ಬುಧವಾರ, ಏಪ್ರಿಲ್ 14, 2021
32 °C

ವಿಜೃಂಭಣೆಯ ಗೋಪಾಲಕೃಷ್ಣ ಸ್ವಾಮಿ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜೃಂಭಣೆಯ ಗೋಪಾಲಕೃಷ್ಣ ಸ್ವಾಮಿ ರಥೋತ್ಸವ

ಮರಿಯಮ್ಮನಹಳ್ಳಿ:  ಸಮೀಪದ ತಿಮ್ಮಲಾಪುರದ ಗೋಪಾಲಕೃಷ್ಣ ಸ್ವಾಮಿಯ ರಥೋತ್ಸವ ಶುಕ್ರವಾರ ಸಂಜೆ ಸಾವಿರಾರೂ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.ವಿಜಯನಗರ ಸಾಮ್ರಾಜ್ಯದ ವ್ಯಾಪ್ತಿಯಲ್ಲಿ ಬರುವ ತಿಮ್ಮಲಾಪುರದ ದೇವಸ್ಥಾನಗಳು ವಿಜಯನಗರದ ದೇವಸ್ಥಾನಗಳ ಮಾದರಿಯಲ್ಲಿಯೇ ಕಂಡು ಬರುತ್ತವೆ. ಅಲ್ಲದೆ ದೇವಸ್ಥಾನ ವನ್ನು ಬಯಕಾರ ರಾಮಪ್ಪ ಎಂಬ ಪಾಳೇಗಾರ ನಿರ್ಮಿಸಿದನೆಂದು ಪ್ರತೀತಿ ಇದ್ದು, ಇಂದಿಗೂ ದೇವಸ್ಥಾನಗಳಲ್ಲಿ ಕಲ್ಲಿನಲ್ಲಿ ಕೆತ್ತಿದ ಶಾಸನಗಳನ್ನು ಕಾಣ ಬಹುದಾಗಿದೆ.ತಿಮ್ಮಲಾಪುರದಲ್ಲಿ ಗೋಪಾಲಕೃಷ್ಣ ದೇವಸ್ಥಾನ ಮತ್ತು ತ್ರಿಕೂಟೇಶ್ವರ ದೇವಸ್ಥಾನಗಳು ಪ್ರಮುಖವಾಗಿದ್ದು, ದೇವಸ್ಥಾನದಲ್ಲಿನ ಕಲ್ಲಿನಲ್ಲಿ ಕೆತ್ತಿದ ಶಿಲ್ಪಗಳ ಕೆತ್ತನೆಗಳು ನೋಡುಗರ ಕಣ್ಮನ ಸೆಳೆಯುತ್ತಿದ್ದು, ದೇವಸ್ಥಾನ ಪ್ರಾಚ್ಯಾವಸ್ತು ಇಲಾಖೆಯ ಅಧೀನದಲ್ಲಿ ಒಳಪಡುತ್ತಿದೆ.ಪ್ರತಿವರ್ಷದಂತೆ ಗೋಕುಲಾಷ್ಠಮಿ ಆದ ಮರುದಿನ ನಡೆಯುವ ರಥೋತ್ಸವದ ಅಂಗವಾಗಿ ಏಳು ಹೆಡೆ ಸರ್ಪದ ಕೆಳಗೆ ಕೊಳಲನೂದುವ ಭಂಗಿಯಲ್ಲಿಯಲ್ಲಿರುವ ಹಾಗೂ ಸುಮಾರು ಏಳು ಅಡಿ ಎತ್ತರದ ಕರೆಶಿಲೆಯಲ್ಲಿನ ಗೋಪಾಲಕೃಷ್ಣ ಸ್ವಾಮಿಯ ದರ್ಶನ ಪಡೆಯಲು ಬೆಳಿಗ್ಗೆ ಯಿಂದಲೇ ಆಗಮಿಸಿದ ಭಕ್ತಾಧಿಗಳು ದರ್ಶನ ಪಡೆದ ಹಣ್ಣುಕಾಯಿ ಅರ್ಪಿಸಿ ಹರಕೆ ತೀರಿಸಿದರು.ರಥೋತ್ಸವದ ಅಂಗವಾಗಿ ಬೆಳಿಗ್ಗೆ  ಗೋಪಾಲಕೃಷ್ಣ ಸ್ವಾಮಿಗೆ ವಿಶೇಷ ಅಲಂಕಾರ, ಪೂಜೆ ಪುನಸ್ಕಾರಗಳು ಜರುಗಿದವು. ಈ ಸಂದರ್ಭದಲ್ಲಿ ಕಳೆದ ವರ್ಷದ ರಥೋತ್ಸವ ಸಂದರ್ಭದಲ್ಲಿ ಹರಾಜಿನಲ್ಲಿ ಪಡೆದ ಪಟವನ್ನು ಭಕ್ತರು ಸಕಲ ವಾದ್ಯಗಳ ಸಮೇತರಾಗಿ ದೇವಸ್ಥಾನದ ಸಮಿತಿಗೆ ಒಪ್ಪಿಸಿದರು.ಸಂಜೆ ವಿವಿಧ ಹೂವು, ತಳಿರು ತೋರಣ ಹಾಗೂ ಗೊಂಬೆಗಳಿಂದ ಅಲಂಕೃತಗೊಂಡ ರಥಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಿದರು. ಭಕ್ತರು ಹೂಹಣ್ಣು ಎಸೆದು ಭಕ್ತಿಭಾವ ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಸ್ವಾಮಿಯ ಪಟವನ್ನು ಹರಾಜು ಮಾಡಲಾಯಿತು. ಅಕ್ಕಂಡಿ ಶರಣಮ್ಮ ರೂ 22,101ಗಳಿಗೆ ಪಟವನ್ನು ಹರಾಜಿನಲ್ಲಿ ತಮ್ಮದಾಗಿಸಿ ಕೊಂಡರು.ನಂತರ ಸಾವಿರಾರು ಭಕ್ತರು ಸ್ವಾಮಿಯ ಘೋಷಣೆಗಳನ್ನು ಕೂಗುತ್ತಾ ರಥವನ್ನು ದೂರದ ಪಾದಗಟ್ಟೆಯವರೆಗೆ ಎಳೆದೊಯ್ದು ನಂತರ ಸ್ವಸ್ಥಳಕ್ಕೆ ಎಳೆತಂದರು. ಭಕ್ತರು ರಥಕ್ಕೆ ಹೂಹಣ್ಣು ಎಸೆದು ಶ್ರದ್ಧಾಭಕ್ತಿ ಪ್ರದರ್ಶಿಸಿದರು.ರಥೋತ್ಸವದಲ್ಲಿ ಸ್ವಗ್ರಾಮ ಸೇರಿ ದಂತೆ ಗರಗ, ಬ್ಯಾಲಕುಂದಿ, ಡಣಾಯ ಕನಕೆರೆ, ದೇವಲಾಪುರ, ಮರಿಯಮ್ಮ ನಹಳ್ಳಿ, ಹೊಸಪೇಟೆ, ಬಳ್ಳಾರಿ ಸೇರಿದಂತೆ ನಾನಾಕಡೆಗಳಿಂದ ಭಕ್ತರು ಹಾಗೂ ದೂರದ ಊರುಗಳಿಂದ ಭಕ್ತರು ಆಗಮಿಸಿದ್ದರು. ಈ ಬಾರಿ ರಥೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಕಳೆದ ವರ್ಷದ ರಥೋತ್ಸವ ಸಂದರ್ಭದಲ್ಲಿ ರಥದ ಚಕ್ರಕ್ಕೆ ಸಿಲುಕಿ ವೃದ್ಧನೊಬ್ಬ ಸಾವನ್ನಪ್ಪಿನ ಘಟನೆ ಸಂಭವಿಸಿದ್ದರ ಹಿನ್ನೆಲೆಯಲ್ಲಿ ಈ ಬಾರಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮರಿಯಮ್ಮನಹಳ್ಳಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ರಥೋತ್ಸವದ ಅಂಗವಾಗಿ ಗ್ರಾಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.