ಶನಿವಾರ, ಫೆಬ್ರವರಿ 27, 2021
26 °C

ವಿಜಾಪುರ ಗಲಭೆ: ಯತ್ನಾಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ ಗಲಭೆ: ಯತ್ನಾಳ ಬಂಧನ

ವಿಜಾಪುರ: ನಗರದಲ್ಲಿ ಸೋಮವಾರ ಸಂಜೆ ನಡೆದಿದ್ದ ಘರ್ಷಣೆಗೆ ಸಂಬಂಧಿಸಿ­ದಂತೆ, ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ಕೇಂದ್ರದ ಮಾಜಿ ಸಚಿವ, ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.ಬುಧವಾರ ರಾತ್ರಿ 8.30ರ ಸುಮಾ­ರಿಗೆ ಯತ್ನಾಳ ಅವರನ್ನು ಇಲ್ಲಿಯ ಜೆಎಂಎಫ್‌ಸಿ (ಪ್ರಥಮ) ನ್ಯಾಯಾಲ-­ಯದ ನ್ಯಾಯಾಧೀಶ ದಯಾನಂದ ಬೇಲೂರ ಅವರ ಎದುರು ಹಾಜರು ಪಡಿಸಲಾಯಿತು. ನ್ಯಾಯಾ­ಧೀಶರು ಯತ್ನಾಳ ಅವರಿಗೆ ಜೂನ್‌ 7ರ  ವರೆಗೆ ನ್ಯಾಯಾಂಗ ಬಂಧನ ವಿಧಿಸಿ, ಬೆಳಗಾವಿಯ ಹಿಂಡಲಗಾ ಕಾರಾಗೃಹಕ್ಕೆ ಕರೆದೊಯ್ಯುವಂತೆ ಪೊಲೀಸರಿಗೆ ಸೂಚಿಸಿದರು.ಕೊಲ್ಹಾಪುರದಿಂದ ಕರೆತರುವ ಮಾರ್ಗಮಧ್ಯೆ ತಾಲ್ಲೂಕಿನ ತಿಕೋಟಾ­ದಲ್ಲಿ ಯತ್ನಾಳ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ರಕ್ತ­ದೊತ್ತಡ ಹೆಚ್ಚಾಗಿರುವ ಕಾರಣ ಅವರಿಗೆ ವೈದ್ಯಕೀಯ ಉಪಚಾರದ ಅವಶ್ಯಕತೆ ಇದೆ ಎಂದು ಯತ್ನಾಳ ಪರ ವಕೀಲ ಸತೀಶ್‌ ಕುಲಕರ್ಣಿ ಮನವಿ ಮಾಡಿದರು. ಹೀಗಾಗಿ ನ್ಯಾಯಾಧೀ­ಶರು ಯತ್ನಾಳ ಅವರಿಗೆ ಬೆಳಗಾವಿಯ ಕೆ.ಎಲ್‌.ಇ. ಆಸ್ಪತ್ರೆಯಲ್ಲಿ ಉಪಚಾರ ಕೊಡಿಸುವಂತೆ  ಆದೇಶಿಸಿದರು. ಪೊಲೀಸರು ಅವರನ್ನು ಬೆಳಗಾವಿಗೆ ಕರೆದೊಯ್ದರು.ನ್ಯಾಯಾಲಯದ ಹೊರಗೆ ಮಾತನಾಡಿದ ಯತ್ನಾಳ, ‘ಈ ಘಟನೆಗೆ ವಿಜಾಪುರ ನಗರ ಶಾಸಕ ಡಾ. ಮಕ್ಬೂಲ್‌ ಬಾಗವಾನ, ಶಹರ ಡಿವೈಎಸ್ಪಿ ಜೀರಗಾಳ ಅವರೇ ನೇರ ಹೊಣೆ. ಅವರ ಕುಮ್ಮಕ್ಕಿನಿಂದಲೇ ಘರ್ಷಣೆ ನಡೆದಿದೆ’ ಎಂದು ದೂರಿದರು.‘ಯತ್ನಾಳ ಅವರನ್ನು ವಿಚಾರಣೆ­ಗೊಳಪಡಿಸಿ ಹೇಳಿಕೆ ಪಡೆಯಲಾಗಿದೆ. ಹೀಗಾಗಿ ಅವರನ್ನು ಪೊಲೀಸ್‌ ವಶಕ್ಕೆ ಪಡೆಯುವುದಿಲ್ಲ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರಾಮ್‌ ನಿವಾಸ್‌ ಸೆಪಟ್‌ ಮೊದಲೇ ಸುದ್ದಿಗಾರರಿಗೆ ತಿಳಿಸಿದ್ದರು.