ಶುಕ್ರವಾರ, ಏಪ್ರಿಲ್ 16, 2021
31 °C

ವಿಜಾಪುರ: ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ/ತಾಳಿಕೋಟೆ: ಸೋಮವಾರ ರಾತ್ರಿಯಿಂದ ಮಂಗಳವಾರದ ವರೆಗೆ ಸಿಂದಗಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ. ದೇವರ ಹಿಪ್ಪರಗಿಯಲ್ಲಿ ಅತಿ ಹೆಚ್ಚು 110.4 ಮಿ.ಮೀ. ಹಾಗೂ ಹೂವಿನ ಹಿಪ್ಪರಗಿಯಲ್ಲಿ 85.6 ಮಿ.ಮೀ. ಮಳೆಯಾಗಿದೆ.`ಕಳೆದ ವರ್ಷ ಡೋಣಿ ನದಿಗೆ  ಪ್ರವಾಹ ಬಂದ ಸಂದರ್ಭದಲ್ಲಿ ಪ್ರವಾಹಕ್ಕೆ ಸಿಲುಕಿ ಸೇತುವೆ ಒಳಭಾಗದಲ್ಲಿ ಅಪಾರ ಪ್ರಮಾಣದ ಕಲ್ಲು-ಮಣ್ಣು ಬೀಡುಬಿಟ್ಟಿವೆ. ಅವು ಸೇತುವೆಯನ್ನು ನೆಲಮಟ್ಟಕ್ಕೆ ತಂದಿವೆ. ಸೇತುವೆ ಒಳಭಾಗದಲ್ಲಿ ನೀರು ಹರಿದು ಹೋಗುವ ಕಿಂಡಿಗಳು ಮುಳ್ಳುಕಂಟಿಗಳನ್ನು ತುಂಬಿಕೊಂಡು ಕುಳಿತಿವೆ~ ಎಂದು ಸಾರ್ವಜನಿಕರು ದೂರಿದರು.ಡೋಣಿ ನದಿಗೆ ಸ್ವಲ್ಪ ಪ್ರವಾಹ ಬಂದರೂ ಸೇತುವೆ ಮೇಲೆ ಮೂರ‌್ನಾಲ್ಕು ಅಡಿ ನೀರು ಹರಿಯುತ್ತಿದೆ. ಸಂಪರ್ಕ ಕಡಿತವಾಗುತ್ತಿದೆ. ಜನತೆ ವೇದನೆ ಅನುಭವಿಸಬೇಕಾಗುತ್ತದೆ. ಬೀಡುಬಿಟ್ಟಿರುವ ಅಪಾರ ಪ್ರಮಾಣದ ಕಲ್ಲು-ಮಣ್ಣುಗಳನ್ನು ತೆಗೆಸಿ ಆಳ ಮಾಡುವ ಕಾರ್ಯ ನಡೆದರೆ ಹೆಚ್ಚಿನ ಪ್ರವಾಹದ ಭೀತಿ ತಪ್ಪಬಹುದು~ ಎಂದು ಅವರು ಆಗ್ರಹಿಸಿದರು.ತಾಳಿಕೋಟೆಯಲ್ಲಿ ಸೋಮವಾರ ಸಂಜೆಯಿಂದ ಮಂಗಳವಾರ ಬೆಳಗಿನವರೆಗೆ ಒಟ್ಟು 30 ಮಿ.ಮೀ. ಮಳೆಯಾಗಿದೆ ಎಂದು ವಿಶೇಷ ತಹಶೀಲ್ದಾರ ಎಂ.ಎ.ಎಸ್. ಬಾಗವಾನ ತಿಳಿಸಿದರು.ಮುಂಗಾರು ಹಂಗಾಮು ಆರಂಭಗೊಂಡಿದ್ದರೂ ಜಿಲ್ಲೆಯಲ್ಲಿ ಮಳೆಯ ಕೊರತೆ ಎದುರಾಗಿತ್ತು. ಹೀಗಾಗಿ ಬಿತ್ತನೆಗೂ ತೊಂದರೆಯಾಗಿತ್ತು. ಮಳೆಗಾಗಿ ಪ್ರಾರ್ಥಿಸಿ ನಿರಂತರ ಭಜನೆ, ಮಡೆ ಭಜನೆ, ಕಪ್ಪೆ-ಕತ್ತೆಗಳ ವಿವಾಹಗಳನ್ನು ಸಾರ್ವಜನಿಕರು ನೆರವೇರಿಸಿದ್ದರು. ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿತು ಎಂದು ರೈತರ ಜೊತೆ ಸರ್ಕಾರವೂ ಕೈಚೆಲ್ಲಿತ್ತು.ಸಿಂದಗಿ ವರದಿ

