ಶುಕ್ರವಾರ, ಜೂನ್ 25, 2021
30 °C

ವಿಜೃಂಭಣೆಯ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳಲ್ಕೆರೆ: ತಾಲ್ಲೂಕಿನ ಹೊರಕೆರೆ ದೇವರಪುರದಲ್ಲಿ ಲಕ್ಷ್ಮೀ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.ಐತಿಹಾಸಿಕ ಹಾಗೂ ಕಲಾತ್ಮಕ ದೇವಾಯದ ಮುಂದೆ ಸ್ವಾಮಿಯ ಬೃಹತ್ ರಥವನ್ನು ಭಾರೀ ಹೂವಿನ ಹಾರಗಳೊಂದಿಗೆ ಅಲಂಕರಿಸಲಾಗಿತ್ತು. ಸಂಜೆ 4ಕ್ಕೆ ರಥದ ಮೇಲೆ ಲಕ್ಷ್ಮೀನರಸಿಂಹ ಸ್ವಾಮಿಯನ್ನು ಕೂರಿಸಲಾಯಿತು. ಈ ಸಂದರ್ಭದಲ್ಲಿ ಭಕ್ತರ ಜಯಘೋಷಗಳು ಮುಗಿಲು ಮುಟ್ಟಿದ್ದವು.`ಪುಬ್ಬಾ~ ನಕ್ಷತ್ರದ ಶುಭತುಲಾ ಲಗ್ನದಲ್ಲಿ ಭಕ್ತರು ರಥವನ್ನು ಪೂರ್ವದಿಕ್ಕಿಗೆ ಎಳೆದು ಭಕ್ತಿಭಾವ ಮೆರೆದರು. ಭಕ್ತರು ರಥಕ್ಕೆ ಬಾಳೆ ಹಣ್ಣು ತೂರಿ, ಕೈಮುಗಿದು ದೇವರಿಗೆ ಹರಕೆ ಸಲ್ಲಿಸಿದರು.ಬಯಲು ಸೀಮೆಯ ಮುಖ್ಯ ಜಾತ್ರೆಗಳಲ್ಲಿ ಒಂದಾದ ಈ ರಥೋತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ರಥೋತ್ಸವದ ನಂತರ ಭಕ್ತರು ರಥದ ಮೇಲಿದ್ದ ದೇವರಿಗೆ ಪೂಜೆ, ಮಂಗಳಾರತಿ ಮಾಡಿಸಿದರು. ಒಂದೇ ದಿನದಲ್ಲಿ 2 ಬಾರಿ ರಥೋತ್ಸವ ನಡೆಯುವುದು ಇಲ್ಲಿನ ವಿಶೇಷವಾಗಿದ್ದು, ಬೆಳಗಿನಜಾವ ಮತ್ತೊಮ್ಮೆ ರಥೋತ್ಸವ ನಡೆಯುತ್ತದೆ.ಗರುಡನ ಆಗಮನ: ಗರುಡವೊಂದು ಹಾರಿ ಬಂದು ರಥವನ್ನು ಮೂರು ಬಾರಿ ಪ್ರದಕ್ಷಿಣೆ ಹಾಕಿದ ನಂತರ ರಥವನ್ನು ಎಳೆಯಬೇಕು ಎಂಬ ಸಂಪ್ರದಾಯ ಇಲ್ಲಿದೆ. ರಥದ ಮೇಲೆ ದೇವರನ್ನು ಕೂರಿಸಿ ಪೂಜೆ ನೆರವೇರಿಸಲಾಗುತ್ತದೆ. ನಂತರ ಆಕಾಶದಲ್ಲಿ ಗರುಡ ಕಾಣಿಸಿಕೊಂಡು, ತೇರನ್ನು 3 ಬಾರಿ ಪ್ರದಕ್ಷಿಣೆ ಹಾಕಿ, ದೇವಾಲಯದ ಕಡೆ ಹಾರಿ ಹೋಗುತ್ತದೆ. ಈ ಬಾರಿಯೂ ಆಕಾಶದಲ್ಲಿ ಎರಡು ಗರುಡಗಳು ಕಾಣಿಸಿಕೊಂಡಾಗ ಭಕ್ತರು `ಗೋವಿಂದಾ, ಗೋವಿಂದ~ ಎಂದು ಕೂಗುತ್ತ ಭಕ್ತಿಯಿಂದ ಕೈಮುಗಿದರು. ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.ದೇವರಿಗೆ ಹಾಕಲಾಗಿದ್ದ ಹೂವಿನ ಹಾರವೊಂದನ್ನು ್ಙ 35,501 ಕ್ಕೆ ಡಿವೈಎಸ್‌ಪಿ ಆಂಜನೇಯ ಹರಾಜಿನಲ್ಲಿ ಪಡೆದರು. ಜಾತ್ರೆಗೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ದೇವಾಲಯ ಟ್ರಸ್ಟ್ ವತಿಯಿಂದ ಭಕ್ತರಿಗೆ ವಸತಿ, ಕುಡಿಯುವ ನೀರು ಮತ್ತಿತರ ವ್ಯವಸ್ಥೆ ಮಾಡಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.