ವಿಜೃಂಭಣೆಯಿಂದ ನಡೆದ ಮಹಾವೀರ ಜಯಂತಿ

7

ವಿಜೃಂಭಣೆಯಿಂದ ನಡೆದ ಮಹಾವೀರ ಜಯಂತಿ

Published:
Updated:
ವಿಜೃಂಭಣೆಯಿಂದ ನಡೆದ ಮಹಾವೀರ ಜಯಂತಿ

ಬೆಳಗಾವಿ: ವಿವಿಧ ವ್ಯಸನಗಳು ವ್ಯಾಪಕವಾಗಿ ಹಬ್ಬುತ್ತಿದ್ದು, ಯುವಜನರು ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಬೇಕು ಎಂದು ಉಪಾಧ್ಯಾಯ ಜ್ಞಾನಸಾಗರ ಸ್ವಾಮೀಜಿ ಶನಿವಾರ ಇಲ್ಲಿ ಹೇಳಿದರು.

ಜಿಲ್ಲಾಡಳಿತ ಹಾಗೂ ಜೈನ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಮಹಾವೀರ ಜಯಂತಿ ಸಂದರ್ಭದಲ್ಲಿ ಅವರು ಅಶೀರ್ವಚನ ನೀಡುತ್ತಿದ್ದರು. ಉತ್ತಮ ಸಮಾಜ ನಿರ್ಮಾಣ ಎಲ್ಲರ ಉದ್ದೇಶವಾಗಿರಬೇಕು. ಬದುಕಿನಲ್ಲಿ ಶಿಸ್ತು, ಸಂಯಮ ಅಗತ್ಯ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಮೇಯರ್ ಮಂದಾ ಬಾಳೇಕುಂದ್ರಿ ಅವರು, ಮಹಾವೀರರ ತತ್ವ ಸಿದ್ಧಾಂತಗಳು ಇಂದಿನ ದಿನಗಳಲ್ಲಿ ಹೆಚ್ಚು ಪ್ರಸ್ತುತವಾಗಿವೆ. ಅವುಗಳನ್ನು ಜನರು ರೂಢಿಸಿಕೊಂಡು ಶಾಂತಿಯುತ ಜೀವನ ನಡೆಸಬೇಕು ಎಂದು ಮನವಿ ಮಾಡಿಕೊಂಡರು.

ಅತಿಥಿಯಾಗಿದ್ದ ಫಿರೋಜ ಸೇಠ, ಅಹಿಂಸೆ, ಶಾಂತಿಯನ್ನು ಮುಂದಿಟ್ಟುಕೊಂಡು ಮಹಾವೀರರು ಸಮಾಜಕ್ಕೆ ದೊಡ್ಡ ಸಂದೇಶ ನೀಡಿದ್ದಾರೆ. ಅದರ ಆಚರಣೆಗೆ ಒತ್ತು ನೀಡಬೇಕು ಎಂದರು. ಕೆಎಲ್‌ಇ ಕಾರ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಅವರು, ಸಮಾಜದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು. ಸೇವಾ ಮನೋಭಾವನೆ ಹೆಚ್ಚಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಸಂಜಯ ಪಾಟೀಲ, ಅಭಯ ಪಾಟೀಲ, ಜಿಲ್ಲಾಧಿಕಾರಿ ಡಾ. ಏಕರೂಪ್ ಕೌರ್, ಎಸ್ಪಿ ಸಂದೀಪ ಪಾಟೀಲ, ಮಾಜಿ ಆಯುಕ್ತ ನರೇಂದ್ರ ಜೈನ್, ರಾಜು ದೊಡ್ಡಣ್ಣನವರ, ಮಾಂಗೀಲಾಲ್ ಪೋರವಾಲ, ಸೇವಂತಿಲಾಲ್ ಶಹಾ ಮತ್ತಿತರರು ಉಪಸ್ಥಿತರಿದ್ದರು.

ಶೋಭಾಯಾತ್ರೆ: ನಗರದ ಸಮಾದೇವಿ ಗಲ್ಲಿಯಲ್ಲಿ ಮಹಾವೀರ ಜಯಂತಿ ನಿಮಿತ್ತ ಶೋಭಾಯಾತ್ರೆ ಏರ್ಪಡಿಲಾಗಿತ್ತು. ಶೋಭಾಯಾತ್ರೆಗೆ ಪ್ರಭಾಕರ ಕೋರೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ 20ಕ್ಕೂ ಅಧಿಕ ರೂಪಕಗಳು ಭಾಗವಹಿಸಿದ್ದವು.

ರಾಮದೇವ ಗಲ್ಲಿ, ಕಿರ್ಲೋಸ್ಕರ ರಸ್ತೆ, ರಾಮಲಿಂಗಖಿಂಡ ಗಲ್ಲಿ, ಶೇರಿಗಲ್ಲಿ, ಶನಿ ಮಂದಿರ, ಕಪಿಲೇಶ್ವರ ರಸ್ತೆ, ಕೋರೆಗಲ್ಲಿ, ಗೋವಾವೇಸ್ ಮೂಲಕ ಮೆರವಣಿಗೆ ಮಹಾವೀರ ಮಂದಿರ ತಲುಪಿತು. ಮಹಾವೀರ ಮಂದಿರದಲ್ಲಿ ಮಧ್ಯಾಹ್ನ ಸಮಾಜ ಬಾಂಧವರಿಗಾಗಿ ಮಹಾಪ್ರಸಾದ ಆಯೋಜಿಸಲಾಗಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry