ವಿಜಾಪುರ ಮಹಿಳಾ ವಿಶ್ವವಿದ್ಯಾಲಯ: ರಾಜ್ಯದ ವ್ಯಾಪ್ತಿಗೆ ತರಲು ಯತ್ನ

7

ವಿಜಾಪುರ ಮಹಿಳಾ ವಿಶ್ವವಿದ್ಯಾಲಯ: ರಾಜ್ಯದ ವ್ಯಾಪ್ತಿಗೆ ತರಲು ಯತ್ನ

Published:
Updated:

ಬೆಂಗಳೂರು:  ವಿಜಾಪುರದ ಮಹಿಳಾ ವಿಶ್ವವಿದ್ಯಾಲಯವನ್ನು 13 ಜಿಲ್ಲೆಗಳಿಗೆ ಮಾತ್ರ ಸೀಮಿತಗೊಳಿಸಿರುವ ಸರ್ಕಾರದ ಕ್ರಮಕ್ಕೆ ವಿಧಾನ ಪರಿಷತ್ತಿನಲ್ಲಿ ಶುಕ್ರವಾರ ಉತ್ತರ ಕರ್ನಾಟಕ ಭಾಗದ ಸದಸ್ಯರು ಪಕ್ಷಭೇದ ಮರೆತು ತೀವ್ರ ವಿರೋಧ ವ್ಯಕ್ತಪಡಿಸಿದರು.ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ಎನ್. ತಿಪ್ಪಣ್ಣ ಪರವಾಗಿ ಬಿಜೆಪಿಯ ಮನೋಹರ ಮಸ್ಕಿ ಕೇಳಿದ ಈ ಪ್ರಶ್ನೆ ಕೆಲಕಾಲ ಚರ್ಚೆಗೂ ಅವಕಾಶ ಮಾಡಿಕೊಟ್ಟಿತು.ರಾಜ್ಯದ 13 ಜಿಲ್ಲೆಗಳ 82 ಮಹಿಳಾ ಕಾಲೇಜುಗಳು ಮಾತ್ರ ಮಹಿಳಾ ವಿಶ್ವವಿದ್ಯಾಲಯ ಅಧೀನಕ್ಕೆ ಒಳಪಡುತ್ತವೆ. ಆರಂಭದಲ್ಲಿ ರಾಜ್ಯದ 164 ಮಹಿಳಾ ಕಾಲೇಜುಗಳನ್ನು ಈ ವಿವಿ ವ್ಯಾಪ್ತಿಗೆ ತರಬೇಕೆಂಬುದೇ ಸರ್ಕಾರದ ಆಶಯವಾಗಿತ್ತು ಎಂದು ಉನ್ನತ ಶಿಕ್ಷಣ ಸಚಿವರ ಪರವಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಉತ್ತರಿಸಿದರು.ಈ ನಡುವೆ, ವ್ಯಾವಹಾರಿಕ ಸಮಸ್ಯೆಯಿಂದ ಮಹಿಳಾ ವಿಶ್ವವಿದ್ಯಾಲಯವನ್ನು 13 ಜಿಲ್ಲೆಗಳಿಗೆ ಸೀಮಿತಗೊಳಿಸಲಾಗಿದೆ. ಆಡಳಿತ ಮಂಡಳಿಗಳು ವ್ಯವಹಾರಕ್ಕಾಗಿ ಮೈಸೂರಿನಿಂದ ವಿಜಾಪುರಕ್ಕೆ ಹೋಗುವುದು ಕಷ್ಟ ಎನ್ನುವ ಧಾಟಿಯಲ್ಲಿ ಸಚಿವರು ಮಾತನಾಡಿದ್ದು ಉತ್ತರ ಕರ್ನಾಟಕದ ಸದಸ್ಯರನ್ನು ಕೆರಳಿಸಿತು.ಸಚಿವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿಯ ಅರುಣ್ ಶಹಾಪುರ, ಜೆಡಿಎಸ್‌ನ ಬಸವರಾಜ ಹೊರಟ್ಟಿ, ಕಾಂಗ್ರೆಸ್‌ನ ವೀರಣ್ಣ ಮತ್ತಿಕಟ್ಟಿ, ಎಸ್.ಆರ್. ಪಾಟೀಲ್, `ಹಾಗಾದರೆ ನಾವೇಕೆ ಎಲ್ಲದಕ್ಕೂ ಬೆಂಗಳೂರಿಗೆ ಬರಬೇಕು~ ಎಂದು ಪ್ರಶ್ನಿಸಿದರು.`ಮಹಿಳಾ ವಿಶ್ವವಿದ್ಯಾಲಯವನ್ನು ವಿಜಾಪುರದಲ್ಲಿ ಮುಚ್ಚಿ, ಬೆಂಗಳೂರಿಗೆ ತನ್ನಿ~ ಎಂದು ಹೊರಟ್ಟಿ ಆಗ್ರಹಿಸಿದರೆ, `ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದವರನ್ನು ಹೋಳು ಮಾಡುವಂತಹ ಈ ನಿರ್ಣಯ ದುರಂತ~ ಎಂದು ಅರುಣ್ ವಿಷಾದಿಸಿದರು. ತಮ್ಮ ಭಾಗದ ಸದಸ್ಯರ ಒತ್ತಾಯಕ್ಕೆ ಸಚಿವ ಗೋವಿಂದ ಕಾರಜೋಳ ಕೂಡ ದನಿಗೂಡಿಸಿದರು.ಈ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ತಮ್ಮ ಪಾಡಿಗೆ ತಾವೇ ಕುಳಿತಿದ್ದ ಸಚಿವ ಶೆಟ್ಟರ್ ಅವರನ್ನು ಕುರಿತು ಮಾತನಾಡಿದ ವೀರಣ್ಣ ಮತ್ತಿಕಟ್ಟಿ, `ನಾಳೆ ಅಥವಾ ನಾಳಿದ್ದು ಮುಖ್ಯಮಂತ್ರಿಯಾಗುವ ಜಗದೀಶ ಶೆಟ್ಟರ್ ಕೂಡ ನಮ್ಮವರು. ಇನ್ನೇನು ಮುಖ್ಯಮಂತ್ರಿ ಕಚೇರಿಯ ಬಾಗಿಲು ಒಳಗೆ ಹೋಗಬೇಕೆನ್ನುವಷ್ಟರಲ್ಲಿ ಸ್ವಲ್ಪದರಲ್ಲಿ ಕೆಲವರು ಅವಕಾಶ ತಪ್ಪಿಸಿದರು~ ಎಂದು ತಮಾಷೆ ಮಾಡಿ ಅವರ ಬೆಂಬಲ ಪಡೆಯಲು ಪ್ರಯತ್ನಿಸಿದರು.ಪ್ರಯತ್ನ: ಸದಸ್ಯರ ಒತ್ತಾಯಕ್ಕೆ ಮಣಿದ ಸಚಿವ ಕಾಗೇರಿ, ಮುಂದಿನ ದಿನಗಳಲ್ಲಿ ಮಹಿಳಾ ವಿಶ್ವವಿದ್ಯಾಲಯವನ್ನು ಇಡೀ ರಾಜ್ಯದ ವ್ಯಾಪ್ತಿಗೆ ತರಲು ಸರ್ಕಾರ ಪ್ರಯತ್ನ ನಡೆಸಲಿದೆ ಎಂದು ಭರವಸೆ ನೀಡಿದರು.ವಿ.ವಿ.ಯ ಬೆಳವಣಿಗೆಗಾಗಿ ಕೂಡಲೇ 5 ಕೋಟಿ ರೂಪಾಯಿ ಬಿಡುಗಡೆ ಮಾಡುವುದರ ಜತೆಗೆ, ಮುಂದಿನ ದಿನಗಳಲ್ಲಿ ಅದನ್ನು ಮಾದರಿ ವಿಶ್ವವಿದ್ಯಾಲಯವನ್ನಾಗಿ ಮಾರ್ಪಡಿಸಲು ಸರ್ಕಾರ ಬದ್ಧವಾಗಿದೆ ಎಂದರು.`ವಿಶ್ವವಿದ್ಯಾಲಯವು ಹುಟ್ಟುತ್ತಲೇ ಸಮಸ್ಯೆಗಳನ್ನು ಹೊತ್ತು ತಂದಿದೆ. ಆದರೆ, ನಮ್ಮ ಸರ್ಕಾರ ನಾಲ್ಕು ವರ್ಷಗಳಲ್ಲಿ ಅದನ್ನು ಸದೃಢ ಸ್ಥಿತಿಗೆ ತರಲು ಎಲ್ಲ ರೀತಿಯ ಪ್ರಯತ್ನ ನಡೆಸಿದೆ~ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry