ವಿಜೃಂಭಣೆಯ ಕಲ್ಲೇಶ್ವರ ಸ್ವಾಮಿ ರಥೋತ್ಸವ

7

ವಿಜೃಂಭಣೆಯ ಕಲ್ಲೇಶ್ವರ ಸ್ವಾಮಿ ರಥೋತ್ಸವ

Published:
Updated:

ಹಗರಿಬೊಮ್ಮನಹಳ್ಳಿ: ಪಟ್ಟಣದ ಆರಾಧ್ಯ ದೈವ ಕಲ್ಲೇಶ್ವರ ಮಹಾಸ್ವಾಮಿಯ 9ನೇ ವರ್ಷದ ರಥೋತ್ಸವ ಶುಕ್ರವಾರ ಸಂಜೆ ನಡೆಯಿತು. ಸಾವಿರಾರು ಸದ್ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.ರಥೋತ್ಸವದ ನಿಮಿತ್ತ ಮುಂಜಾನೆಯಿಂದಲೆ ದೇವಸ್ಥಾನದಲ್ಲಿ ರುದ್ರಾಭಿಷೇಕ, ಅರ್ಚನೆ ಸಹಿತ ನಾನಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಶ್ರದ್ಧೆಯಿಂದ ಪಾಲ್ಗೊಂಡಿದ್ದರು.ಸಂಜೆ ಪಂಚಲೋಹದ ಸ್ವಾಮಿಯ ಉತ್ಸವ ಮೂರ್ತಿಯನ್ನು ದೇವಸ್ಥಾನದಿಂದ ಕಳಸ ಹೊತ್ತ ಸುಮಂಗಲೆಯರ ಸಮೇತ ಮೆರವಣಿಗೆಯೊಂದಿಗೆ ತಂದು ರಥದಲ್ಲಿ ಸ್ಥಾಪಿಸಲಾಯಿತು.ನಂತರ ವರ್ಣರಂಜಿತ ನಾನಾ ದೇವರ ಪಟಗಳು, ಕೇಸರಿ ಧ್ವಜಗಳು, ಬಾಳೆ, ಕಬ್ಬು, ತೆಂಗಿನಗರಿಗಳಿಂದ ಶೋಭಾಯಮಾನವಾಗಿ ಕಂಗೊಳಿಸುತ್ತಿದ್ದ ರಥಕ್ಕೆ ಸಂಪ್ರದಾಯದ ಪೂಜೆಯನ್ನು ಪೂರೈಸಲಾಯಿತು.

ಹಳೇ ಹಗರಿಬೊಮ್ಮನಹಳ್ಳಿಯ ಎಚ್.ಎಂ. ವಿಜಯಕುಮಾರ್ ಅವರು ಕಲ್ಲೇಶ್ವರ ಪಟಾಕ್ಷಿಯನ್ನು ರೂ 28101ಕ್ಕೆ ಹರಾಜಿನಲ್ಲಿ ಪಡೆದ ನಂತರ ರಥೋತ್ಸವಕ್ಕೆ ಚಾಲನೆ ದೊರೆಯಿತು.ಹರಹರ ಮಹಾದೇವ ಎಂಬ ಘೋಷಣೆಗಳು ಮೊಳಗಿದವು. ಚಲಿಸುತ್ತಿದ್ದ ರಥಕ್ಕೆ ಬಾಳೆಹಣ್ಣು ಮತ್ತು ಉತ್ತತ್ತಿಗಳನ್ನು ತೂರಿ ಸದ್ಭಕ್ತರು ಹರಕೆ ತೀರಿಸಿಕೊಂಡ ಭಾವದಲ್ಲಿ ಪುನೀತರಾದರು. ರಥದ ಗಾಲಿಗೆ ಈಡುಗಾಯಿ ಒಡೆದರು.ರಥೋತ್ಸವದಲ್ಲಿ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಭಕ್ತರಲ್ಲದೆ ನೆರೆಯ ತಾಲ್ಲೂಕುಗಳು, ದಾವಣಗೆರೆ, ಗದಗ, ಹಾವೇರಿ ಹಾಗೂ ಚಿತ್ರದುರ್ಗ ಜಿಲ್ಲೆಯ ಭಕ್ತರು ಪಾಲ್ಗೊಂಡಿದ್ದರು. ಭಕ್ತರು ವಿಶೇಷ ಸಿಹಿಯೂಟ ತಯಾರಿಸಿ ನೈವೇದ್ಯ ಮಾಡಿ ಭಕ್ತಿ ಸಮರ್ಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry