ಗುರುವಾರ , ಜೂನ್ 24, 2021
25 °C
ಡಿಆರ್‌ಡಿಒ ವಸತಿ ಸಮುಚ್ಚಯದಲ್ಲಿ ಘಟನೆ

ವಿಜ್ಞಾನಿ ಪತ್ನಿಯ ಬರ್ಬರ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಸಿ.ವಿ.ರಾಮನ್‌ನಗರದಲ್ಲಿರುವ  ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ವಸತಿ ಸಮುಚ್ಚಯದಲ್ಲಿ ಸೋಮವಾರ ಹಾಡಹಗಲೇ ವಿಜ್ಞಾನಿಯ ಪತ್ನಿಯನ್ನು ದುಷ್ಕರ್ಮಿಯೊಬ್ಬ ಬರ್ಬರವಾಗಿ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.ಡಿಆರ್‌ಡಿಒ ವೈಮಾನಿಕ ಅಭಿವೃದ್ಧಿ ಸಂಸ್ಥೆಯ (ಎಡಿಇ) ವಿಜ್ಞಾನಿ ಪಾಕಿಯ ದಾಸ್‌ ಅವರ ಪತ್ನಿ ರಜಿನಿ ರಾಜಬಾಲಾ (49) ಕೊಲೆಯಾದವರು.ಪಾಕಿಯ ಅವರು ಪ್ರತಿನಿತ್ಯದಂತೆ ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದರು. ನಗರದ ಖಾಸಗಿ ಕಾಲೇಜಿನಲ್ಲಿ ಬಿ.ಇ ಓದುತ್ತಿರುವ ಅವರ ಮಗಳು ಸ್ಯಾಮ್ಲಿನಾ ಪ್ರಿಸಿಲ್ಲಾ ಅವರು ಕಾಲೇಜಿಗೆ ಹೋಗಿದ್ದರು. ಈ ವೇಳೆ ರಜಿನಿ ಒಬ್ಬರೇ ಫ್ಲ್ಯಾಟ್‌ನಲ್ಲಿದ್ದರು. ಆಗ ಫ್ಲ್ಯಾಟ್‌ಗೆ ನುಗ್ಗಿರುವ ದುಷ್ಕರ್ಮಿ ಚಾಕುವಿನಿಂದ ಅವರ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ರಜಿನಿ ಅವರ ಚೀರಾಟ ಕೇಳಿದ ಕೆಳಗಿನ ಅಂತಸ್ತಿನ ನಿವಾಸಿ ಸೆಲ್ವಕುಮಾರಿ ಎಂಬು­ವರು ಅನುಮಾನದಿಂದ ಮೆಟ್ಟಿಲುಗಳ ಬಳಿ ಬಂದಿದ್ದಾರೆ. ಇದರಿಂದ ಗಾಬರಿ­ಯಾದ ದುಷ್ಕರ್ಮಿ ಫ್ಲ್ಯಾಟ್‌ನ ಬಾಲ್ಕನಿಯಿಂದ ಕೆಳಗೆ ಜಿಗಿದು ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ನಂತರ ಸೆಲ್ವಕುಮಾರಿ ಅವರು ನೆರೆಹೊರೆಯವರೊಂದಿಗೆ ರಜಿನಿ ಅವರ ಫ್ಲ್ಯಾಟ್‌ಗೆ ಹೋಗಿ ನೋಡಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ತಮಿ­ಳುನಾಡು ಮೂಲದ ಪಾಕಿಯ ದಂಪತಿ 1992ರಲ್ಲಿ ನಗರಕ್ಕೆ ಬಂದಿದ್ದರು. ದಂಪತಿ ಕೊಲೆ ಘಟನೆ ನಡೆದಿರುವ ಡಿಆರ್‌ಡಿಒ ಆವರಣದ ‘ಡಿ’ ಬ್ಲಾಕ್‌ನ 22/­12­ನೇ ಫ್ಲ್ಯಾಟ್‌ನಲ್ಲಿ ಆರು ವರ್ಷಗಳಿಂದ ವಾಸವಿದ್ದರು. ಆ ಫ್ಲ್ಯಾಟ್‌ ಕಟ್ಟಡದ ಮೂರನೇ ಅಂತಸ್ತಿನಲ್ಲಿದೆ. ದಂಪತಿಯ ಹಿರಿಯ ಮಗ ವೆಸ್ಲಿ ಅವರು ಚೆನ್ನೈನಲ್ಲಿ ಬಿ.ಇ ಓದು­ತ್ತಿದ್ದಾರೆ.ಬೈಕ್‌ ಬಿಟ್ಟು ಪರಾರಿ: ‘ಡಿಆರ್‌ಡಿಒ ಪ್ರವೇಶದ್ವಾರಗಳಲ್ಲಿ ಸಾಕಷ್ಟು ಭದ್ರತಾ ಸಿಬ್ಬಂದಿ ಇರುತ್ತಾರೆ. ಆದರೂ ಅವರ ಕಣ್ತಪ್ಪಿಸಿ ಆರೋಪಿ ಹೇಗೆ ಒಳಬಂದ

ಎಂಬುದು ಗೊತ್ತಾಗಿಲ್ಲ. ಆರೋಪಿ ವಸತಿಸಮುಚ್ಚಯದ ಬಳಿ ಬೈಕ್‌

ಬಿಟ್ಟು ಹೋಗಿದ್ದಾನೆ. ಬೈಕ್‌ನ ನೋಂದಣಿ ಸಂಖ್ಯೆ ಆಧರಿಸಿ ಆತನ ಪತ್ತೆಗೆ ಕ್ರಮ ಕೈ­ಗೊಳ್ಳ­ಲಾಗಿದೆ. ಸಂಸ್ಥೆ ಆವರಣದಲ್ಲಿನ ಸಿ.ಸಿ ಕ್ಯಾಮೆರಾಗಳನ್ನು ಪರಿಶೀಲಿಸ­ಲಾ­ಗುತ್ತಿದೆ’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಾರದಲ್ಲಿ ನಾಲ್ಕು ಕೊಲೆ

ನಗರದ ಪೂರ್ವ ವಿಭಾಗದಲ್ಲಿ ಕಳೆದ ಏಳು ದಿನಗಳಲ್ಲಿ ಬಿಬಿಎಂಪಿ ಸದಸ್ಯೆಯ ಪತಿ ಸೇರಿದಂತೆ ನಾಲ್ಕು ಮಂದಿಯ ಕೊಲೆಯಾಗಿದ್ದು, ನಗರದ ಸಾರ್ವಜನಿಕರು ಆತಂಕ­ಗೊಂಡಿದ್ದಾರೆ.ರಾಮಮೂರ್ತಿನಗರ ಸಮೀಪದ ಒಎಂಬಿಆರ್‌ ಲೇಔಟ್‌ನಲ್ಲಿ ಮಾರ್ಚ್ 4ರಂದು ದುಷ್ಕರ್ಮಿಗಳು ಎಲೆಕ್ಟ್ರಾನಿಕ್ಸ್ ಮತ್ತು ರಾಡಾರ್‌ ಅಭಿವೃದ್ಧಿ ಸಂಸ್ಥೆಯ (ಎಲ್‌ಆರ್‌ಡಿಇ) ನಿವೃತ್ತ ವಿಜ್ಞಾನಿ ಪಟ್ಟಾಭಿರಾಮನ್‌ ನಾಯ್ಡು ಹಾಗೂ ಅವರ ಪತ್ನಿ ಇಂದಿರಾ ಅವರನ್ನು ಕೊಲೆ ಮಾಡಿದ್ದರು. ಬಳಿಕ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.ನಂತರ ಮಾ.5ರಂದು ಕೆ.ಆರ್‌.ಪುರ ಸಮೀಪದ ಮುನಿಯಪ್ಪ ಲೇಔಟ್‌ನಲ್ಲಿ ದುಷ್ಕರ್ಮಿಗಳು ಪಾಲಿಕೆ ಸದಸ್ಯೆ ಆರ್‌.ಮಂಜುಳಾದೇವಿ ಅವರ ಪತಿ ಶ್ರೀನಿವಾಸ್‌ ಅವರನ್ನು ಹಾಡಹಗಲೇ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರು.ವಿಶೇಷ ತಂಡ

‘ವಿಜ್ಞಾನಿ ಪತ್ನಿ ರಜಿನಿ ರಾಜಬಾಲಾ ಅವರನ್ನು ಕೊಲೆ ಮಾಡಿದ ಆರೋಪಿ, ಮನೆಯಲ್ಲಿದ್ದ ಆಭ­ರಣ ಸೇರಿ ಯಾವುದೇ ವಸ್ತು­ಗಳನ್ನು ತೆಗೆದು­ಕೊಂಡು ಹೋಗಿಲ್ಲ. ಕೊಲೆಗೆ ಕಾರಣ ಏನೆಂಬುದು ಈವರೆಗೂ ತಿಳಿದು ಬಂದಿಲ್ಲ. 

ಈ ಪ್ರಕರಣದ ಆರೋಪಿ ಪತ್ತೆಗೆ ಎರಡು ವಿಶೇಷ ತಂಡ­ ರಚಿಸಲಾಗಿದೆ.ಆದಷ್ಟು ಬೇಗ ಆರೋಪಿಯನ್ನು ಬಂಧಿಸುವ ವಿಶ್ವಾಸವಿದೆ’ ಎಂದು ಕಾನೂನು ಮತ್ತು ಸುವ್ಯವಸ್ಥೆ (ಪೂರ್ವ) ವಿಭಾಗದ ಜಂಟಿ ಪೊಲೀಸ್‌ ಕಮಿಷನರ್‌ ಕೆ.ವಿ. ಶರತ್‌ಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.