ಗುರುವಾರ , ಏಪ್ರಿಲ್ 15, 2021
22 °C

ವಿಜೃಂಭಣೆಯ ಜೋಡಿ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ: ತಾಲ್ಲೂಕಿನ ನೀಲಗುಂದ ಗ್ರಾಮದಲ್ಲಿ ಸೋಮವಾರ ವಿಜೃಂಭಣೆಯಿಂದ ನಡೆದ ಪುರಾತನ ವೀರಭದ್ರೇಶ್ವರ ಹಾಗೂ ತಿಮ್ಮಪ್ಪಸ್ವಾಮಿ ಜೋಡಿ ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.ಹರಪನಹಳ್ಳಿಯ ಪಾಳೇಗಾರ ದೊರೆ ಸೋಮಶೇಖರ ನಾಯಕರ ಆಳ್ವಿಕೆಗೆ ಒಳಪಟ್ಟಿದ್ದ ನೀಲಗುಂದ ಪ್ರಾಂತ್ಯ. ದೊರೆ ಸೋಮಶೇಖರ ನಾಯಕರ ಪಟ್ಟಧರಸಿ ನೀಲಾವತಿ ಆಳ್ವಿಕೆಯಲ್ಲಿ ಅತ್ಯಂತ ವೈಭವೋಪೇತವಾಗಿ ಮೆರೆದ ಪ್ರಾಂತ್ಯ ಎಂಬ ಹೆಗ್ಗಳಿಕೆ ಪಾತ್ರವಾಗಿತ್ತು. ಹಾಗಾಗಿ, ರಾಣಿ ನೀಲಾವತಿ ಹೆಸರೇ ಈ ಗ್ರಾಮ ನೀಲಗುಂದ ಎಂದು ಕರೆಯಲಾಗಿದೆ ಎಂಬುದು ಪ್ರತೀತಿ.ಪಾಳೇಗಾರ ವಂಶಕ್ಕೆ ಸೇರಿದ್ದರೂ, ಪುರಾತನ ಚನ್ನಬಸವೇಶ್ವರ ಗುರು ನೀಲಾವತಿಗೆ ಸಂಸ್ಕಾರ ನೀಡಿದರು. ಜತೆ-ಜತೆಯಲ್ಲಿ ಕೋಟೆಯ ಆವರಣದಲ್ಲಿ ವೀರಭದ್ರೇಶ್ವರ ಸನ್ನಿಧಿಗೂ ನೀಲಾವತಿ ನಡೆದುಕೊಳ್ಳುತ್ತಿದ್ದಳು ಎಂಬುದು ಇತಿಹಾಸ.ಗ್ರಾಮದ ಒಳಭಾಗದಲ್ಲಿರುವ ತಿಮಪ್ಪಸ್ವಾಮಿ ಹಾಗೂ ಹೊರವಲಯದಲ್ಲಿರುವ ವೀರಭದ್ರೇಶ್ವರ ಮೂರ್ತಿಯನ್ನು ಅಲಂಕೃತಗೊಳಿಸಲಾದ ಪಲ್ಲಕ್ಕಿಯಲ್ಲಿ ಅತ್ಯಂತ ವೈಭವಯುತವಾಗಿ ನಂದಿಕೋಲು, ಸಮಾಳ, ಜಾಂಜ್‌ಮೇಳ ಸೇರಿದಂತೆ ವಿವಿಧ ಬಗೆಯ ವಾದ್ಯಪರಿಕರಗೊಂದಿಗೆ ಪ್ರತ್ಯೇಕವಾಗಿ ರಥದ ಬಳಿ ಕರೆತರಲಾಯಿತು.ಗುಡ್ಡದ ವಿರಕ್ತಮಠದ ಚನ್ನಬಸವ ಶಿವಾಯೋಗಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ-ವಿಧಾನಗಳು ಜರುಗಿದವು. ಉಭಯ ದೇವರ ಮೂರ್ತಿಗಳು ರಥಕ್ಕೆ ಭಕ್ತರ ಭಕ್ತಭಾವ ಹಾಗೂ ಹರ್ಷೋದ್ಗಾರದೊಂದಿಗೆ ಪ್ರದಕ್ಷಿಣೆ ಹಾಕಲಾಯಿತು. ನಂತರ ಧಾರ್ಮಿಕ ನೆರದ ಭಕ್ತ ಸಮೂಹದ ನಡುವೆ ಎರಡು ಪತಾಕೆಗಳನ್ನು ಹರಾಜು ಹಾಕಲಾಯಿತು.ಹರಾಜು ಪ್ರಕ್ರಿಯೆ ಮುಗಿಯುತ್ತಿದ್ದಂತಿಯೇ ಜಾಗಟೆ, ಶಂಖಗಳ ಝೇಂಕಾರದೊಂದಿಗೆ ಮೊದಲು ತಿಮ್ಮಪ್ಪಸ್ವಾಮಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಬಳಿಕ ಹಿಂದೆಯ ವೀರಭದ್ರೇಶ್ವರ ಸ್ವಾಮಿಯ ರಥವೂ ಭಕ್ತಾದಿಗಳ ಹರ್ಷೋದ್ಗಾರದ ನಡುವೆ ಚಲಿಸಿತು. ನೆರೆದ ಸಹಸ್ರಾರು ಭಕ್ತರು ಜೋಡಿ ರಥಕ್ಕೆ ಬಾಳೆಹಣ್ಣು ಎಸೆದು, ತೆಂಗಿನಕಾಯಿ ಒಡೆದು ಭಕ್ತ ಸಮರ್ಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.