ಬುಧವಾರ, ನವೆಂಬರ್ 13, 2019
24 °C

ವಿಜೃಂಭಣೆಯ ಹನುಮಂತ ದೇವರ ರಥೋತ್ಸವ

Published:
Updated:
ವಿಜೃಂಭಣೆಯ ಹನುಮಂತ ದೇವರ ರಥೋತ್ಸವ

ಭಟ್ಕಳ: ಇತಿಹಾಸ ಪ್ರಸಿದ್ದ ಭಟ್ಕಳದ ಗ್ರಾಮದೇವತೆ ಚೆನ್ನಪಟ್ಟಣ ಹನುಮಂತ ದೇವರ ರಥೋತ್ಸವ ರಾಮನವಮಿಯ ದಿನವಾದ ಶುಕ್ರವಾರದಂದು ಸಾವಿರಾರು ಭಕ್ತಾದಿಗಳ ಜಯಘೋಷದೊಂದಿಗೆ ವಿಜೃಂಭಣೆಯಿಂದ ಜರುಗಿತು.ಏ.12ರಂದು ಧ್ವಜಾರೋಹಣ, ಶಿಬಿಕಾ ಯಂತ್ರೋತ್ಸವದೊಂದಿಗೆ ರಥೋತ್ಸವದ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಿ, ಏ. 13ರಂದು ಶಿಬಿ ಯಂತ್ರೋತ್ಸವ, 14ರಂದು ಡೋಲಾ ಯಂತ್ರೋತ್ಸವ, 15ರಂದು ಪುಷ್ಪ ವಾಹನೋತ್ಸವ, 16ರಂದು ಅತಿವೇಗ ವಾಹನೋತ್ಸವ, 17ರಂದು ಗಜ ವಾಹನೋತ್ಸವ, ರಾತ್ರಿ ಪುಷ್ಪ ರಥೋತ್ಸವ, 18ರಂದು ಸಿಂಹ ವಾಹನೋತ್ಸವ ಹಾಗೂ ರಾತ್ರಿ ಪುಷ್ಪರಥೋತ್ಸವ ಜರುಗಿ, 8ನೇ ದಿನವಾದ ರಾಮನವಮಿಯಂದು ಶ್ರೀದೇವರ ಬ್ರಹ್ಮ ರಥೋತ್ಸವ ಜರುಗಿತು.ರಥೋತ್ಸವ ಅಂಗವಾಗಿ ಹನುಮಂತ ದೇವರಿಗೆ ವಿಶೇಷಪೂಜೆ, ಪುನಸ್ಕಾರ, ಶಿಯಾಳ ಸೇರಿದಂತೆ ಹಲವು ಬಗೆಯ ಅಭಿಷೇಕಗಳು ನಡೆಯಿತು. ಬೆಳಿಗ್ಗೆಯಿಂದ ಸಂಜೆವರೆಗೆ ಸಾವಿರಾರು ಭಕ್ತಾದಿಗಳು ಸರತಿಯ ಸಾಲಿನಲ್ಲಿ ನಿಂತುಕೊಂಡು ಪೂಜೆಯೊಂದಿಗೆ ರಥಕಾಣಿಕೆ ಸಲ್ಲಿಸಿ ಕೃತಾರ್ಥರಾದರು. ಸಂಪ್ರದಾಯದಂತೆ ದೇವಸ್ಥಾನದ ಆಡಳಿತ ಮಂಡಳಿಯವರು, ಮುಸ್ಲಿಂ ಹಾಗೂ ಜೈನ ಕುಟುಂಬಗಳಿಗೆ ವಾದ್ಯಮೇಳದೊಂದಿಗೆ ವೀಳ್ಯ ನೀಡಿ ರಥೋತ್ಸವಕ್ಕೆ ಆಹ್ವಾನ ನೀಡಿದ ನಂತರಸಂಜೆ 5 ಗಂಟೆ ಸುಮಾರಿಗೆ ರಥಬೀದಿಯ ಸುತ್ತಲೂ ರಥವನ್ನು ಎಳೆಯಲಾಯಿತು. ಹುಲಿವೇಷ, ತಟ್ಟಿರಾಯ, ಗೊಂಬೆ ಕುಣಿತ,ಭಜನೆಗಳು ರಥೋತ್ಸವಕ್ಕೆ ಮತ್ತಷ್ಟು ಮೆರಗು ನೀಡಿದವು.

ವೇದಮೂರ್ತಿ ರಮಾನಂದ ಅವಭೃತರ ಮಾರ್ಗದರ್ಶನದಲ್ಲಿ ವೈದಿಕ ವೃಂದದವರು ರಥೋತ್ಸವದ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಾದ ಬಿ.ಜೆ.ಪಿ.ಯ ಗೋವಿಂದ ನಾಯ್ಕ, ಕೆಜೆಪಿಯ ಶಿವಾನಂದ ನಾಯ್ಕ, ಜೆ.ಡಿ.ಎಸ್.ನ ಇನಾಯತ್ ಉಲ್ಲಾ ಶಾಬಂದ್ರಿ, ಬಿ.ಎಸ್‌ಆರ್ ಕಾಂಗ್ರೆಸ್‌ನ ಎಂ.ಎಂ. ನಾಯ್ಕ, ಪ್ರಮುಖರಾದ ಸುರೇಂದ್ರ ಶಾನುಭಾಗ್, ಬಾಲಕೃಷ್ಣ ಶಾಸ್ತ್ರಿ,ವಸಂತ ಖಾರ್ವಿ, ಬಿ.ಜೆ.ಪಿ ಕ್ಷೇತ್ರ ಘಟಕದ ಅಧ್ಯಕ್ಷ ದಿನೇಶ ನಾಯ್ಕ ಹಾಗೂ ಎಲ್ಲಾ ಸಮಾಜದ ಪ್ರಮುಖರೂ ಸೇರಿದಂತೆ ಸುಮಾರು 10 ಸಾವಿರಕ್ಕೂ ಹೆಚ್ಚು ಭಕ್ತಾಧಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.ಎಎಸ್‌ಪಿ ಸುಧೀರಕುಮಾರ ರೆಡ್ಡಿ ಮಾರ್ಗದರ್ಶನದಲ್ಲಿ ಅರೆ ಸೇನಾಪಡೆ ಪಡೆ ಹಾಗೂ ಪೊಲೀಸರು ಆಯಕಟ್ಟಿನ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.ಏ.20ರಂದು ಶ್ರೀ ದೇವರ ಅಷ್ಟವಾಹನೋತ್ಸವ,ಚೂರ್ಣೋತ್ಸವ,ಅವಭೃತದೊಂದಿಗೆ ರಥೋತ್ಸವದ ವಿಧಿವಿಧಾನಗಳು ಸಂಪನ್ನಗೊಳ್ಳಲಿದೆ. ರಾತ್ರಿ ಮಾರುತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಹಾಗೂ ಮಕ್ಕಳ ಮೇಳದವರಿಂದ ರಾಮಾಶ್ವಮೇಧ ಹಾಗೂ ಪಂಚಾಕ್ಷರಿ ಮಹಿಮೆ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನ ಜರುಗಲಿದೆ.

ಪ್ರತಿಕ್ರಿಯಿಸಿ (+)