ಸಿಂದಗಿ: ಈ ಹಿಂದಿನ ಎರಡ್ಮೂರು ವರ್ಷಗಳಲ್ಲಿ ಆಗದೇ ಇದ್ದ ಉತ್ತಮ ಮಳೆ ಸೋಮವಾರ ರಾತ್ರಿ ಸಿಂದಗಿ ತಾಲ್ಲೂಕಿನಲ್ಲಿ ಸುರಿದಿದೆ. ಎಲ್ಲೆಡೆ ಭಾರಿ ಪ್ರಮಾಣದಲ್ಲಿ ನೀರು ಹರಿದಿದೆ. ಸೋಮವಾರ ಸಂಜೆ 6 ಗಂಟೆಯಿಂದ ರಾತ್ರಿಯಿಡೀ ತಾಲ್ಲೂಕಿನಾದ್ಯಂತ ಮಳೆ ಸುರಿದಿದೆ. ಈ ಮೊದಲು ರೈತರು ಬಿತ್ತನೆ ಮಾಡಿದಾಗ ಜಡಿ ಮಳೆಯಾಗಿ ತೇವಾಂಶ ಆಗಿದ್ದರಿಂದ ಸೋಮವಾರ ಸುರಿದ ಮಳೆ ರೈತರಿಗೆ ತುಂಬಾ ಅನುಕೂಲವಾಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಎಚ್.ವೈ.ಸಿಂಗೆಗೋಳ ಹೇಳಿದ್ದಾರೆ.ದೇವರಹಿಪ್ಪರಗಿ ಭಾಗದಲ್ಲಿ ಅತ್ಯಧಿಕ 110.4 ಮಿ.ಮಿ ಮಳೆಯಾಗಿದೆ. ಸಿಂದಗಿಯಲ್ಲಿ 76.0 ಮಿ.ಮಿ, ಆಲಮೇಲ 68.1 ಮಿ.ಮಿ, ಕೊಂಡಗೂಳಿ 31.0 ಮಿ.ಮಿ, ಕಡ್ಲೇವಾಡ ಪಿಸಿಎಚ್ 60.2, ಸಾಸಾಬಾಳ 45.0, ರಾಮನಹಳ್ಳಿ 60.4 ರಷ್ಟು ಮಳೆಯಾಗಿದೆ ಎಂದು ತಹಸೀಲ್ದಾರ ಡಾ.ಶಂಕ್ರಣ್ಣ ವಣಕ್ಯಾಳ ತಿಳಿಸಿದ್ದಾರೆ.  ಮಂಗಳವಾರ ಸಂಜೆ ಕೂಡ ಸಿಂದಗಿ ಪಟ್ಟಣದಲ್ಲಿ ಮಳೆ ಸುರಿಯಿತು.ಮುದ್ದೇಬಿಹಾಳ ವರದಿ

