ಭಾನುವಾರ, ಮಾರ್ಚ್ 7, 2021
22 °C

ವಿಜಾಪುರ: ₨370 ಕೋಟಿ ಬೆಳೆ ನಷ್ಟ

ಗಣೇಶ ಚಂದನಶಿವ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ₨370 ಕೋಟಿ ಬೆಳೆ ನಷ್ಟ

ವಿಜಾಪುರ:  ಅಕಾಲಿಕ ಆಲಿಕಲ್ಲು ಮಳೆ­ಯಿಂದಾಗಿ ಜಿಲ್ಲೆಯಲ್ಲಿ  ₨ 370 ಕೋಟಿ ಮೌಲ್ಯದ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾ ಆಡಳಿತ ಅಂದಾಜು ಮಾಡಿದೆ. ಆದರೆ, ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆ ಹಾನಿಯೇ ₨ 650 ಕೋಟಿಗೂ ಮಿಕ್ಕಿದೆ ಎಂದು ದ್ರಾಕ್ಷಿ ಬೆಳೆಗಾರರ ಸಂಘದವರು ಹೇಳುತ್ತಿದ್ದಾರೆ.‘ಜಿಲ್ಲೆಯಲ್ಲಿ 22,963 ಹೆಕ್ಟೇರ್‌­ನಲ್ಲಿ ತೋಟಗಾರಿಕೆ ಬೆಳೆ ನಾಟಿ ಮಾಡಿದ್ದು, ಆ ಪೈಕಿ 8,834 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ದ್ರಾಕ್ಷಿ, ದಾಳಿಂಬೆ, ನಿಂಬೆ, ಬಾಳೆ, ಈರುಳ್ಳಿ ಮತ್ತಿತರ ಬೆಳೆ (1.82 ಲಕ್ಷ ಟನ್‌ನಷ್ಟು) ಹಾನಿಯಾಗಿ ₨ 337.94 ಕೋಟಿ ನಷ್ಟ ಸಂಭ­ವಿಸಿದೆ’ ಎಂದು ತೋಟಗಾರಿಕೆ ಇಲಾ­ಖೆಯ ಉಪ ನಿರ್ದೇಶಕ ಸಂತೋಷ ಇನಾ­ಮದಾರ ಜಿಲ್ಲಾ ಆಡಳಿತಕ್ಕೆ ವರದಿ ಸಲ್ಲಿಸಿದ್ದಾರೆ.ಮಳೆಗೆ ಕೃಷಿ ಬೆಳೆಯೂ ಹಾನಿ­ಯಾಗಿದೆ. ಜಿಲ್ಲೆಯ ಒಟ್ಟಾರೆ 3.88 ಲಕ್ಷ ಹೆಕ್ಟೇರ್‌ ಕೃಷಿ ಕ್ಷೇತ್ರದ ಪೈಕಿ 69,000 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಬಿಳಿ ಜೋಳ, ಗೋಧಿ, ಕಡಲೆ ಬೆಳೆ ಹಾನಿ­ಯಾಗಿದ್ದು, ₨31.05 ಕೋಟಿ ನಷ್ಟ ಉಂಟಾಗಿದೆ ಎಂಬುದು ಕೃಷಿ ಇಲಾಖೆಯ ಅಂದಾಜು.‘ವಿಜಾಪುರ ಜಿಲ್ಲೆಯಲ್ಲಿ 4,000 ಹೆಕ್ಟೇರ್‌ ದ್ರಾಕ್ಷಿ ಬೆಳೆ ಹಾನಿಯಾಗಿ ರೈತರಿಗೆ ಒಟ್ಟಾರೆ ₨ 650 ಕೋಟಿ ನಷ್ಟ ಸಂಭವಿಸಿದೆ. ಸರ್ಕಾರ ಸಮರ್ಪಕ ಸಮೀಕ್ಷೆ ನಡೆಸಬೇಕು. ಪ್ರಕೃತಿ ವಿಕೋಪ ನಿಧಿ ಅಡಿ ನೀಡುವ ಅತ್ಯಲ್ಪ ಪರಿಹಾರ ಏತಕ್ಕೂ ಸಾಲದು. ನಾವು ಒಂದು ಎಕರೆಗೆ ಕನಿಷ್ಠ ₨ 1.50 ಲಕ್ಷ   ಖರ್ಚು ಮಾಡಿದ್ದು, ತಕ್ಷಣವೇ ತಾತ್ಕಾಲಿಕ ಪರಿಹಾರ ರೂಪದಲ್ಲಿ ಎಕರೆಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡಬೇಕು’ ಎಂದು ದ್ರಾಕ್ಷಿ ಬೆಳೆಗಾರರು ಹೋರಾಟ ಆರಂಭಿಸಿದ್ದಾರೆ.‘₨ 337.94 ಕೋಟಿ ಮೌಲ್ಯದ ತೋಟ­ಗಾರಿಕೆ ಬೆಳೆ ಹಾನಿಯಾಗಿದ್ದರೂ ಈಗಿರುವ ನಿಯಮಾವಳಿಯಂತೆ ರೈತ­ರಿಗೆ ಕೇವಲ ₨ 7.26 ಕೋಟಿ ಪರಿಹಾರ ನೀಡಲು ಅವಕಾಶವಿದೆ. ಇದು ಒಟ್ಟಾರೆ ಹಾನಿಯ ಶೇ 2ರಷ್ಟು ಮಾತ್ರ ರೈತರಿಗೆ ಪರಿಹಾರ ದೊರೆಯಲಿದೆ’ ಎಂದು ಅಧಿ­ಕಾರಿಯೊಬ್ಬರು ಮಾಹಿತಿ ನೀಡಿದರು.‘ಈಗ ನಾವು ಮಾಡಿರುವುದು ಬೆಳೆ ಹಾನಿಯ ಪ್ರಾಥಮಿಕ ಅಂದಾಜು. ಆಲಿ­ಕಲ್ಲು ಮಳೆಯಿಂದಾಗಿ ಮನೆ–ಶೆಡ್‌­ಗಳು ಬಿದ್ದಿರುವುದರಿಂದ ಇಂಡಿ ತಾಲ್ಲೂಕಿನ ಅಂಜುಟಗಿ, ಹತ್ತಳ್ಳಿ ಗ್ರಾಮ­ಗಳಲ್ಲಿ ಗಂಜಿ ಕೇಂದ್ರಗಳನ್ನು ತೆರೆದು ಜನರಿಗೆ ಆಶ್ರಯ ಕಲ್ಪಿಸಲಾಗಿದೆ’ ಎಂಬುದು ಜಿಲ್ಲಾಧಿಕಾರಿ ರಿತ್ವಿಕ್‌ ಪಾಂಡೆ ಅವರ ವಿವರಣೆ.‘ಮಳೆಗೆ ಈವರೆಗೆ ನಾಲ್ವರು ಮೃತ­ಪಟ್ಟಿದ್ದು, ನೂರಕ್ಕೂ ಹೆಚ್ಚು ಜಾನು­ವಾರುಗಳು ಬಲಿಯಾಗಿವೆ’ ಎಂದು ಹೆಚ್ಚು­ವರಿ ಜಿಲ್ಲಾ ಪೊಲೀಸ್‌ ವರಿಷ್ಠಾ­ಧಿಕಾರಿ ಬಿ.ವೈ. ಬೆಳ್ಳುಬ್ಬಿ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.