್ರಯಾಣ ಮಾಡುತ್ತಾನೆ. ಈ ವಿಷು ಪುರುಷನು ಯಾವ ದಿಕ್ಕನ್ನು ನೋಡುತ್ತಾನೋ, ಯಾವ ದಿಕ್ಕಿಗೆ ಪ್ರಯಾಣ ಮಾಡುತ್ತಾನೋ  ಆ ದೇಶಗಳಲ್ಲಿ ಚೋರ, ರೋಗಾಗ್ನಿ ಪೀಡೆಗಳಿಂದ ಜನರ ಸಂಪತ್ತು ನಾಶ ಹೊಂದಿ ಕಷ್ಟ ನಷ್ಟ ದುರ್ಭಿಕ್ಷೆ ಸಂಭವಿಸುವುದು. ವಿಷುಪುರುಷನು ಯಾವ ಯಾವ ವಸ್ತುಗಳನ್ನು ಸ್ವೀಕರಿಸುತ್ತಾನೆ ಆ ವಸ್ತುಗಳು ಕಡಿಮೆಯಾಗಿ ಅವುಗಳಿಗೆ ಬೆಲೆಯು ಅಧಿಕವಾಗುವುದು.

 

ಪ್ರತಿಕ್ರಿಯಿಸಿ (+)