ವಿಜಾಪುರ; ಬೀದಿಗೆ ಇಳಿದ ಯುವ ಸಮೂಹ

7

ವಿಜಾಪುರ; ಬೀದಿಗೆ ಇಳಿದ ಯುವ ಸಮೂಹ

Published:
Updated:
ವಿಜಾಪುರ; ಬೀದಿಗೆ ಇಳಿದ ಯುವ ಸಮೂಹ

ವಿಜಾಪುರ: ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಬಂಧಿಸಿದ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಹಾಗೂ ಪ್ರಬಲ ಜನ್‌ಲೋಕಪಾಲ್ ಮಸೂದೆ ಜಾರಿಗೆ ಒತ್ತಾಯಿಸಿ ಜಿಲ್ಲೆಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಬುಧವಾರವೂ ಮುಂದುವರೆದಿವೆ.ಅಣ್ಣಾ ಹಜಾರೆ ವೇದಿಕೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಯವರು ಇಲ್ಲಿಯ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಬುಧವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಈ ಸಂಘಟನೆಗಳ ಮುಖಂಡರಾದ ವಿಶ್ವನಾಥ ಭಾವಿ, ಡಾ.ಕಂಠೀರವ ಕುಳ್ಳೊಳ್ಳಿ, ಜಯಶ್ರೀ ಚಿಗರಿ, ಲಕ್ಷ್ಮಿ ದೇಸಾಯಿ, ಪೀಟರ್ ಅಲೆಕ್ಝಾಂಡರ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಮಲ್ಲಮ್ಮ ಯಾಳವಾರ, ಡಾ.ರಾಜೇಶ್ವರಿ ಅಕ್ಕಿ, ಭಾರತಿ ಭುಂಯ್ಯಾರ, ಭರತ್‌ಕುಮಾರ, ಅಮೀನ್ ಹುಲ್ಲೂರ, ಸುರೇಶ ವಿಜಾಪುರ, ಗುರುಶಾಂತ ನಿಡೋಣಿ, ಡಿ.ಎಚ್. ಮುಲ್ಲಾ, ಚಂದ್ರಕಾಂತ ಬಿಜ್ಜರಗಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ.ಜಿಲ್ಲಾ ವಕೀಲರ ಸಂಘದವರು ನ್ಯಾಯಾಲಯ ಕಲಾಪದಿಂದ ದೂರ ಉಳಿದು ಹೋರಾಟದಲ್ಲಿ ಪಾಲ್ಗೊಂಡಿದ್ದರು. ಸಂಘದ ಅಧ್ಯಕ್ಷ ಎಸ್.ಎನ್. ಮಠ, ಹಿರಿಯ ವಕೀಲ ಎಂ.ಕೆ. ಕುಲಕರ್ಣಿ, ಎಂ.ಜಿ. ಮಠಪತಿ, ಆರ್.ಎಂ. ಕುಲಕರ್ಣಿ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿದರು.ಇಲ್ಲಿಯ ಬಿಎಲ್‌ಡಿಇ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಬೋಧಕರು ಕಪ್ಪುಪಟ್ಟಿ ಧರಿಸಿ ತಮ್ಮ ಕಾಲೇಜಿನಿಂದ ಧರಣಿ ಸ್ಥಳದವರೆಗೆ ಮೆರವಣಿಗೆ ನಡೆಸಿದರು. ವೈದ್ಯರಾದ ಅಭಿಜಿತ್, ವಿಜಯ ಹುಡೇದ, ಚಾರು ಗೌತಮ್, ತಮ್ಮಾರಾವ, ಅಶ್ವಿನ್, ಅಕ್ಷಯ, ಹರ್ಷ, ಲಕ್ಷ್ಮಿ ಮಾತನಾಡಿ ಜನ್‌ಲೋಕಪಾಲ್ ಮಸೂದೆ ಜಾರಿಯಾಗಲೇಬೇಕು ಎಂದರು.ದರಬಾರ ಬಿ.ಸಿ.ಎ. ಕಾಲೇಜು, ಎಸ್.ಎಸ್. ಪದವಿ ಪೂರ್ವ ಕಾಲೇಜು, ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು. ಡಾ.ಬಿ.ಎನ್.ಎಂ. ಆಯುರ್ವೇದ ಕಾಲೇಜು, ಸಿದ್ಧೇಶ್ವರ ಕಾನೂನು ಕಾಲೇಜು, ಸುಶೀಲಾದೇವಿ ನರ್ಸಿಂಗ್ ಕಾಲೇಜು, ಸಿದ್ಧೇಶ್ವರ ನರ್ಸಿಂಗ್ ಕಾಲೇಜು, ಸಂಗಮೇಶ್ವರ ಪಿಯು ಕಾಲೇಜು, ಸುಭಾಸ ನಾಗೂರ ಸ್ಮಾರಕ ಪಾಲಿಟೆಕ್ನಿಕ್, ದಾನಮ್ಮದೇವಿ ಐಟಿಐ ಕಾಲೇಜುಗಳವರು ಹೋರಾಟಕ್ಕೆ ಬೆಂಬಲ ಸೂಚಿಸಿದರು.ಕರ್ನಾಟಕ ರಾಜ್ಯ ಔಷಧಿ ಮಾರಾಟಗಾರರು ಹಾಗೂ ಪ್ರತಿನಿಧಿಗಳ ಸಂಘದವರು ಬೈಕ್ ರ‌್ಯಾಲಿಯ ಮೂಲಕ ಧರಣಿ ಸ್ಥಳಕ್ಕೆ ಆಗಮಿಸಿದರು. ವೀರೇಶ ಕುಲಕರ್ಣಿ, ವಿಜಯ್ ಘೋರ್ಪಡೆ ಮಾತನಾಡಿದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕಾಲೇಜು ಬಹಿಷ್ಕರಿಸಿ ಪ್ರತಿಭಟಿಸಿದರು. ಜಿ.ಪಂ. ಮಾಜಿ ಸದಸ್ಯ ಪಂಚಪ್ಪ ಕಲಬುರ್ಗಿ, ಸಂಜೀವ ಕರ್ಪೂರಮಠ, ವಿಜಾಪುರ ಶಹರ ನಾಗರಿಕ ಹಿತರಕ್ಷಣಾ ವೇದಿಕೆಯ ಕಾರ್ಯದರ್ಶಿ ಆರ್.ಕೆ. ಬಗಲಿ ಹೋರಾಟ ಬೆಂಬಲಿಸಿದರು.ಸಿಪಿಐ (ಎಂ) ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದವರು ಜಂಟಿಯಾಗಿ ಇಲ್ಲಿಯ ಡಾ.ಬಿ.ಆರ್. ಅಂಬೇಡ್ಕರ ವೃತ್ತದಲ್ಲಿ ಪ್ರಧಾನಿ ಡಾ.ಮನ್‌ಮೋಹನ ಸಿಂಗ್ ಅವರ ಪ್ರತಿಕೃತಿ ದಹಿಸಿ ಪ್ರತಿಭಟಿಸಿದರು.