ನಗರ ಬುಧವಾರ ಸಹಜ ಸ್ಥಿತಿಗೆ ಮರಳುತ್ತಿತ್ತು. ಯತ್ನಾಳ ಬಂಧನ ಸುದ್ದಿ ಹರಡುತ್ತಿದ್ದಂತೆ ಆತಂಕದ ವಾತಾವರಣ ನಿರ್ಮಾಣವಾಯಿತು. ವ್ಯಾಪಾರಸ್ಥರು ವ್ಯಾಪಾರ ವಹಿವಾಟು ಬಂದ್‌ ಮಾಡಿ ಮನೆಗೆ ತೆರಳಿ­ದರು. ಪೊಲೀಸ್‌ ಬಂದೋ­ಬಸ್ತ್‌ ಹೆಚ್ಚಿಸಿ, ನಿಷೇಧಾ­ಜ್ಞೆಯನ್ನು ಇದೇ 31ರ ವರೆಗೆ ವಿಸ್ತರಿಸಲಾಯಿತು.17 ಮೊಕದ್ದಮೆ: ಘಟನೆಗೆ ಸಂಬಂಧಿಸಿ­ದಂತೆ ಈ ವರೆಗೆ 30 ದೂರು–ಪ್ರತಿ ದೂರು ದಾಖಲಾಗಿವೆ. ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಿರು­ವುದು. ಧಾರ್ಮಿಕ ಭಾವನೆ ಕೆರಳಿಸಿರು­ವುದು, ಸರ್ಕಾರಿ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ, ಬೆದರಿಕೆ, ದೊಂಬಿ ಮತ್ತಿತರ ಆರೋಪಗಳ ಅಡಿ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ 17 ಪ್ರಕರಣಗಳು ದಾಖಲಾಗಿವೆ.‘ತಲೆಮರೆಸಿಕೊಂಡಿದ್ದ ಯತ್ನಾಳ, ಕೊಲ್ಹಾಪುರದ ವಸತಿಗೃಹವೊಂದರಲ್ಲಿ ಬೇರೆಯವರ ಹೆಸರಿನಲ್ಲಿ ಕಾಯ್ದಿರಿಸಿದ್ದ ಕೊಠಡಿಯಲ್ಲಿ ತಂಗಿದ್ದರು. ಬಸವನ ಬಾಗೇ­ವಾಡಿ ಡಿವೈಎಸ್ಪಿ ಮಲಕಾರಿ ಬಾಲದಂಡಿ ನೇತೃತ್ವದ ತಂಡದವರು ದಾಳಿ ನಡೆಸಿ ಬಸನಗೌಡ ಪಾಟೀಲ ಯತ್ನಾಳ, ಯಲ್ಲಪ್ಪ ಯಲಗೊಂಡ, ಪರಶು­ರಾಮ ಕೆಂಗನಾಳ ಮತ್ತು ಉಮೇಶ ಕೋರೆ ಎಂಬವರನ್ನು ವಶಕ್ಕೆ ಪಡೆದಿದ್ದಾರೆ’ ಎಂದು ಎಸ್ಪಿ ಹೇಳಿದರು.ಬೆಳಗಾವಿ ಉತ್ತರ ವಲಯ ಐಜಿಪಿ ಭಾಸ್ಕರ್‌ ರಾವ್‌ ಅವರು ಬಂಧಿತರನ್ನು ವಿಚಾರಣೆಗೊಳಪಡಿಸಿದರು.ವಿಳಂಬ: ಭದ್ರತೆ ಮತ್ತು ಶಾಂತಿ ಕಾಪಾ­ಡುವ ಕಾರಣಕ್ಕಾಗಿ ಪೊಲೀಸರು ಯತ್ನಾಳ ಅವರನ್ನು ಗೋಪ್ಯ ಸ್ಥಳದ­ಲ್ಲಿಟ್ಟು, ರಾತ್ರಿ ನ್ಯಾಯಾಧೀಶರ ಎದುರು ಹಾಜರು ಪಡಿಸಿದರು.ಬಿಜೆಪಿ ಖಂಡನೆ: ಯತ್ನಾಳರ ಬಂಧನ ಖಂಡಿಸಿರುವ ಬಿಜೆಪಿ ಮುಖಂಡರು, ‘ಈ ಘರ್ಷಣೆಗೆ ಪೊಲೀಸ್‌ ವೈಫಲ್ಯವೇ ಕಾರಣ’ ಎಂದು ದೂರಿದ್ದಾರೆ.ಯತ್ನಾಳ ಅವರು ಒಮ್ಮೆ ವಿಜಾಪುರ ನಗರ ಕ್ಷೇತ್ರದ ಶಾಸಕ, ಎರಡು ಬಾರಿ ಸಂಸದರಾಗಿದ್ದರು. ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಜವಳಿ ಮತ್ತು ರೈಲ್ವೆ ಖಾತೆಯ ಸಹಾಯಕ ಸಚಿವರಾ­ಗಿದ್ದರು. ಕಳೆದ 2 ವಿಧಾನಸಭಾ ಚುನಾ­ವಣೆಯಲ್ಲಿ ಪರಾಭವಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.