ಮುದ್ದೇಬಿಹಾಳ: ತಾಲ್ಲೂಕಿನಾದ್ಯಂತ ಮಂಗಳವಾರ ಭರ್ಜರಿ ಮಳೆ ಸುರಿದಿದೆ. ಮಳೆ ಇಲ್ಲವೆಂದು ಬಿತ್ತಲಾಗದೇ ಚಡಪಡಿಸುತ್ತಿದ್ದ ರೈತನ ಮುಖದಲ್ಲಿ ತಡವಾಗಿಯಾದರೂ ಮಳೆ ಬಂತಲ್ಲ ಎಂಬ ಸಂತೃಪ್ತಿ. ಮಳೆಯಿಂದಾಗಿ ಪಟ್ಟಣದ ಪ್ರಾರ್ಥನಾ ವಿದ್ಯಾಮಂದಿರದಲ್ಲಿ ಹಮ್ಮಿಕೊಂಡಿದ್ದ ಪಾಲಕರ ಸಭೆ ಸಂಪೂರ್ಣ ರದ್ದಾಯಿತು. ಮಳೆಯಲ್ಲಿಯೂ ಛತ್ರಿ ಹಿಡಿದು ಭಾಷಣ ಕೇಳುತ್ತಿದ್ದ ತಾಯಂದಿರನ್ನು ಸೋಲಿಸಲೇಬೇಕೆಂದು ಮಳೆ ಜೋರಾಗಿಯೇ ಸುರಿದಿದ್ದರಿಂದ ಕಾರ್ಯಕ್ರಮವನ್ನು ಅನಿವಾರ್ಯವಾಗಿ ಮುಂದೂಡುತ್ತಿದ್ದೇವೆ ಎಂದು ಸಂಘಟಕರು ಹೇಳಬೇಕಾಯಿತು.ಮಳೆಯಿಂದಾಗಿ ಕೆಲವು ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯವಾದ ಪ್ರಸಂಗ ನಡೆಯಿತು. ತಾಲ್ಲೂಕಿನ ತಾಳಿಕೋಟೆ, ತಂಗಡಗಿ, ನಾಲತವಾಡ, ಢವಳಗಿ, ಬಸರಕೋಡ ಮೊದಲಾದೆಡೆ  ಮಳೆ ಸುರಿದ ವರದಿಯಾಗಿದೆ. 

ಜಿಲ್ಲೆಯಲ್ಲಿ ಸುರಿದ ಮಳೆಯ ವಿವರ

ಜಿಲ್ಲೆಯ ವಿವಿಧ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾದ, ಸೋಮವಾರ ಮಧ್ಯಾಹ್ನದಿಂದ ಮಂಗಳವಾರದ ವರೆಗೆ ಸುರಿದ ಮಳೆಯ ವಿವರ (ಮಿಲಿ ಮೀಟರ್‌ಗಳಲ್ಲಿ):ಹಲಸಂಗಿ: 26.5 ಮಿ.ಮೀ., ಚಡಚಣ: 3.5 ಮಿ.ಮೀ., ಝಳಕಿ: 13.5 ಮಿ.ಮೀ., ಇಂಡಿ: 24 ಮಿ.ಮೀ., ನಾದ ಬಿ.ಕೆ.:45.4 ಮಿ.ಮೀ., ಅಗರಖೇಡ: 51.5. ಹೊರ್ತಿ: 5.3 ಮಿ.ಮೀ.ಬಸವನ ಬಾಗೇವಾಡಿ: 41.4 ಮಿ.ಮೀ., ಮನಗೂಳಿ: 2, ಆಲಮಟ್ಟಿ: 7.9, ಹೂವಿನ ಹಿಪ್ಪರಗಿ: 85.6, ಆರೇಶಂಕರ: 5.2 ಮಿ.ಮೀ., ಮಟ್ಟಿಹಾಳ: 8.0 ಮಿ.ಮೀ.ವಿಜಾಪುರ: 7.6 ಮಿ.ಮೀ., ಭೂತನಾಳ: 13.2, ನಾಗಠಾಣ: 21, ಹಿಟ್ನಳ್ಳಿ: 38.2, ಮಮದಾಪುರ: 1.5, ಕುಮಟಗಿ: 26.2 ಮಿ.ಮೀ.,ಮುದ್ದೇಬಿಹಾಳ: 4.5 ಮಿ.ಮೀ., ನಾಲತವಾಡ: 6.4, ತಾಳಿಕೋಟೆ:30.0, ಢವಳಗಿ: 31 ಮಿ.ಮೀ.

ಸಿಂದಗಿ: 76 ಮಿ.ಮೀ., ಆಲಮೇಲ: 68.1, ಸಾಸಾಬಾಳ: 45, ರಾಮನಹಳ್ಳಿ: 60.4, ಕಡ್ಲೇವಾಡ: 60.2, ದೇವರ ಹಿಪ್ಪರಗಿ: 110.4, ಕೊಂಡಗೂಳಿ: 31.0 ಮಿ.ಮೀ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.