ಸೋಮವಾರ, ಏಪ್ರಿಲ್ 19, 2021
25 °C

ವಿಜಾಪುರ ಸೇರ್ಪಡೆ: ಸಿಎಂ ಹೇಳಿಕೆಗೆ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಹೈದರಾಬಾದ್ ಕರ್ನಾಟಕ ವಿಶೇಷ ಸ್ಥಾನಕ್ಕಾಗಿ ಹೋರಾಟ ಮಾಡಿದ ಜಿಲ್ಲೆಗಳನ್ನು ಬಿಟ್ಟು ವಿಜಾಪುರ ಜಿಲ್ಲೆ ಸೇರಿಸುವ ಬಗ್ಗೆ ಕೇಂದ್ರಕ್ಕೆ ಒತ್ತಡ ತರುವುದಾಗಿ ಬೇಜವಾಬ್ದಾರಿ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿಕೆ ಖಂಡನೀಯ ಎಂದು ಹೈದರಾಬಾದ್ ಕರ್ನಾಟಕ ಪ್ರದೇಶದ ಹೋರಾಟಗಳ ಸಮನ್ವಯ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಎಂದು ಮಂಗಳವಾರ ಇಲ್ಲಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಹೇಳಿಕೆ ವಿವಾದ ಸೃಷ್ಟಿಸಿದೆ. ಅವರು ತಮ್ಮ ಹೇಳಿಕೆಯನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು. ಹಿಂತೆಗೆದುಕೊಳ್ಳದಿದಲ್ಲಿ ಸಮಿತಿ ವತಿಯಿಂದ ನಿರಂತರ ಹೋರಾಟ ಮಾಡಲಾಗುತ್ತದೆ. ವಾರದೊಳಗೆ ನಿಯೋಗದೊಂದಿಗೆ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗೆ ಸ್ಪಷ್ಟೀಕರಣ ನೀಡುವಂತೆ ಒತ್ತಾಯಿಸಲಾಗುವುದು~ ಎಂದರು.

ಹಲವು ದಶಕಗಳ ನಿರಂತರ ಹೋರಾಟದ ಫಲವಾಗಿ ಈ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದೆ. ಹೈ.ಕ. ಭಾಗಕ್ಕೆ ಬಳ್ಳಾರಿ ಜಿಲ್ಲೆ ಸೇರ್ಪಡೆ ಮಾಡಿರುವುದೇ ಈ ಭಾಗದ ಜನತೆಗೆ ಅಸಮಾಧಾನ ತಂದಿದೆ. ಹೀಗಿರುವಾಗ ವಿಜಾಪುರ ಜಿಲ್ಲೆಯ ಸೇರ್ಪಡೆ ವಿಚಾರ ಮತ್ತಷ್ಟು ಆತಂಕ ಸೃಷ್ಟಿಸಿದೆ. ಈಗಾಗಲೆ ವಿಜಾಪುರ ಜಿಲ್ಲೆ ಜನತೆ ನಮ್ಮ ಭಾಗದ ಹಲವಾರು ಉದ್ಯೋಗ ಕ್ಷೇತ್ರಗಳಲ್ಲಿ ಲಗ್ಗೆ ಇಟ್ಟಿದ್ದಾರೆ. ವಿಶೇಷ ಸೌಲಭ್ಯಗಳ ಮೂಲಕ ಈ ಭಾಗದ ಜನತೆ ಮುಂದೆ ಬರುವಂತಹ ಕನಸು ಕಾಣುತ್ತಿದ್ದಾರೆ. ಅವರ ಕನಸಿಗೆ ನೀರೆರೆಚುವಂತಹ ಹೇಳಿಕೆ ನೀಡಬಾರದು ಎಂದು ಹೇಳಿದರು. `371 ಕಲಂ ತಿದ್ದುಪಡಿ ಆಗುವವರೆಗೆ ಸುಮಾರು 6 ಸಾವಿರ ಶಿಕ್ಷಕರ ನೇಮಕಾತಿ ತಡೆಹಿಡಿಯಬೇಕು. ಈ ಭಾಗದ ಜನತೆಗೆ ನ್ಯಾಯ ಒದಗಿಸಬೇಕು. ಈ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವಲ್ಲಿ ಓಟ್ ಬ್ಯಾಂಕ್ ರಾಜಕೀಯ ಸಲ್ಲದು~ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾರ್ಯಕರ್ತರಾದ ಶಿವಶರಣಪ್ಪ ಖಣದಾಳ, ಜಗನಾಥ ಸೂರ್ಯವಂಶಿ, ಕಲ್ಯಾಣರಾವ ಪಾಟೀಲ, ಮಂಜುನಾಥ ನಾಲವಾರಕರ್, ನಾಗಲಿಂಗಯ್ಯ ಮಠಪತಿ, ಅಮೃತ ಪಾಟೀಲ ಮತ್ತಿತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.