ವಿಜೃಂಭಣೆಯ ಅಡ್ಡಪಲ್ಲಕ್ಕಿ ಉತ್ಸವ

7

ವಿಜೃಂಭಣೆಯ ಅಡ್ಡಪಲ್ಲಕ್ಕಿ ಉತ್ಸವ

Published:
Updated:

ವಿಜಾಪುರ: ನಗರದ ರಸ್ತೆಗಳಲ್ಲಿ `ಓಂ ನಮಃ ಶಿವಾಯ....~ ಮಂತ್ರ ಘೋಷ ಮೊಳಗುತ್ತಿತ್ತು. ಪೂರ್ಣ ಕುಂಭ ಹೊತ್ತಿದ್ದ ಸುಮಂಗಲೆಯರು, ಭವ್ಯ ಮೆರವಣಿಗೆ ಗಮನ ಸೆಳೆಯಿತು.ಇಲ್ಲಿಯ ಶಹಾಪೇಟಿಯ ಐತಿಹಾಸಿಕ ಮಹಾದೇವ ದೇವಸ್ಥಾನದ ಲಕ್ಷ ದೀಪೋತ್ಸವದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಉಜನಿ ಪೀಠದ ಸಿದ್ಧಲಿಂಗರಾಜ ದೇಶಿಕೇಂದ್ರ ಶಿವಾ ಚಾರ್ಯ ಸ್ವಾಮೀಜಿ, ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಮಹೋತ್ಸವದಲ್ಲಿ ಜನ ಭಕ್ತಿಯಿಂದ ಪಾಲ್ಗೊಂಡರು.ಸಿದ್ಧೇಶ್ವರ ದೇವಸ್ಥಾನದಿಂದ ಆರಂಭಗೊಂಡ ಅಡ್ಡಪಲ್ಲಕ್ಕಿ ಉತ್ಸವ ಶಹಾಪೇಟೆಯ ಮಂದಿರದವರೆಗೂ ನಡೆಯಿತು.ಗಂಭೀರವಾಗಿ ಹೆಜ್ಜೆ ಹಾಕುತ್ತಿದ್ದ ಗಜರಾಜನ ಹಿಂದೆ  ಕುಂಭಗಳನ್ನು ಹೊತ್ತಿದ್ದ ಸಾವಿರಾರು ಮಹಿಳೆಯರು ಜೋಡಿ ಸಾಲಿನಲ್ಲಿ ನಗರದಲ್ಲೆಡೆ ಸಾಗಿದರು.ಟಕ್ಕಳಕಿ ಗ್ರಾಮದ ಡೊಳ್ಳಿನ ಕಲಾ ತಂಡದವರ ಕಲಾತ್ಮಕ ಡೊಳ್ಳು ಕುಣಿತ, ಕುದುರೆ ಕುಣಿತ, ಇತರ ಜಾನಪದ ಕಲಾ ತಂಡಗಳ ನವಿಲು ಕುಣಿತ, ಹುಲಿ ವೇಷಧಾರಿಗಳ ಆರ್ಭಟ, ಹಲಗೆ ವಾದನ ಜನರ ಮನ ಸೂರೆಗೊಂಡವು. ಅಲಂಕರಿಸಿದ್ದ ಕುದುರೆಗಳ ಸಾಲೂ ಮೆರವಣಿಗೆಯಲ್ಲಿತ್ತು.ಪಲ್ಲಕ್ಕಿ ಉತ್ಸವ ಸಾಗುತ್ತಿದ್ದ ರಸ್ತೆಯನ್ನು ತಳಿರು ತೋರಣ ಕಟ್ಟಿ ಶೃಂಗರಿಸಲಾಗಿತ್ತು. ಅಡ್ಡಪಲ್ಲಕ್ಕಿ ಮಹೋತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.

ನಾಗಠಾಣದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ನಗರಸಭೆ ಸದಸ್ಯರಾದ ರಾಜೇಶ ದೇವಗಿರಿ, ಮಿಲಿಂದ ಚಂಚಲಕರ ಇತರರು ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry