ಶುಕ್ರವಾರ, ಮೇ 7, 2021
20 °C

ವಿಜೃಂಭಣೆಯ ಚನ್ನಕೇಶವಸ್ವಾಮಿ ತೆಪ್ಪೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೇಲೂರು: ಚನ್ನಕೇಶವಸ್ವಾಮಿ ತೆಪ್ಪೋತ್ಸವ ಶುಕ್ರವಾರ ರಾತ್ರಿ ಇಲ್ಲಿನ ವಿಷ್ಣುಸಮುದ್ರ ಕೆರೆಯ ತೆಪ್ಪದ ಕೊಳದಲ್ಲಿ (ಬಿಷ್ಟಮ್ಮನ ಕೆರೆ)  ಸಹಸ್ರಾರು ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.



ಚೆನ್ನಕೇಶವಸ್ವಾಮಿ ರಥೋತ್ಸವದ ಅಂಗವಾಗಿ ನಡೆಯುವ ಉತ್ಸವಗಳ ಪೈಕಿ ತೆಪ್ಪೋತ್ಸವವು ಪ್ರಮುಖವಾದ ಉತ್ಸವವಾಗಿದ್ದು, ಕಾರಣಾಂತರಗಳಿಂದ ಕಳೆದ 50 ವರ್ಷಗಳಿಂದ ಸ್ಥಗಿತಗೊಂಡಿತ್ತು.



ತೆಪ್ಪೋತ್ಸವಕ್ಕಾಗಿ ವಿಷ್ಣುಸಮುದ್ರ ಕೆರೆಯಲ್ಲಿ ಕಬ್ಬಿಣದ ಡ್ರಂಗಳಿಂದ ತೆಪ್ಪವನ್ನು ಸಿದ್ಧಗೊಳಿಸಲಾಗಿತ್ತು. ರಾತ್ರಿ 9 ಗಂಟೆಯ ಸಮಯದಲ್ಲಿ ತೆಪ್ಪದ ಮೇಲೆ ಅಲಂಕೃತವಾದ ಮಂಟಪದಲ್ಲಿ ಸೌಮ್ಯನಾಯಕಿ ಮತ್ತು ರಂಗನಾಯಕಿ ಅಮ್ಮನವರ ಸಹಿತನಾದ ಚನ್ನಕೇಶವಸ್ವಾಮಿಯನ್ನು ಕೂರಿಸಿ ಪೂಜಾ ಕೈಂಕರ್ಯಗಳನ್ನು ನಡೆಸಿದ ಬಳಿಕ ವಿಷ್ಣುಸಮುದ್ರ ಕೆರೆಯ ಕಲ್ಯಾಣಿಯ ಮಂಟಪದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಲಾಯಿತು.



ತೆಪ್ಪದ ಕೊಳದ ಮಧ್ಯದಲ್ಲಿರುವ ವಸಂತ ಮಂಟಪ ಅಥವಾ ತೆಪ್ಪೋತ್ಸವ ಮಂಟಪದಲ್ಲಿ ಉತ್ಸವ ಮೂರ್ತಿ ಕೂರಿಸಲಾಯಿತು.



ತೆಪ್ಪೋತ್ಸವ ನಂತರ ನೆರೆದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ದೇವಾಲಯದ ಪ್ರಧಾನ ಅರ್ಚಕರಾದ ಶ್ರೀನಿವಾಸ್ ಭಟ್ಟರ್ ಮತ್ತು ಕೃಷ್ಣಸ್ವಾಮಿ ಭಟ್ಟರ್ ಪೂಜಾ ಕಾರ್ಯ ನೆರವೇರಿಸಿದರು.



ಈ ಸಂದರ್ಭದಲ್ಲಿ ತಹಶೀಲ್ದಾರ್ ಎನ್.ಎಸ್.ಚಿದಾನಂದ್, ಪುರಸ ಭಾಧ್ಯಕ್ಷ ತೊ.ಚ. ಅನಂತಸುಬ್ಬರಾಯ, ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಿ.ಕೆ.ಕುಮಾರ್, ತೆಪ್ಪೋತ್ಸವದ ಸೇವಾರ್ಥದಾರರಾದ ಕೇಶವೇಗೌಡ (ಬಾಳೆಹಣ್ಣು ರಮೇಶ್), ಬೆಂಗಳೂರಿನ ಕೇಶವನ್ ಹಾಜರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.