ಗುರುವಾರ , ಮೇ 28, 2020
27 °C

ವಿಜ್ಞಾನಿ -ವಿದ್ಯಾರ್ಥಿ ಸಂವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚು ನಡೆಯುವ ನಗರದ ಟಿ.ಚೆನ್ನಯ್ಯ ಕಲಾಮಂದಿರದಲ್ಲಿ ಮಂಗಳವಾರ ವಿಜ್ಞಾನದ್ದೇ ಮಾತು. ಚರ್ಚೆ. ಅಲ್ಲಿದ್ದವರು ವಿಜ್ಞಾನಿಗಳು ಮತ್ತು ಜಿಲ್ಲೆಯ ಆಯ್ದ 40 ಪ್ರೌಢಶಾಲೆ ಮತ್ತು 10 ಪದವಿಪೂರ್ವ ಕಾಲೇಜಿನ ವಿಜ್ಞಾನ ವಿದ್ಯಾರ್ಥಿಗಳು.ಕೊಲೆಗಾರನನ್ನು ಪತ್ತೆ ಹಚ್ಚುವುದು ಹೇಗೆ ಎಂಬುದರಿಂದ ಮನುಷ್ಯ ಬದುಕಿನಲ್ಲಿ ಲೋಹಗಳು ವಹಿಸುವ ವೈವಿಧ್ಯಮಯ ಪಾತ್ರಗಳವರೆಗೆ ಸಂವಾದ ಹರಡಿಕೊಂಡಿತ್ತು. ನಿಗೂಢ ವಸ್ತು, ಸಂಗತಿಗಳನ್ನು ವ್ಯಕ್ತಿಯ ವಂಶವಾಹಿಗಳ ಮೂಲಕ ಪತ್ತೆ ಹಚ್ಚುವ ವಿಧಾನಗಳ ಕುರಿತು ವಿನೋದ್‌ಲಕ್ಕಪ್ಪನ್ ಲವಲವಿಕೆಯಿಂದ ವಿದ್ಯಾರ್ಥಿಗಳೊಡನೆ ಚರ್ಚಿಸಿದರು. ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಿದರು.ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ ಸೇರಿದಂತೆ ಹಲವು ಲೋಹಗಳು ಮನುಷ್ಯ ಬದುಕನ್ನು ಆವರಿಸಿರುವ ವೈಜ್ಞಾನಿಕ ನೆಲೆಗಳ ಕುರಿತು ಡಾ.ರಘೋತ್ತಮರಾವ್ ಉಪನ್ಯಾಸ ನೀಡಿ ಸಂವಾದ ನಡೆಸಿದರು. ಲೋಹಗಳ ಬಗ್ಗೆ ವಿದ್ಯಾರ್ಥಿಗಳು ಕೇಳಿದ ಹಲವು ಪ್ರಶ್ನೆಗಳಿಗೆ ಅವರು ರೋಚಕವೆನಿಸುವ ಉತ್ತರಗಳನ್ನೂ ನೀಡಿದರು. ಇಡೀ ದಿನ ನಡೆದ ಸಂವಾದದಲ್ಲಿ ವಿಜ್ಞಾನ-ಸಮಕಾಲೀನ ಬದುಕು ಮತ್ತು ಮೂಢನಂಬಿಕೆಗಳ ಬಗ್ಗೆ ವಸ್ತುನಿಷ್ಠ ಚರ್ಚೆ ಗಮನ ಸೆಳೆಯಿತು.ಉದ್ಘಾಟನೆ: ಕಾರ್ಯಕ್ರಮ ಉದ್ಘಾಟಿಸಬೇಕಿದ್ದ ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ ಅವರು ವಿದ್ಯಾರ್ಥಿ-ವಿಜ್ಞಾನಿಗಳಿಂದಲೇ ಕಾರ್ಯಕ್ರಮ ಉದ್ಘಾಟನೆಗೊಳ್ಳುವುದು ಉಚಿತ ಎಂಬ ಸ್ವಯಂಸ್ಫೂರ್ತಿಯ ಸಲಹೆ ನೀಡಿ ವಿದ್ಯಾರ್ಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಮೇಡಿಹಳ್ಳಿಯ ಸರ್ಕಾರಿ ಶಾಲೆ ಮತ್ತು ನಗರದ ಚಿನ್ಮಯ ಶಾಲೆಯ ವಿದ್ಯಾರ್ಥಿಗಳಿಗೆ ಕಾರ್ಯಕ್ರಮ ಉದ್ಘಾಟಿಸುವ ದಿಢೀರ್ ಅವಕಾಶ ದೊರೆಯಿತು.ಜ್ಞಾನಕ್ಕೆ ಗುರು ಎಂಬುವರಿಲ್ಲ. ಜ್ಞಾನ ಎಂಬುದು ಕುತೂಹಲ ಮತ್ತು ಬೆರಗಿನಿಂದ ಶುರುವಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ತಾವು ಶಾಲೆಯಲ್ಲಿ ಕಲಿತಿದ್ದನ್ನು ಮುಚ್ಚಿಟ್ಟು, ಸಹಜ ಕುತೂಹಲದ ಪ್ರಶ್ನೆಗಳೊಡನೆ ಸಂವಾದದಲ್ಲಿ ಪಾಲ್ಗೊಳ್ಳಬೇಕು. ಇದು ಚಿನ್ನದಂಥ ಅವಕಾಶ ಎಂದು ಜಿಲ್ಲಾಧಿಕಾರಿ ಅಭಿಪ್ರಾಯಪಟ್ಟರು.ನಂತರ ಮಾತನಾಡಿದ ದೇವರಾಜ ಅರಸು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಬಿ.ಸಾಣಿಕೊಪ್ಪ, ಹಲವು ವೃತ್ತಿಪರ ಕ್ಷೇತ್ರಗಳಲ್ಲಿ ಸಂಶೋಧನೆಗೆ ಆದ್ಯತೆ ಕಡಿಮೆಯಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಮೂಲವಿಜ್ಞಾನದೆಡೆಗೆ ಆಸಕ್ತಿ ಹೊಂದಿ ಸಂಶೋಧನೆ ಕಡೆಗೆ ಹೆಚ್ಚು ತುಡಿಯಬೇಕು ಎಂದು ಸಲಹೆ ನೀಡಿದರು.ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪ್ರಹ್ಲಾದಗೌಡ ಮಾತನಾಡಿ, ಪದವಿ ಹಂತದಲ್ಲಿ ಮೂಲ ವಿಜ್ಞಾನ ಕಲಿಯುವರ ಸಂಖ್ಯೆ ಕಡಿಮೆಯಾಗುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ 83 ವಿಜ್ಞಾನ ಶಿಕ್ಷಕರ ಅಗತ್ಯವಿದೆ. ಆದರೆ ಅರ್ಹರ ಕೊರತೆ ಇದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಪರಿಷತ್ತಿನ ರಾಜ್ಯ ಘಟಕದ ಗೌರವ ಕಾರ್ಯದರ್ಶಿ ವಸುಂಧರಾ ಭೂಪತಿ ಮಾತನಾಡಿ, ವಿದ್ಯಾರ್ಥಿಗಳು ಸತತ ಅಧ್ಯಯನ ಶೀಲರಾಗಬೇಕು. ಆಟದಲ್ಲೂ ಪಾಲ್ಗೊಳ್ಳಬೇಕು. ಕೀಳರಿಮೆ ಬಿಟ್ಟು ವಿಜ್ಞಾನ ಕಲಿಕೆಗೆ ಮುಂದಾಗಬೇಕು ಎಂದು ನುಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಇದ್ದರು. ಸಂಚಾಲಕಿ ಮಂಜುಳಾ ಭೀಮರಾವ್ ಪ್ರಾಸ್ತಾವಿಕ ಮಾತನಾಡಿದರು. ಕೆ.ಪ್ರಹ್ಲಾದರಾವ್ ಸ್ವಾಗತಿಸಿದರು. ವಾಣಿಶ್ರೀ ನಿರೂಪಿಸಿದರು.ಸಮಾರೋಪ

ಕಾರ್ಯಕ್ರಮದ ಸಮಾರೋಪ ಜ19ರಂದು ಸಂಜೆ 4.30ಕ್ಕೆ ನಡೆಯಲಿದೆ. ದೇವರಾಜ ಅರಸು ವೈದ್ಯಕೀಯ ವಿದ್ಯಾಲಯದ ಕುಲಪತಿ ಡಾ.ಎಸ್.ಚಂದ್ರಶೇಖರ ಶೆಟ್ಟಿ ಸಮಾರೋಪ ಭಾಷಣ ಮಾಡುವರು. ಪರಿಷತ್‌ನ ಅಧ್ಯಕ್ಷ ಡಾ.ಎಚ್.ಎಸ್.ನಿರಂಜನಾರಾಧ್ಯ ಅಧ್ಯಕ್ಷತೆ ವಹಿಸುವರು. ಶಿಕ್ಷಣಾಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಅತಿಥಿಯಾಗಿರುವರು. ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ವಿಶೇಷ ಆಹ್ವಾನಿತರಾಗಿರುವರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.