ಶನಿವಾರ, ಅಕ್ಟೋಬರ್ 19, 2019
27 °C

ವಿಜೃಂಭಣೆಯ ಬನಶಂಕರಿ ರಥೋತ್ಸವ

Published:
Updated:

ಕೆರೂರ: ಬಾನಂಗಳವೆಲ್ಲ ಹೊಂಬಣ್ಣ ಹೊರಳುವ ಸಮಯಕ್ಕೆ `ಬದಾಮಿ ಬನಶಂಕರಿ ನಿನ್ನ ಪಾದುಕೆ ಶಂಭು ಕೋ...ಶಂಭುಕೋ ಎಂಬ ಹರ್ಷೋದ್ಘಾರ ಉಕ್ಕಿ ಹರಿಯಿತು. ಭಕ್ತರು ಪೈಪೋಟಿಯಿಂದ  ರಥ ಎಳೆದು ಸಂತಸಪಟ್ಟರು.ದೇವಾಂಗ ಕುಲದ ಅಧಿದೇವತೆ ಬನಶಂಕರಿ ದೇವಿಯ 74ನೇ ವರ್ಷದ ರಥೋತ್ಸವಕ್ಕಾಗಿ ದೇವಾಗಪೇಟೆಯ ಬನಶಂಕರಿ ದೇವಾಲಯದ ಆವರಣದಲ್ಲಿ ಶನಿವಾರ ಮುಸ್ಸಂಜೆ ಜಮಾಯಿಸಿದ್ದ ಸಹಸ್ರಾರು ಭಕ್ತರು  ಸಮ್ಮುಖದಲ್ಲಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.ದೇಗುಲ ಪಕ್ಕದಿಂದ ರಥ ಮುಂದೆ ಸಾಗುತ್ತಿದ್ದಂತೆಯೇ ಭಕ್ತಿಯ ನಿನಾದ ಒಮ್ಮೆಲೆ ಹೊರ ಹೊಮ್ಮಿ ಭಕ್ತ ಸಮೂಹ ಉತ್ತತ್ತಿ, ಬಾಳೆಹಣ್ಣು ಎಸೆದು ದೇವಿಗೆ ಕೃತಾರ್ಥರಾದರು. ಜಾತ್ರೆಗೆ ದೇವಸ್ಥಾನ ಸಮಿತಿ ಹಾಗೂ ಅರ್ಚಕ ವೃಂದ ರಥವನ್ನು ಮಲ್ಲಿಗೆ ಹೂಮಾಲೆ, ಬಣ್ಣದ ಹಾಳೆ, ಬಾವುಟಗಳಿಂದ ಶೃಂಗರಿಸಲಾಗಿತ್ತು.ಈ ಜಾತ್ರೆಗೆಂದೇ ಗಂಡನ ಮನೆಯಿಂದ ತವರಿಗೆ ಬಂದಿದ್ದ ಹೆಣ್ಣುಮಕ್ಕಳು ಹೊಸ ಸೀರೆಯುಟ್ಟು ದೇವಿಗೆ ಪೂಜೆ ಸಲ್ಲಿಸಿದರು. ಜಾತ್ರೆಯ ನಿಮಿತ್ತ ಮಧ್ಯಾಹ್ನ `ಗೋಧಿ ಹುಗ್ಗಿ~ಯ ಪ್ರಸಾದ ವಿತರಿಸಲಾಯಿತು.ರಥೋತ್ಸವ ಕಾಲಕ್ಕೆ ಸ್ಥಳೀಯ ಪೊಲೀಸ್  ಸಿಬ್ಬಂದಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದರು. ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎನ್.ಬಿ.ಬನ್ನೂರ, ಸಮಾಜದ ಅಧ್ಯಕ್ಷ ದಶರಥಪ್ಪ ಅಂಕದ, ವಿಠ್ಠಲ ಗೌಡರ, ಜಿ.ಆರ್.ಮದಿ, ಲಕ್ಷ್ಮಣ ಮುಗಳಿ ಸೇರಿದಂತೆ  ಪ್ರಮುಖರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

 

Post Comments (+)