ಶುಕ್ರವಾರ, ಜನವರಿ 24, 2020
22 °C

ವಿಜಾಪುರ ಜಿಲ್ಲಾ ಪಂಚಾಯಿತಿ ; ಅಧ್ಯಕ್ಷರ ವಿರುದ್ಧ ಅವಿಶ್ವಾಸ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಂಕ್ರುಬಾಯಿ ಚಲವಾದಿ, ಉಪಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಸದಸ್ಯರು ಮುಂದಾಗಿದ್ದಾರೆ.`ಅವಿಶ್ವಾಸ ಗೊತ್ತುವಳಿ ಮಂಡಿಸಲು ಸಭೆ ಕರೆಯುವಂತೆ ನಾವು 26 ಜನ ಸದಸ್ಯರು ಸಹಿ ಮಾಡಿ ಅಧ್ಯಕ್ಷರಿಗೆ ನೋಟೀಸ್ ನೀಡಿದ್ದೇವೆ~ ಎಂದು ಸದಸ್ಯರು ಹೇಳುತ್ತಿದ್ದರೆ, `ನನಗೆ ಇಂಥ ಪತ್ರ ಬಂದೇ ಇಲ್ಲ. ನಮ್ಮ ಪಕ್ಷದ ಸದಸ್ಯರು ಬೇಡ ಎಂದರೆ ನಾನೇ ರಾಜೀನಾವೆು ನೀಡುತ್ತೇನೆ. ಅವಿಶ್ವಾಸದ ಮಾತೇಕೆ~ ಎಂದು ಅಧ್ಯಕ್ಷೆ ಶಂಕ್ರುಬಾಯಿ ಚಲವಾದಿ ಪ್ರಶ್ನಿಸುತ್ತಿದ್ದಾರೆ.ಒಟ್ಟು 38 ಸದಸ್ಯ ಬಲದ ವಿಜಾಪುರ ಜಿಲ್ಲಾ ಪಂಚಾಯಿತಿಯಲ್ಲಿ 19 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಏಕೈಕ ದೊಡ್ಡ ಪಕ್ಷವಾಗಿದೆ. ಬಿಜೆಪಿ 16, ಜೆಡಿಎಸ್ ಎರಡು ಹಾಗೂ ಒಬ್ಬ ಪಕ್ಷೇತರ ಸದಸ್ಯರಿದ್ದಾರೆ.ಸದ್ಯ ಬಿಜೆಪಿಯ ಶಂಕ್ರುಬಾಯಿ ಚಲವಾದಿ ಅಧ್ಯಕ್ಷರಾಗಿದ್ದು, ಪಕ್ಷೇತರರಾಗಿ ಆಯ್ಕೆಯಾಗಿದ್ದ ಶ್ರೀಶೈಲಗೌಡ ಬಿರಾದಾರ ಉಪಾಧ್ಯಕ್ಷರಾಗಿದ್ದಾರೆ.ಅವಿಶ್ವಾಸ ಗೊತ್ತುವಳಿ ಪತ್ರಕ್ಕೆ ಕಾಂಗ್ರೆಸ್‌ನ 19, ಆಡಳಿತಾರೂಢ ಬಿಜೆಪಿಯ ಆರು ಜನ ಹಾಗೂ ಜೆಡಿಎಸ್‌ನ ಒಬ್ಬ ಸದಸ್ಯರು ಸಹಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.`ನಿಮ್ಮ ಅಧಿಕಾರ ಇಂತಿಷ್ಟೇ ಅವಧಿ ಎಂದು ನನಗೆ ಯಾರೂ ತಿಳಿಸಿಲ್ಲ. ಆದರೂ, ನನ್ನ 10 ತಿಂಗಳ ಅಧಿಕಾರದ ಅವಧಿ ಇದೇ 15ಕ್ಕೆ ಕೊನೆಗೊಳ್ಳಲಿದೆ. ನೀವು ಬಯಸಿದರೆ ರಾಜೀನಾಮೆ ನೀಡಲು ಸಿದ್ಧ ಎಂದು ನನ್ನ ಪಕ್ಷದ ಮುಖಂಡರು ಹಾಗೂ ಸದಸ್ಯರಿಗೆ ಹೇಳಿದ್ದೇನೆ~ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಂಕ್ರುಬಾಯಿ ಚಲವಾದಿ.

`ಅವಿಶ್ವಾಸ ಗೊತ್ತುವಳಿ ಮಂಡನೆ ವಿರೋಧ ಪಕ್ಷದವರ ಯತ್ನ ಇರಬಹುದು. ನಮ್ಮ ಪಕ್ಷದವರಾರೂ ಅವರೊಂದಿಗೆ ಕೈಜೋಡಿಸುವುದಿಲ್ಲ. ಆದಾಗ್ಯೂ ಅವಿಶ್ವಾಸ ಗೊತ್ತುವಳಿಗೆ ಸಭೆ ಕರೆಯುವಂತೆ ಈ ವರೆಗೂ ನನಗೆ ಯಾರೂ ನೋಟಿಸ್ ನೀಡಿಲ್ಲ~ ಎಂದರು.`ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಬೇಕಿದ್ದರೆ ಒಟ್ಟು ಸದಸ್ಯರ ಮೂರನೇ ಎರಡು ಭಾಗದಷ್ಟು ಸದಸ್ಯರು ಲಿಖಿತವಾಗಿ ಅಧ್ಯಕ್ಷರಿಗೆ ನೋಟಿಸ್ ನೀಡಬೇಕು. ಹೀಗೆ ನೋಟಿಸ್ ಪಡೆದ ಅಧ್ಯಕ್ಷರು 15 ದಿನಗಳಲ್ಲಿ ಸಭೆ ಕರೆಯಬೇಕು. ಒಂದು ವೇಳೆ ಅವರು ನಿಗದಿತ ಕಾಲಾವಧಿಯಲ್ಲಿ ಸಭೆ ಕರೆಯದಿದ್ದರೆ ಆ ನಂತರ ಸದಸ್ಯರು ನನಗೆ ನೋಟಿಸ್ ನೀಡಬೇಕು. ಇದು ನಿಯಮ~ ಎನ್ನುತ್ತಾರೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎ.ಎನ್. ಪಾಟೀಲ.`ಜಿಲ್ಲಾ ಪಂಚಾಯಿತಿಯ 26 ಜನ ಸದಸ್ಯರು ಸಹಿ ಮಾಡಿರುವ ಪತ್ರದ ಪ್ರತಿಯನ್ನು ನನಗೆ ನೀಡಿದ್ದಾರೆ. ಇದೇ ಪ್ರತಿಯನ್ನು ಅಧ್ಯಕ್ಷರಿಗೆ ತಲುಪಿಸಿದ್ದೇವೆ ಎಂದು ಸದಸ್ಯರು ಹೇಳಿದ್ದಾರೆ. ಆದರೆ, ಈ ಹಂತದಲ್ಲಿ ಅವರು ನೇರವಾಗಿ ನನಗೆ ನೋಟಿಸ್ ನೀಡಲು ಹಾಗೂ ನಾನು ಅವಿಶ್ವಾಸ ಮಂಡನೆಗೆ ಸಭೆ ಕರೆಯಲು ಅವಕಾಶವಿಲ್ಲ~ ಎಂಬುದು ಅವರ ವಿವರಣೆ.ಅವಿಶ್ವಾಸ ಗೊತ್ತುವಳಿ ಪತ್ರಕ್ಕೆ ಸಹಿ ಮಾಡಿದವರ ವಿವರ: ಬಿಜೆಪಿಯ ಯಲ್ಲಪ್ಪ ಹಾದಿಮನಿ (ಕನ್ನೊಳ್ಳಿ), ಸಾವಿತ್ರಿ ಲ. ಅಂಗಡಿ (ಚಾಂದಕವಟೆ), ಸೌಮ್ಯ ಕಲ್ಲೂರ (ಸಾಲೋಟಗಿ), ಕಮಲಾಬಾಯಿ ದೇ. ಮಾಯಾವಂಶಿ (ಅಥರ್ಗಾ), ಮಂಜುಳಾ ಸಂ. ಕರಭಂಟನಾಳ (ಯರಝರಿ), ಶಶಿಕಲಾ ರೇ. ಪಾಟೀಲ (ಬರಡೋಲ). ಜೆಡಿಎಸ್‌ನ ಪದ್ಮಾವತಿ ಬ. ಪಾಟೀಲ (ಅಂಜುಟಗಿ).ಕಾಂಗ್ರೆಸ್‌ನ ಭೋರಮ್ಮ ಭೀ. ಸಾಸನೂರ (ಕುದರಿ ಸಾಲವಾಡಗಿ), ಪವಾರ ವಿಠ್ಠಲರಾವ ಬಾಬುರಾವ (ಮಸೂತಿ), ನಿಂಗನಗೌಡ ರಾ.ಪಾಟೀಲ (ದೇವರ ಹಿಪ್ಪರಗಿ), ಗುರನಗೌಡ ಭೀ. ಪಾಟೀಲ (ಹೊರ್ತಿ), ಬಾಪುಗೌಡ ಭೀ. ಪಾಟೀಲ (ಕಾಖಂಡಕಿ), ಚಂದ್ರಶೇಖರಗೌಡ ಸೋ. ಪಾಟೀಲ (ಮನಗೂಳಿ), ಗಂಗಾಧರ ಶಂ. ನಾಡಗೌಡ (ನಾಲತವಾಡ), ದೇವಾನಂದ ಫೂ. ಚವ್ಹಾಣ (ನಾಗಠಾಣ), ಗೌರವ್ವ ಯ. ಮುತ್ತತ್ತಿ (ಗೊಳಸಂಗಿ), ಲಲಿತಾ ಗ. ಬೆಳ್ಳುಂಡಗಿ (ಅರಕೇರಿ), ರತ್ನಾಬಾಯಿ ಬ. ಚಿನಗುಂಡಿ (ಹೊನವಾಡ), ಜ್ಯೋತಿ ಬ. ದೇಸಾಯಿ (ಮಮದಾಪುರ), ಉಮೇಶ ಮ.ಕೊಳಕೂರ (ಸಾರವಾಡ), ಸುಮಂಗಲಾ ಮಂ. ರದ್ದೇವಾಡಗಿ (ಯಂಕಂಚಿ), ಲಕ್ಕಮ್ಮ ಈ. ಮಾಗಣಗೇರಿ (ಮೋರಟಗಿ), ತಮ್ಮಣ್ಣ ಕ. ಹಂಗರಗಿ (ತಿಕೋಟಾ), ಜ್ಯೋತಿ ಚಂ. ಕೋಳಿ (ಹಲಸಂಗಿ), ಕಾವ್ಯ ಕ. ದೇಸಾಯಿ (ಕೊಲ್ಹಾರ), ಸಾಹೇಬಗೌಡ ಶ. ಪಾಟೀಲ (ಕಲಕೇರಿ).

ಪ್ರತಿಕ್ರಿಯಿಸಿ (+)