ಪಕ್ಷದ ಜಿಲ್ಲಾ ಘಟಕದ ಕಾರ್ಯದರ್ಶಿ ಅಣ್ಣಾರಾಯ ಈಳಗೇರ, ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭೀಮಶಿ ಕಲಾದಗಿ, ಮನ್ನುಸಾಬ ಕಲಾದಗಿ ಮಾತನಾಡಿ, ಅಣ್ಣಾ ಹಜಾರೆ ಬಂಧನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದರು.ಎ.ಎಚ್. ಹೊನ್ನುಟಗಿ, ಜಿ.ಎಸ್. ಇಂಗಳಗಿ, ಬಸಲಿಂಗ ಕಪಾಲಿ, ಸೋಮಪ್ಪ ಆಯಟ್ಟಿ, ಹೀರಾಬಾಯಿ ಹಜೇರಿ, ಸೋನುಬಾಯಿ ಬ್ಯಾಳಿ, ಮೆಹಬೂಬಸಾಬ ನದಾಫ್, ಮಳಸಿದ್ಧ ನಾಯ್ಕೋಡಿ, ರಾಮಣ್ಣ ಶಿರಾಗೋಳ, ಸುನಂದಾ ನಾಯ್ಕ, ಸುವರ್ಣ ಹಲಗಣಿ, ಡಾ.ಎಸ್.ಜಿ. ಪಾಟೀಲ ಇತರರು ಪಾಲ್ಗೊಂಡಿದ್ದರು.ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡಂಟ್ಸ್ ಆರ್ಗನೈಜೇಷನ್, ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಜೇಷನ್ ಹಾಗೂ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯವರು ವಿದ್ಯಾರ್ಥಿಗಳೊಂದಿಗೆ ಇಲ್ಲಿಯ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ಸದಾನಂದ ಬಿರಾದಾರ, ಸಿದ್ಧಲಿಂಗ ಬಾಗೇವಾಡಿ, ಶಿವಬಾಳಮ್ಮ ಎಂ.ವಿ., ಭರತ್‌ಕುಮಾರ ಎಚ್.ಟಿ., ಲಕ್ಷ್ಮಣ ತೊರವಿ, ಭೀಮು ಉಪ್ಪಾರ ಮಾತನಾಡಿ ಕೇಂದ್ರ ಸರ್ಕಾರದ ಕ್ರಮ ಖಂಡಿಸಿದರು. ಭ್ರಷ್ಟಾಚಾರ ನಿಯಂತ್ರಣಕ್ಕೆ ಪ್ರಬಲ ಜನ್‌ಲೋಕಪಾಲ್ ಮಸೂದೆ ಜಾರಿಯಾಗಲೇಬೇಕು ಎಂದು ಒತ್ತಾಯಿಸಿದರು. ಅಣ್ಣಾ ಹಜಾರೆ ವೇದಿಕೆಯವರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ತೆರಳಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ವಿನಂತಿ ಕುಲಕರ್ಣಿ, ಗಂಗಾ, ಸಾವಿತ್ರಿ, ಗುರು ಬೊಮ್ಮನಳ್ಳಿ, ಮಂಜು, ಆನಂದ, ಅರುಣ ಇತರರು ಪಾಲ್ಗೊಂಡಿದ್ದರು.ಆಲಮಟ್ಟಿ: ಬೃಹತ್ ಮೆರವಣಿಗೆ

ಆಲಮಟ್ಟಿ:
ಅಣ್ಣಾ ಬಂಧನ ಖಂಡಿಸಿ ನಿಡಗುಂದಿಯಲ್ಲಿ ಬುಧವಾರ ವಿವಿಧ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದರು.ನಿಡಗುಂದಿ ಗ್ರಾಮಸ್ಥರು, ಪಟ್ಟಣದ ವಿವಿಧ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಅಧ್ಯಾಪಕರು, ವ್ಯಾಪಾರಸ್ಥರು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.ನಿಡಗುಂದಿಯ ರುದ್ರಮುನಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.ಬಿಜೆಪಿ ರೈತ ಮೋರ್ಚಾ  ರಾಜ್ಯ ಘಟಕದ ಉಪಾಧ್ಯಕ್ಷ ಬಸವರಾಜ ಕುಂಬಾರ, ಸಿದ್ದಣ್ಣ ನಾಗಠಾಣ, ಡಾ.ಸಿ.ಐ. ಕಾಜಗಾರ, ಪ್ರಹ್ಲಾದ ಪತ್ತಾರ, ಬಾಬು ಮುಚ್ಚಂಡಿ ಮೊದಲಾದವರು ಪಾಲ್ಗೊಂಡಿದ್ದರು.ನಂತರ ರಾಷ್ಟ್ರೀಯ ಹೆದ್ದಾರಿ 13ನ್ನು ಒಂದು ಗಂಟೆಗಳ ಕಾಲ ಬಂದ್ ಮಾಡಿ ಪ್ರತಿಭಟಿಸಲಾಯಿತು. ಇದರಿಂದಾಗಿ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ನಿಡಗುಂದಿ ಪಟ್ಟಣದ ಬಹುತೇಕ ಕಾಲೇಜುಗಳು ಬಂದ್ ಆಗಿದ್ದವು.ರಸ್ತೆ ತಡೆ:  ಎಬಿವಿಪಿ ಕಾರ್ಯಕರ್ತರು ಕೆಲ ಕಾಲ ಪ್ರತಿಭಟನೆ ನಡೆಸಿದರು. ಇಲ್ಲಿಯ ಎಂ.ಎಚ್.ಎಮ್. ಪದವಿ ಪೂರ್ವ ಮಹಾವಿದ್ಯಾಲಯದ ಬಳಿ ಇರುವ ಆಲಮಟ್ಟಿ-ನಿಡಗುಂದಿ ರಸ್ತೆ ಬಂದ್ ಮಾಡಿ, ಪೊಲೀಸರ ಕ್ರಮವನ್ನು ಖಂಡಿಸಿದರು.  ಎಬಿವಿಪಿ ನಗರ ಸಂಚಾಲಕ ಮಹಾಂತೇಶ ಹಿರೇಮಠ, ಪ್ರಶಾಂತ ಆಲಮಟ್ಟಿ, ಕುಲದೀಪ ಮೊದಲಾದವರಿದ್ದರು.ಇಂಡಿ: ತರಗತಿ ಬಹಿಷ್ಕಾರ

ಇಂಡಿ:
ಜನ ಲೋಕಪಾಲ್ ಮಸೂದೆ ಜಾರಿಗೆ ಆಗ್ರಹಿಸಿ ಹಾಗೂ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ಬಂಧನ ಖಂಡಿಸಿದ ತಾಲ್ಲೂಕಿನ ಹಲಸಂಗಿ ಗ್ರಾಮದ ಶ್ರೀ ಅರವಿಂದ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಬುಧವಾರ ತರಗತಿಗಳನ್ನು ಅರ್ಧಕ್ಕೆ ಬಹಿಷ್ಕರಿಸಿ ಪ್ರತಿಭಟಿಸಿದರು. ಘೋಷಣೆಗಳೊಂದಿಗೆ ಗ್ರಾಮದಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಿದರು.ಈ ಸಂದರ್ಭದಲ್ಲಿ ಕವಿತಾ ಚೌಧರಿ, ಅಶ್ವಿನಿ ವಾಲೀಕಾರ, ಪ್ರತಿಭಾ ಮಧುಬಾವಿ, ಮತ್ತು ರೇವತಿ ಮಾತನಾಡಿ ಪ್ರಬಲ ಜನ ಲೋಕಪಾಲ್ ಮಸೂದೆಯನ್ನು ಜಾರಿಗೊಳಿಸದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದರು.ಪ್ರತಿಭಟನಾ ರ‌್ಯಾಲಿ:  ಅಣ್ಣಾ ಹಜಾರೆ ಬಂಧನ ಖಂಡಿಸಿ ಪಟ್ಟಣದ ಪ್ರಗತಿಪರ ಸಂಘಟನೆಗಳು ಮತ್ತು ಮಾಜಿ ಸೈನಿಕ ಸಂಘದ ಆಶ್ರಯದಲ್ಲಿ ಬುಧವಾರ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಯಿತು.ಮುಖಂಡರಾದ ಶ್ರೆಪತಿಗೌಡ ಬಿರಾದಾರ, ವಿಶ್ವನಾಥ ಧನಶ್ರೆ, ಮಲ್ಲನಗೌಡ ಬಿರಾದಾರ, ಧನಪಾಲ, ಸಂಗಮೇಶ ಕಾಳಗಿ, ಸಿದ್ದಣ್ಣ ತಾಂಬೆ, ಸದಾನಂದ ಬಿರಾದಾರ, ಲಯನ್ಸ್ ಕ್ಲಬ್ ಪದಾಧಿಕಾರಿಗಳು, ಪಟ್ಟಣದ ವಿವಿಧ ಸಂಘಟನೆಗಳ ಪದಾಧಿಕಾರಿಗಳ ನೇತೃತ್ವದಲ್ಲಿ ಬೃಹತ್ ರ‌್ಯಾಲಿ ಹೊರಟು ಉಪ ಕಂದಾಯ ವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಡಾ. ಎಚ್. ಎನ್.ಗೋಪಾಲಕೃಷ್ಣ ಅವರಿಗೆ ಮನವಿ ಪತ್ರ ನೀಡಿದರು.ಎಬಿವಿಪಿ ಪ್ರತಿಭಟನೆ:  ಎಬಿವಿಪಿ ಕಾರ್ಯಕರ್ತರು ಲೋಕಪಾಲ್ ಮಸೂದೆ ಜಾರಿಗಾಗಿ ಆಗ್ರಹಿಸಿ ಪ್ರತಿಭಟನಾ ರ‌್ಯಾಲಿ ನಡೆಸಿದರು. ನಂತರ ತಹಸೀಲ್ದಾರರಿಗೆ ಮನವಿ ಪತ್ರ ನೀಡಿದರು.

ರ‌್ಯಾಲಿಯು ಪಟ್ಟಣದ ಜಿಆರ್‌ಜಿ ಕಲಾ ಮತ್ತು ವೈಎಪಿ ವಾಣಿಜ್ಯ ಮಹಾ ವಿದ್ಯಾಲಯದಿಂದ ಪ್ರಾರಂಭವಾಗಿ ಸಂಗೊಳ್ಳಿ ರಾಯಣ್ಣ ವೃತ್ತ, ಬಸ್ ನಿಲ್ದಾಣ ರಸ್ತೆ, ಬಸವೇಶ್ವರ ವೃತ್ತ, ಡಾ, ಬಿ.ಆರ್.ಅಂಬೇಡ್ಕರ್ ವೃತ್ತದ ಮೂಲಕ ತಹಸೀಲ್ದಾರ ಕಚೇರಿ ತಲುಪಿತು. ರ‌್ಯಾಲಿಯ ನೇತೃತ್ವವನ್ನು ಎಬಿವಿಪಿ ಸ್ಥಳೀಯ ಘಟಕದ ಅಧ್ಯಕ್ಷ ಆನಂದ ನಡುವಿನಮನಿ, ಎಸ್.ಎಸ್.ಪಾಟೀಲ, ಸಿದ್ದಲಿಂಗ ಹಂಜಗಿ ಹಾಗೂ ಇತರರು ವಹಿಸಿದ್ದರು.ಮಠಾಧೀಶರಿಂದ ಪ್ರತಿಭಟನೆ

ಸಿಂದಗಿ:
ಅಣ್ಣಾ ಹಜಾರೆ ಹೋರಾಟ ಬೆಂಬಲಿಸಿ ಸಿಂದಗಿಯಲ್ಲಿ ಬುಧವಾರ ವಿವಿಧ ಸಂಘಟನೆಗಳು ಮಠಾಧೀಶರ ನೇತೃತ್ವದಲ್ಲಿ ಪ್ರತಿಭಟನೆ, ಧರಣಿ ನಡೆಸಿದರು. ಮಾಜಿ ಸೈನಿಕರು ಕೂಡ ಪ್ರತ್ಯೇಕ ಪ್ರತಿಭಟನಾ ಮೆರವಣಿಗೆ ನಡೆಸಿ ಅಣ್ಣಾ ಹಜಾರೆ ಬಂಧನ ಖಂಡಿಸಿ                ಟಾಯರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.ಪ್ರಭು ಸಾರಂಗದೇವ ಶಿವಾಚಾರ್ಯರ ನೇತೃತ್ವದ ರ‌್ಯಾಲಿ ಸಾರಂಗಮಠದಿಂದ ಹೊರಟು ಪ್ರಮುಖ ಬೀದಿಗಳಲ್ಲಿ ಹಾದು ಬಸವೇಶ್ವರ ವೃತ್ತ ತಲುಪಿತು. ಈ ಸಂದರ್ಭದಲ್ಲಿ ಶ್ರೀಗಳು ಮಾತನಾಡಿ, ಅಣ್ಣಾ ಹಜಾರೆ ಅಂಥ ಗಾಂಧೀವಾದಿಯನ್ನು ಕೇಂದ್ರ ಸರ್ಕಾರ ಬಂಧಿಸಿರುವುದು ಅತ್ಯಂತ ಖಂಡನೀಯ ಎಂದರು.

ನೆಹರೂ ಪೋರವಾಲ, ಅಶೋಕ ವಾರದ, ಅಶೋಕ ಅಲ್ಲಾಪೂರ, ಶ್ರೀಶೈಲ ಪಾರಗೊಂಡ, ದಾನಪ್ಪಗೌಡ ಚನಗೊಂಡ, ಸಾಯಬಣ್ಣ ಹಾಗೂ ಇತರರು ಈ ಸಂದರ್ಭ ಹಾಜರಿದ್ದರು.ಮಾಜಿ ಸೈನಿಕರ ಮೆರವಣಿಗೆ:

ಮಾಜಿ ಸೈನಿಕರು ಅಣ್ಣಾ ಹಜಾರೆ ಹೋರಾಟ ಬೆಂಬಲಿಸಿ ಸ್ಥಳೀಯ ಸಂಗಮೇಶ್ವರ ದೇವಸ್ಥಾನದಿಂದ ಮೆರವಣಿಗೆ ನಡೆಸಿದರು.ಮೆರವಣಿಗೆಯಲ್ಲಿ ಮಾಜಿ ಸೈನಿಕರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಶ್ರೀಶೈಲ ಯಳಮೇಲಿ, ಉಪಾಧ್ಯಕ್ಷ ಪ್ರಕಾಶ ಬಡಿಗೇರ, ಕಾರ್ಯದರ್ಶಿ ಬಸವರಾಜ ಕಲಬುರ್ಗಿ ಹಾಗೂ ಇತರರು ಇದ್ದರು.ತಹಸೀಲ್ದಾರರಿಗೆ ಮನವಿ

ಬಸವನಬಾಗೇವಾಡಿ:
ಅಣ್ಣಾ ಹಜಾರೆಯವರನ್ನು ಬಿಡುಗಡೆ ಗೊಳಿಸಿ ಹೋರಾಟಕ್ಕೆ ಅವಕಾಶ ನೀಡಬೇಕು ಎಂದು ಬಸವದಾಮದ ತಾಯಿ ಬಸವೇಶ್ವರಿ ಹೇಳಿದರು. ಅಣ್ಣಾ ಹಜಾರೆ ಬಂಧನ ಖಂಡಿಸಿ ರಾಷ್ಟ್ರೀಯ ಬಸವ ಸೈನ್ಯದ ತಾಲ್ಲೂಕು ಘಟಕ  ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.ಪ್ರತಿಭಟನೆಯಲ್ಲಿ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕ್ರಗೌಡ ಬಿರಾದಾರ, ವಕೀಲ ಶಿವಾನಂದ ಕಲ್ಲೂರ ಹಾಗೂ ಇತರರು ಮಾತನಾಡಿದರು.  ಪುರಸಭೆ ಅಧ್ಯಕ್ಷ ಜಗದೀಶ ಕೊಟ್ರಶೆಟ್ಟಿ, ಮಲ್ಲಿಕಾರ್ಜುನ ನಾಯಕ. ಶ್ರೀಕಾಂತ ಪಡಶೆಟ್ಟಿ, ಸಂಗು ಜಾಲಗೇರಿ, ಪರಸು ಹಂಜಗಿ, ಮಹೇಶ ಹಿರೇಕುರಬರ, ಶ್ರೀಕಾಂತ ಕೊಟ್ರಶೆಟ್ಟಿ, ಮನ್ನಾನ ಶಾಬಾದಿ ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಮುದ್ದೇಬಿಹಾಳ: ಸಹಿ ಅಭಿಯಾನ

ಮುದ್ದೇಬಿಹಾಳ:
ಅಣ್ಣಾ ಹಜಾರೆ ಅವರ ಬಂಧನ ವಿರೋಧಿಸಿ ಉದಯ ರಾಯಚೂರ ಎಂಬುವವರು ದೊಡ್ಡ ಬಿಳಿಯ ನಿಲುವಂಗಿ ಧರಿಸಿ ತಮ್ಮ ಅಂಗಿಯ ಮೇಲೆ ಜನರಿಂದ ಸಹಿ ಮಾಡಿಸುವ ಮೂಲಕ ಅದನ್ನು ರಾಷ್ಟ್ರಪತಿಗಳಿಗೆ ಕಳಿಸುವ ವಿನೂತನ ಪ್ರತಿಭಟನೆ ಮಾಡಿದರು.`ನನ್ನ ಮ್ಯಾಲೆ ಸಹಿ ಮಾಡ್ರಿ, ನೀವು ಮಾಡಿದ ಸಹಿನ್ನ ರಾಷ್ಟ್ರಪತಿಗೆ ಕಳಿಸ್ತೀನಿ~ ಪಟ್ಟಣದ ವಿವಿಧ ಬೀದಿಗಳಲ್ಲಿ ಸುತ್ತುಹಾಕಿದರು. 1200 ಜನರ ಸಹಿ ಮಾಡಿಸಿ ಅದನ್ನು ತಹಸೀಲ್ದಾರ ಸೋಮಲಿಂಗಪ್ಪ ಗೆಣ್ಣೂರ ಮೂಲಕ ರಾಷ್ಟ್ರಪತಿಗಳಿಗೆ ಕಳಿಸಿಕೊಟ್ಟರು.ಈ ವಿನೂತನ ಪ್ರತಿಭಟನೆಗೆ ಸಿದ್ಧಸಿರಿ ಬ್ಯಾಂಕ್ ಅಧ್ಯಕ್ಷ ಪ್ರಭು ದೇಸಾಯಿ ಹಾಗೂ ಡಾ.ವಿಜಯಕುಮಾರ ನಾಯಕ ಸಹಿ ಮಾಡುವ ಮೂಲಕ ಚಾಲನೆ ನೀಡಿದರು.ವಕೀಲರ ಪ್ರತಿಭಟನೆ: ನೂರಾರು ನ್ಯಾಯವಾದಿಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರಲ್ಲದೇ ನ್ಯಾಯಾಲಯದ ಕಲಾಪಗಳಿಂದ ದೂರ ಉಳಿಯುವ ಮೂಲಕ ಅಣ್ಣಾ ಹಜಾರೆ ಅವರ ಜನ ಲೋಕಪಾಲ ಮಸೂದೆ ಜಾರಿಗೆ ಆಗ್ರಹಿಸಿದರು.ವಕೀಲ ಸಂಘದ ಅಧ್ಯಕ್ಷ ಆರ್.ಬಿ.ಪಾಟೀಲ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ವಿದ್ಯಾರ್ಥಿಗಳ ಬೆಂಬಲ: ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಘಟಕ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಚಡಚಣ: ರಸ್ತೆ ತಡೆ

ಚಡಚಣ:
ಅಣ್ಣಾ ಹಜಾರೆ ಬೆಂಬಲಿಸಿ ಕರ್ನಾಟಕ ರಕ್ಷಣಾ ವೇದಿಕೆ, ಜೈಭೀಮ ದಳ, ದಲಿತ ಸಂಘರ್ಷ ಸಮಿತಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ವಿವಿಧ ಸಂಘಟನೆಯ ಕಾರ್ಯಕರ್ತರು ಬುಧವಾರ ರಾಜ್ಯ ಹೆದ್ದಾರಿ 41ರಲ್ಲಿ (ಲಿಂಗಸೂರು-ಪಂಢರಪೂರ ರಸ್ತೆ) ಸುಮಾರು ಅರ್ಧ ಗಂಟೆ ರಸ್ತೆ ತಡೆ ನಡೆಸಿದರು. ನಂತರ ವಿಶೇಷ ತಹಸೀಲ್ದಾರ ಸಿ.ಟಿ.ಢವಳಗಿ ಅವರಿಗೆ ಮನವಿ ಸಲ್ಲಿಸಿದರು.ಚಡಚಣ ವಲಯ ಕರವೇ ಅಧ್ಯಕ್ಷ ಸೋಮು ಬಡಿಗೇರ, ಚಡಚಣ ಘಟಕದ ಅಧ್ಯಕ್ಷ ಮಹಾದೇವ ಬನಸೋಡೆ, ಜೈಭೀಮದ ದಳದ ಅಧ್ಯಕ್ಷ ಮಹಾದೇವ ಬನಸೋಡೆ, ಗ್ರಾಮ ಪಂಚಾಯಿತಿ ಸದಸ್ಯ ಚಾಂದಸಾಬ ನದಾಫ, ಕರವೇ ಕಾರ್ಯರ್ತರಾದ ಬಾಬು ಕೊಂಕಣಿ, ಶಿವು ವಾಲಿ, ಸದಾಶಿವ ಬಿರಾದಾರ, ಮಲ್ಲು ಬಿರಾದಾರ, ಧರೆಪ್ಪ ಬಿರಾದಾರ,ಬಸೀರ ನದಾಫ,ಅಕ್ಬರ ಸಾವಳಸಂಗ, ಸಲಬು ಕಂಬಾರ,ಸುರೇಶ ಬಡಿಗೇರ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry