ಭಾನುವಾರ, ಮೇ 16, 2021
23 °C

ವಿಜಾಪುರ: 2013 ಕೋಟಿ ಸಾಲ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಜಿಲ್ಲಾ ಲೀಡ್ ಬ್ಯಾಂಕ್ 2012-13ನೇ ಸಾಲಿಗೆ ಜಿಲ್ಲೆಗೆ ರೂ.2013.35 ಕೋಟಿಗಳ ಸಾಲ ಯೋಜನೆಯನ್ನು ಪ್ರಕಟಿಸಿದೆ.ಈ ಪೈಕಿ ಬೆಳೆಸಾಲಕ್ಕೆ ರೂ.1026 ಕೋಟಿ, ಕೃಷಿ ಪೂರಕ ಚಟುವಟಿಕೆಗೆ ರೂ.363 ಕೋಟಿ  ಸೇರಿದಂತೆ ರೂ.1389 ಕೋಟಿಗಳನ್ನು ಕೃಷಿ ವಲಯಕ್ಕೆ ಕಾಯ್ದಿರಿಸಿದ್ದು, ಯೋಜನೆಯ ಶೇ.69ರ ಪಾಲು ಕೃಷಿ ಚಟುವಟಿಕೆಗೆ ಮೀಸಲಿರಿಸಲಾಗಿದೆ.ಸಣ್ಣ ಕೈಗಾರಿಕೆ ವಲಯಕ್ಕೆ ರೂ.98ಕೋಟಿ, ಶಿಕ್ಷಣ, ಮನೆ ಸೇರಿದಂತೆ ಇತರ ಆದ್ಯತಾ ವಲಯಕ್ಕೆ ರೂ.298 ಕೋಟಿ, ಇತರ ವಲಯಕ್ಕೆ ರೂ. 228 ಕೋಟಿ ಕಾಯ್ದಿರಿಸಲಾಗಿದೆ.ಈ ಯೋಜನೆಯಲ್ಲಿ ವಿಜಾಪುರ ತಾಲ್ಲೂಕು ಸಿಂಹ ಪಾಲು ರೂ. 795 ಕೋಟಿ ಪಡೆದಿದ್ದು, ಇಂಡಿ ರೂ. 416 ಕೋಟಿ, ಸಿಂದಗಿ ರೂ.336 ಕೋಟಿ, ಬಸವನ ಬಾಗೇವಾಡಿ ರೂ. 274 ಕೋಟಿ, ಮುದ್ದೇಬಿಹಾಳ ರೂ.393 ಕೋಟಿ ಹಂಚಿಕೆ ಮಾಡಲಾಗಿದೆ.ಜಿಲ್ಲೆಯಲ್ಲಿರುವ ವಾಣಿಜ್ಯ ಬ್ಯಾಂಕು ಹಾಗೂ ಗ್ರಾಮೀಣ ವಿಕಾಸ ಬ್ಯಾಂಕ್, ಬಿಡಿಸಿಸಿ ಬ್ಯಾಂಕ್, ಕಾಸ್ಕರ್ಡ್‌ ಹಾಗೂ ಕೆಎಸ್‌ಎಫ್‌ಸಿ  ಸೇರಿದಂತೆ 191 ಶಾಖೆಗಳು ಈ ಸಾಲ ಯೋಜನೆಯಲ್ಲಿ ಒಳಗೊಂಡಿವೆ.ಶುಕ್ರವಾರ ಇಲ್ಲಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸಾಲಯೋಜನೆ ಪತ್ರ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ ಶಿವಯೋಗಿ ಕಳಸದ, ಸಾಲ ಯೋಜನೆ ಕೇವಲ ಅಂಕಿ-ಸಂಖ್ಯೆಗಳ ದಾಖಲೆ ಪುಸ್ತಕವಾಗಿ ಉಳಿಯಬಾರದು. ಜಿಲ್ಲೆಯ ರೈತರ ಸ್ವಾವಲಂಬನೆಗೆ ಪೂರಕವಾಗಬೇಕು. ಈ ನಿಟ್ಟಿನಲ್ಲಿ ಸಾಲ ಯೋಜನೆಯಲ್ಲಿ ಘೋಷಿಸಿದಂತೆ ಎಲ್ಲ ಬ್ಯಾಂಕರ್‌ಗಳು ರೈತರಿಗೆ ಸಕಾಲಕ್ಕೆ ನೆರವು ಒದಗಿಸಬೇಕು ಎಂದರು.ಜಿಲ್ಲೆ ಪ್ರಸಕ್ತ ವರ್ಷ ಬರಗಾಲ ಎದುರಿಸುತ್ತಿದೆ. ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಉತ್ತಮ ಮುಂಗಾರು ನಿರೀಕ್ಷೆಯಲ್ಲಿದ್ದು, ಸಾಲ ಯೋಜನೆಯಲ್ಲಿ ಘೋಷಿಸಿರುವಂತೆ ಸಕಾಲಕ್ಕೆ ರೈತರಿಗೆ ಬ್ಯಾಂಕಿನಿಂದ ಹಣಕಾಸು ನೆರವು ದೊರಕಬೇಕು ಎಂದು ಹೇಳಿದರು.ರೈತರಿಗೆ ಬ್ಯಾಂಕುಗಳಿಂದ ಸಾಲ ದೊರೆಯುವುದು ವಿಳಂಬವಾದರೆ ಖಾಸಗಿ ಲೇವಾ ದೇವಿದಾರರಿಂದ ಸಾಲ ಪಡೆದು ಅಧಿಕ ಬಡ್ಡಿಯಿಂದ ಆರ್ಥಿಕ ಶೋಷಣೆಗೊಳಗಾಗುತ್ತಾರೆ. ಇದಕ್ಕೆ ಅವಕಾಶ ಕೊಡದಂತೆ ಜಿಲ್ಲೆಯ ಎಲ್ಲ  ಬ್ಯಾಂಕರ್‌ಗಳು ಕಾರ್ಯನಿರ್ವಹಿಸಬೇಕು ಎಂದರು.ಕೃಷಿಯಂತೆ ಜಿಲ್ಲೆಯ ಕೈಗಾರಿಕಾ ವಲಯಕ್ಕೂ ಆದ್ಯತೆ ನೀಡಬೇಕು. ವಿಮಾನ ನಿಲ್ದಾಣ ಸ್ಥಾಪನೆ ಕಾರ್ಯ ಪ್ರಗತಿಯಲ್ಲಿದೆ. ವಿಶ್ವ ಬಂಡವಾಳ ಹೂಡಿಕೆ ಸಮಾವೇಶದಿಂದ ಜಿಲ್ಲೆಯಲ್ಲಿ ಹೆಚ್ಚಿನ ಕೈಗಾರಿಕೆಗಳು ಸ್ಥಾಪನೆಗೊಳ್ಳಲಿವೆ. ಈ ನಿಟ್ಟಿನಲ್ಲಿ ಕೈಗಾರಿಕೆಗೆ ಉತ್ತೇಜಕವಾದ ಹಣಕಾಸಿನ ನೆರವನ್ನು ಕಾಯ್ದಿರಿಸಬೇಕು ಎಂದು ಸಲಹೆ ನೀಡಿದರು.ಜಿಲ್ಲಾ ಲೀಡ್ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ವಿಠ್ಠಲ ಹಲ್ಲೊಳ್ಳಿ, ಯೋಜನೆಯ ಉದ್ದೇಶ ವಿವರಿಸಿದರು.

ಜಿ.ಪಂ. ಸಿಇಒ ಎ.ಎನ್. ಪಾಟೀಲ, ಭಾರತೀಯ ರಿಸರ್ವ್ ಬ್ಯಾಂಕಿನ ಬೆಂಗಳೂರಿನ ಸಹಾಯಕ ಪ್ರಧಾನ ವ್ಯವಸ್ಥಾಪಕ ಸುನೀಲ್‌ಕುಮಾರ, ಸಿಂಡಿಕೇಟ್ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ಮುಖ್ಯ ವ್ಯವಸ್ಥಾಪಕ ಜಿ.ಬಿ. ಹೊಸೂರ, ನಬಾರ್ಡ್ ಡಿಡಿಎಂ ಮುಕುಂದ ಮುಜುಮದಾರ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಬಾಗವಾನ, ಜಿಲ್ಲೆಯ ವಿವಿಧ ಬ್ಯಾಂಕಿನ ವ್ಯವಸ್ಥಾಪಕರು, ವಿವಿಧ ಇಲಾಖೆಯ ಮುಖ್ಯಸ್ಥರು, ಸ್ವಯಂ ಸೇವಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.