ವಿಜಾಪುರದಲ್ಲಿ ಬಂಗಾಳಿ ದೇವಿ; 60 ಅಡಿ ಹನುಮ!

7

ವಿಜಾಪುರದಲ್ಲಿ ಬಂಗಾಳಿ ದೇವಿ; 60 ಅಡಿ ಹನುಮ!

Published:
Updated:
ವಿಜಾಪುರದಲ್ಲಿ ಬಂಗಾಳಿ ದೇವಿ; 60 ಅಡಿ ಹನುಮ!

ವಿಜಾಪುರ: ಪ್ರಸಿದ್ಧ ಕೋಲ್ಕತ್ತದ ದಶಭುಜ ಬಂಗಾಳಿ ದೇವಿ. `ಜೈ ಶ್ರೀರಾಮ್...~ ಎನ್ನುತ್ತ ಮೇಲಕ್ಕೇಳುವ 60 ಅಡಿ ಎತ್ತರದ ಬೃಹದಾಕಾರದ ಹನುಮಾನ್. ಸಂಗೀತದ ಲಯಕ್ಕೆ ತಕ್ಕಂತೆ ನರ್ತಿಸುತ್ತ ಬೆಳಕಿನ ಜೊತೆಗೆ ಮನಸ್ಸಿಗೆ ಮುದ ನೀಡುವ ವಿದ್ಯುತ್ ದೀಪಗಳ ಮಂಟಪ...ಇವೆಲ್ಲವೂ ಈ ಬಾರಿ ವಿಜಾಪುರಕ್ಕೆ ಬಂದಿವೆ. ನಗರದಲ್ಲಿ ನಡೆಯುವ ನವರಾತ್ರಿಯ ದೇವಿಯ ಆರಾಧನಾ ಮಹೋತ್ಸವದ ವಿಶೇಷಗಳಿವು. ಇಲ್ಲಿಯ ಶಾಪೇಟಿಯ ಬಸವೇಶ್ವರ ಆದಿಶಕ್ತಿ ತರುಣ ಮಂಡಳಿಯವರು ಈ ಬಾರಿ ಕೋಲ್ಕತ್ತದ ಪ್ರಸಿದ್ಧ ದುರ್ಗಾ ಮಾತೆಯನ್ನು ಪ್ರತಿಷ್ಠಾಪಿಸಿದ್ದಾರೆ. ಮೂರ್ತಿಗಳು 15 ಅಡಿ ಎತ್ತರ ಇವೆ. ದಶಭುಜದ ಬಂಗಾಳಿ ದೇವಿಯ ಮೂರ್ತಿಯ ಜೊತೆಗೆ ವಿವಿಧ ವೇಷದಲ್ಲಿರುವ ಇತರ ಏಳು ಮೂರ್ತಿಗಳಿವೆ. ಅವುಗಳನ್ನು 25 ಅಡಿ ಅಗಲದ ಪ್ರದೇಶದಲ್ಲಿ ಪ್ರತಿಷ್ಠಾಪಿಸಲಾಗಿದೆ.`ಈ ಮೂರ್ತಿಗಳ ತಯಾರಿಕೆಗೆ ಕಟ್ಟಿಗೆ, ಮಣ್ಣು ಹಾಗೂ ಸೆಣಬು ಬಳಸಲಾಗಿದೆ. ಕೋಲ್ಕತ್ತದ ಐವರು ಪರಿಣಿತ ಕಲಾವಿದರು 15 ದಿನಗಳ ಕಾಲ ಶ್ರಮವಹಿಸಿ ಈ ಮೂರ್ತಿಗಳನ್ನು ತಯಾರಿಸಿದ್ದೇವೆ~ ಎಂದು ಕೋಲ್ಕತ್ತದಿಂದ ಆಗಮಿಸಿದ್ದ ಕಲಾವಿದರ ತಂಡದ ಮುಖಂಡ ನೇಪಾಲ್ ಚಿತ್ರಗಾರ ಹೇಳಿದರು.`ಈ ಮೂರ್ತಿಗಳನ್ನು ತಯಾರಿಸಲಿಕ್ಕೇ ರೂ.2 ಲಕ್ಷ ಖರ್ಚಾಗಿದೆ. ಕಾರಂಜಿ, ಮಂಟಪ ಎಲ್ಲವೂ ಸೇರಿ ರೂ.3.50 ಲಕ್ಷ ಖರ್ಚಾಗಲಿದೆ. ಈ ಹಿಂದೆ ಅಂತರ್‌ರಾಷ್ಟ್ರೀಯ ಖ್ಯಾತಿಯ ಕಲಾವಿದ ಸುದರ್ಶನ ಪಟ್ನಾಯಕ್ ಅವರನ್ನು ಕರೆಯಿಸಿ ಮರಳಲ್ಲಿ ಕಲಾಕೃತಿ ಮಾಡಿಸಿದ್ದೆವು. ಆ ನಂತರ ಹಿಮಲಿಂಗ ಹೀಗೆ ಪ್ರತಿ ವರ್ಷವೂ ವಿಭಿನ್ನ ಕಲಾಕೃತಿಗಳನ್ನು ಮಾಡುತ್ತಿದ್ದೇವೆ.

ಈ ಬಾರಿ ಬಂಗಾಳಿ ದೇವಿಯ ಆಕರ್ಷಕ ವಿಗ್ರಹ ಪ್ರತಿಷ್ಠಾಪಿಸಿ ಭಿನ್ನತೆ ಮೆರೆದಿದ್ದೇವೆ~ಎಂದು ಮಂಡಳಿಯ ಮುಖಂಡ, ನಗರಸಭೆ ಸದಸ್ಯ ರಾಜೇಶ ದೇವಗಿರಿ ಹೇಳುತ್ತಾರೆ. ರಾಮಮಂದಿರ ರಸ್ತೆಯಲ್ಲಿ ಸಿದ್ಧೇಶ್ವರ ಆದಿಶಕ್ತಿ ತರುಣ ಮಂಡಳಿಯವರು ಮುಗಿಲೆತ್ತರದ ಬಜರಂಗಬಲಿ (ಹನುಮಾನ್) ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ.

ಈ ಮೂರ್ತಿ 60 ಅಡಿ ಎತ್ತರ ಇದೆ. ಮುಂಗಾಲಿನಲ್ಲಿ ಕುಳಿತ ಭಂಗಿಯಲ್ಲಿರುವ ಹನುಮಂತ `ಜೈ ಶ್ರೀರಾಮ್...~ ಎನ್ನುತ್ತ ಮೇಲಕ್ಕೆದ್ದು ಮತ್ತೆ ಅದೇ ಸ್ಥಿತಿಗೆ ಮರಳುವುದು ಈ ಮೂರ್ತಿಯ ವಿಶೇಷತೆ. `ಗಣೇಶೋತ್ಸವದಲ್ಲಿ ಪುಣೆಯಲ್ಲಿ ಈ ಮೂರ್ತಿ ಪ್ರತಿಷ್ಠಾಪಿಸಿದ್ದರು. ಅಲ್ಲಿಂದ ಈ ಮೂರ್ತಿ ತರಿಸಿದ್ದೇವೆ. ಎರಡು ಲಾರಿಗಳಲ್ಲಿ ಮೂರ್ತಿಯ ಬಿಡಿ ಭಾಗ ತಂದು ಪುಣೆಯ ಹತ್ತು ಜನ ಕಲಾವಿದರು, 20 ಜನ ಸೆಂಟ್ರಿಂಗ್ ಕೆಲಸಗಾರರು 60 ಅಡಿ ಎತ್ತರದ ಈ ಮೂರ್ತಿ ರೂಪಿಸಿದ್ದಾರೆ.

ಮೂರ್ತಿಗೆ ಅಂದಾಜು ರೂ.2 ಲಕ್ಷ ಖರ್ಚು ಮಾಡಿದ್ದೇವೆ~ ಎಂದು ಮಂಡಳಿಯ ಮುಖಂಡ, ಸಿದ್ಧೇಶ್ವರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಗುರು ಗಚ್ಚಿನಮಠ ಹೇಳಿದರು. `ಇಷ್ಟೊಂದು ಬೃಹತ್ ಗಾತ್ರದ ಮೂರ್ತಿ ವಿಜಾಪುರ ನಗರದಲ್ಲಿ ಪ್ರತಿಷ್ಠಾಪನೆಯಾಗಿದ್ದು ಇದೇ ಮೊದಲ ಬಾರಿ.

10-12 ವರ್ಷಗಳ ಹಿಂದೆ ನಾವು ವಿಠ್ಠಲನ 40 ಅಡಿ ಎತ್ತರದ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದೆವು. ಆ ನಂತರ ಈಗ 60 ಅಡಿ ಎತ್ತರದ ಮೂರ್ತಿ ಪ್ರತಿಷ್ಠಾಪಿಸಿದ್ದೇವೆ. ಮಳೆಯಾದರೂ ತೊಂದರೆಯಾಗದಂತೆ 65 ಅಡಿ ಎತ್ತರದ ಮಂಟಪ ಹಾಕಲಾಗಿದೆ. 101 ಕೆ.ಜಿ. ಬೆಳ್ಳಿಯಲ್ಲಿ ತಯಾರಿಸಿರುವ ದೇವಿಯ ಮೂರ್ತಿಯನ್ನು ಈ ಮಂಟಪದಲ್ಲಿ ಪ್ರತಿಷ್ಠಾಪಿಸುತ್ತೇವೆ~ ಎಂಬುದು ಅವರು ವಿವರಣೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry