ವಿಜಾಪುರ ಬುರುಜಿನ ಮೇಲೆ ರಣರಂಗದ ರಾಜ

7

ವಿಜಾಪುರ ಬುರುಜಿನ ಮೇಲೆ ರಣರಂಗದ ರಾಜ

Published:
Updated:

ವಿಜಾಪುರದ ಪ್ರತಿಯೊಂದು ಐತಿಹಾಸಿಕ ಕಟ್ಟಡ, ಕುರುಹುಗಳ ಹಿಂದೆ ಒಂದು ಕುತೂಹಲದ ಕಥೆ ಇದೆ. ಅಲ್ಲಿನ ಭವ್ಯ ಇಮಾರತುಗಳು, ಪ್ರಾಚ್ಯವಸ್ತುಗಳು ಮತ್ತು ಅವುಗಳ ಇತಿಹಾಸ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ಜೊತೆಗೆ, ಈ ಐತಿಹಾಸಿಕ ನಗರಕ್ಕೆ ನೀಡುವ ಭೇಟಿಯನ್ನು ಅವಿಸ್ಮರಣೀಯ ಮಾಡುತ್ತವೆ.ವಿಜಾಪುರವನ್ನು ಆಳಿದ ಆದಿಲ್‌ಶಾಹಿಗಳು ಉಪಯೋಗಿಸಿದ ಬೃಹತ್ ತೋಪು`ಮಲಿಕ್-ಎ-ಮೈದಾನ್~ ಕೂಡ ದೀರ್ಘಕಾಲ ಪ್ರವಾಸಿಗರ ನೆನಪಿನಲ್ಲಿ ಉಳಿಯುವಂತಹ ಪ್ರಾಚೀನ ವಸ್ತುಗಳಲ್ಲಿ ಒಂದು.`ರಣರಂಗದ ರಾಜ~ ಎಂದೇ ಗುರುತಿಸಿಕೊಂಡ ಈ ತೋಪು ಸದ್ಯ ವಿಜಾಪುರ ನಗರದ ಮೆಕ್ಕಾ ಮತ್ತು ಶಹಾಪುರ ಅಗಸಿ ಬಾಗಿಲುಗಳ ಮಧ್ಯಭಾಗದಲ್ಲಿ ಬರುವ (ಶಿವಾಜಿ ಸರ್ಕಲ್ ಹತ್ತಿರ) ಬುರ್ಜಿನ ಮೇಲಿದೆ. ಇದು ಪಂಚಲೋಹದಿಂದ ನಿರ್ಮಾಣಗೊಂಡಿದ್ದು ಇದರ ಬೃಹತ್ ನಳಿಕೆ, ಅಳತೆಗೆ ಅಸಹಜವೆನಿಸುವ ನಳಿಕೆಯ ವಿಶಾಲ ಸುತ್ತಳತೆ ಫ್ರೆಂಚ್ ಹಾವಿಟ್ಜರ್ ಫಿರಂಗಿಯನ್ನು ನೆನಪಿಸುತ್ತದೆ.ಇದರ ಮೇಲೆ ಮೂರು ಶಾಸನಗಳಿವೆ. ಅವುಗಳಲ್ಲಿ ಮೊದಲನೆಯದು ಇದನ್ನು ನಿರ್ಮಿಸಿದ ರಾಜ `ಮೊಹಮ್ಮದ ಬಿನ್ ಹಸನ್ ಇ-ಉಮಿ~ಯ ಹೆಸರನ್ನು ಸೂಚಿಸಿದರೆ, ಎರಡನೆಯದು ಇದನ್ನು ನಿರ್ಮಿಸಿದ ವರ್ಷ (ಹಿಜರಿ ಶಕೆ 956) ಮತ್ತು ಅಬ್ದುಲ್ ಘಾಜಿ ನಿಜಾಮ್ ಷಾ ಹೆಸರನ್ನು ತಿಳಿಸುತ್ತದೆ. ಮೂರನೆಯದು ಔರಂಗಜೇಬ್ 1686 ರಲ್ಲಿ ವಿಜಾಪುರದ ಮೇಲೆ ಸಾಧಿಸಿದ ಜಯವನ್ನು ದಾಖಲಿಸುತ್ತದೆ.ಹದಿನೈದನೇ ಶತಮಾನದಲ್ಲಿ ನಿರ್ಮಾಣಗೊಂಡ ಈ ರಕ್ತಪಿಪಾಸು ತೋಪು ಸೊಲ್ಲಾಪುರದ ಮೂಲಕ ಕರ್ನಾಟಕ ಪ್ರವೇಶಿಸಿ, ಭೀಮಾ, ತುಂಗಭದ್ರ ನದಿ ತೀರದಗುಂಟ ಹಂಪಿ, ರಕ್ಕಸತಂಗಡಗಿ ವರೆಗೆ ಸಾಗಿ, ಅಲ್ಲಿ (ತಾಳಿಕೋಟಿ ಹತ್ತಿರ) ನಡೆದ ಭೀಕರ ಕಾಳಗದಲ್ಲಿ ವಿಜಯನಗರ ಸಾಮ್ರೋಜ್ಯದ ಪತನಕ್ಕೆ ಕಾರಣವಾಗುವ ವರೆಗೆ ಮಾಡಿದ ಹೋರಾಟ ಬೆಚ್ಚಿ ಬೀಳಿಸುವಂತಹದ್ದು. ಆದರೆ, ದುರಂತವೆಂದರೆ ಒಂದು ಕಾಲಕ್ಕೆ ಶತ್ರುಪಡೆಗಳಿಗೆ ದುಃಸ್ವಪ್ನವಾಗಿ ಕಾಡಿ, ಯಮನ ಸಾಕ್ಷಾತ್ ರೂಪದಂತಿದ್ದ ಈ ಸಿಡಿತೋಪಿಗೆ ಮುಂದೊಂದು ದಿನ ಹರಾಜಿನಲ್ಲಿ ಬಂದ ದರ ಕೇವಲ 150 ರೂಪಾಯಿ!ಕೇವಲ 150 ರೂಪಾಯಿಗೆ ಹರಾಜು

ಐವತ್ತೈದು ಟನ್ ತೂಗುವ ಈ ಭಾರಿ ತೋಪು ನಿರ್ಮಾಣವಾಗಿದ್ದು ಮಹಾರಾಷ್ಟ್ರದ ಅಹ್ಮದನಗರದಲ್ಲಿ. ಇತಿಹಾಸಕಾರರ ಪ್ರಕಾರ 15 ಅಡಿ ಉದ್ದ, ನಾಲ್ಕು ಅಡಿ ಸುತ್ತಳತೆಯ ಈ ಫಿರಂಗಿ ತಾಳಿಕೋಟಿ ಹತ್ತಿರ ನಡೆದ ಐತಿಹಾಸಿಕ ಯುದ್ಧದಲ್ಲಿ ವಿಜಯನಗರದ ಸೈನ್ಯಕ್ಕೆ ಭಾರಿ ಹಾನಿ ಮಾಡಿತ್ತು. ದೈತ್ಯ ಶಕ್ತಿಯ ಈ ತೋಪಿನಿಂದ ಹೊರಟ ಭಯಂಕರ ಶಬ್ದ ಆನೆಗಳು ಕಂಗಾಲಾಗಿ ಓಡುವಂತೆ ಮಾಡಿತ್ತು. ಆನೆಗಳ ಕಾಲ್ತುಳಿತಕ್ಕೆ ಸಿಲುಕಿಯೇ ಸಾವಿರಾರು ಸೈನಿಕರು ಅಸುನೀಗಿದ್ದರು.ಯುದ್ಧದಲ್ಲಿ ಸುಲ್ತಾನರ ಕೂಟ ವಿಜಯನಗರದ ಸೈನ್ಯವನ್ನು ಸೋಲಿಸಿದ ನಂತರ ಇದನ್ನು ವಿಜಾಪುರದಿಂದ 160 ಕಿಮಿ ದೂರದಲ್ಲಿರುವ, ಅಹ್ಮದನಗರ ಸುಲ್ತಾನ ನಿಜಾಮ್ ಶಹಾನ ಭದ್ರ ಕೋಟೆಯಾಗಿದ್ದ ಪರಂದರ್ ಕೋಟೆಯ ಮೇಲೆ ಇಡಲಾಗಿತ್ತು. ನಂತರ 1632ರ ಸುಮಾರಿಗೆ ಸುಲ್ತಾನರ ಕೂಟದಲ್ಲಿ ಬಿರುಕು ಕಾಣಿಸಿಕೊಂಡಾಗ ವಿಜಾಪುರದ ಆದಿಲ್‌ಶಾಹಿಗಳು ಅಹ್ಮದನಗರದ ರಾಜ ನಿಜಾಮ್‌ನ ವಿರುದ್ಧ ಯುದ್ಧ ಘೋಷಿಸಿ ಅವನನ್ನು ಸೋಲಿಸಿದರು. ಆ ವಿಜಯದ ಸಂಕೇತವಾಗಿ ವಿಜಾಪುರಕ್ಕೆ ತಂದರು. ನಂತರ ಔರಂಗಜೇಬ್‌ನ ವಿರುದ್ಧ ನಡೆದ ಯುದ್ಧದಲ್ಲಿ ಆದಿಲ್‌ಶಾಹಿಗಳು ಇದನ್ನು ಬಳಸಿದ್ದರು.ಅವರ ಸಾಮ್ರೋಜ್ಯ ಪತನದ ನಂತರ ಸುಮಾರು ಎರಡು ಶತಮಾನಗಳ ಕಾಲ ಸ್ಥಳೀಯರ ನಿರ್ಲಕ್ಷ್ಯದಿಂದಾಗಿ ಇದು ಅನಾಥವಾಗಿತ್ತು. 1854ರಲ್ಲಿ ಸಾತಾರಾ ಜಿಲ್ಲಾಧಿಕಾರಿ (ಬ್ರಿಟಿಷರ ಕಾಲದಲ್ಲಿ ವಿಜಾಪುರ ಕೆಲವು ವರ್ಷ ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಆಡಳಿತಕ್ಕೆ ಒಳಪಟ್ಟಿತ್ತು) ಸರ್ಕಾರದ ವಶದಲ್ಲಿರುವ ವಿಜಾಪುರದಲ್ಲಿನ ಎಲ್ಲ ಹಳೆಯ ವಸ್ತುಗಳನ್ನು ಹರಾಜು ಹಾಕಲು ಆದೇಶಿಸಿದ. ಅದರಲ್ಲಿ ಮಲಿಕ್-ಎ-ಮೈದಾನ್ ತೋಪು ಕೂಡಾ ಸೇರಿತ್ತು.  ಜಿಲ್ಲಾಧಿಕಾರಿ ಆದೇಶದಂತೆ ವಿಜಾಪುರದಲ್ಲಿನ ಮಾಮಲೆದಾರ (ಕಂದಾಯ ಅಧಿಕಾರಿ) ಸವಾಲು ನಡೆಸಿದ. ಆದರೆ ಆ ಹರಾಜಿನಲ್ಲಿಮಲಿಕ್-ಎ-ಮೈದಾನ್‌ಗೆ ಬಂದ ಗರಿಷ್ಠ ಬೆಲೆ ಕೇವಲ 150 ರೂಪಾಯಿ!ಮಾಮಲೆದಾರನಿಗೆ, ಇಷ್ಟೊಂದು ಕಡಿಮೆ ಮೊತ್ತಕ್ಕೆ ಐತಿಹಾಸಿಕ ಮಹತ್ವವಿರುವ ಈ ತೋಪನ್ನು ಮಾರುವುದು ಪರಂಪರೆಗೆ ಮಾಡುವ ಅಪಮಾನವೆನಿಸಿತು. ವಿಷಯವನ್ನು ಜಿಲ್ಲಾಧಿಕಾರಿಗೆ ತಿಳಿಸಿ, `ತೋಪು ನೋಡಲು ದೂರದ ಊರುಗಳಿಂದ ಪ್ರತಿ ದಿನ ನೂರಾರು ಪ್ರವಾಸಿಗರು ಬರುತ್ತಾರೆ. ಇದರ ಬಗೆಗೆ ಜನರಿಗೆ ಸಾಕಷ್ಟು ಗೌರವವಿದೆ. ಅದಕ್ಕಾಗಿ, ಇದನ್ನು ಸಂರಕ್ಷಿಸಬೇಕು~ ಎಂದು ಮನವಿ ಮಾಡಿಕೊಂಡ. ಜಿಲ್ಲಾಧಿಕಾರಿಗೂ ಹೌದೆನ್ನಿಸಿ, ಹರಾಜನ್ನು ರದ್ದುಗೊಳಿಸಿದ.ಆದರೆ ಅದೇ ಬ್ರಿಟಿಷ್ ಅಧಿಕಾರಿ ಇದನ್ನು ಬ್ರಿಟನ್‌ಗೆ ತೆಗೆದುಕೊಂಡು ಹೋಗಲು ಪ್ರಸ್ತಾವವೊಂದನ್ನು ಸರ್ಕಾರಕ್ಕೆ ಸಲ್ಲಿಸಿದ್ದ. ಅದೃಷ್ಟವಶಾತ್ ಅದು ಕಾರ್ಯರೂಪಕ್ಕೆ ಬರಲಿಲ್ಲ. ಒಂದು ಕಾಲಕ್ಕೆ ಯಾವ ಕೋಟೆಯನ್ನು ರಕ್ಷಿಸಿತ್ತೋ ಅದೇ ಕೋಟೆಯ ಮೇಲೆ ಈಗಲೂ ಮಲಿಕ್-ಎ-ಮೈದಾನ್ ವಿರಾಜಮಾನವಾಗಿದೆ. ಈಗ ಅದು ರಾಷ್ಟ್ರೀಯ ರಕ್ಷಿತ ಸ್ಮಾರಕ.ಈ ಫಿರಂಗಿಯ ಕುರಿತು ಬರೆಯುತ್ತಾ, ಇತಿಹಾಸಕಾರ ಹೆನ್ರಿ ಕಸಿನ್ಸ್ ಹೇಳುತ್ತಾನೆ `ಎಲ್ಲ ಫಿರಂಗಿಗಳಂತೆ ಇದರ ತಳ್ಳುಗಾಡಿ, ಇತರ ಪರಿಕರಗಳನ್ನು ಔರಂಗಜೇಬ್‌ನ ಸೈನಿಕರು ತೆಗೆದುಕೊಂಡು ಹೋದರು. ಆದರೆ, ಅಷ್ಟೊಂದು ಕಾಳಜಿಯಿಂದ ಕೋಟೆಯ ಮೇಲೆ ಕಟ್ಟಿಗೆಯ ದಿಮ್ಮಿಯ ಮೇಲೆ ಇದನ್ನು ಇಟ್ಟಿರುವುದನ್ನು ಗಮನಿಸಿದರೆ, ಔರಂಗಜೇಬ್ ದೆಹಲಿಯಿಂದ ಮರಳಿ ಬಂದ ನಂತರ ಈ ತೋಪನ್ನು ಉಪಯೋಗಿಸುವ ಯೋಜನೆಯಿತ್ತೆಂದು ಕಾಣುತ್ತದೆ. ಆದರೆ ಆತ ವಾಪಸ್ ಬರಲಿಲ್ಲ. ಅಲ್ಲಿಂದ ಈ ತೋಪು ಅನಾಥವಾಯಿತು~.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry