ಬುಧವಾರ, ಅಕ್ಟೋಬರ್ 16, 2019
21 °C

ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಗೆ ಆದ್ಯತೆ - ನಿರುಪಮಾ ರಾವ್

Published:
Updated:

ಭುವನೇಶ್ವರ (ಐಎಎನ್ಎಸ್): ವಿಜ್ಞಾನದ ಚಟುವಟಿಕೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಿ ದೇಶದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಅವರು ಮಹತ್ವದ ಪಾತ್ರ ನಿರ್ವಹಿಸುವಂತಾಗಬೇಕು ಎಂದು ಅಮೆರಿಕದಲ್ಲಿನ ಭಾರತದ ರಾಯಭಾರಿ ನಿರುಪಮಾ ರಾವ್ ಆಶಿಸಿದರು.



ಇಲ್ಲಿ ನಡೆಯುತ್ತಿರುವ 99ನೇ ಅಖಿಲ ಭಾರತ ವಿಜ್ಞಾನ ಸಮಾವೇಶದ ಅಂಗವಾಗಿ ಗುರುವಾರ ಆಯೋಜಿಸಲಾಗಿದ್ದ ಮಹಿಳಾ ವಿಜ್ಞಾನ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ದುಪ್ಪಟ್ಟು ಶ್ರಮವಹಿಸಿ ವಿಜ್ಞಾನ ಕ್ಷೇತ್ರವನ್ನು ಇನ್ನಷ್ಟು ವಿಸ್ತಾರಗೊಳಿಸಬೇಕಾಗಿದೆ ಎಂದು ಹೇಳಿದರು.



ಭಾರತದಲ್ಲಿ ಮಹಿಳಾ ವಿಜ್ಞಾನಿಗಳ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಆದ್ದರಿಂದ ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುವಂತೆ ಸರ್ಕಾರ ಉತ್ತೇಜಕ ನೀತಿಗಳನ್ನು ರೂಪಿಸಬೇಕಾದ ಅಗತ್ಯ ಇದೆ ಎಂದು ಅವರು ಅಭಿಪ್ರಾಯಪಟ್ಟರು.



ವಿಜ್ಞಾನ ಮತ್ತು ಇತರೆ ವಲಯಗಳಲ್ಲಿ  ರುವ ಲಿಂಗ ಆಧಾರಿತ ನೀತಿಯಲ್ಲಿರುವ ತಾರತಮ್ಯವನ್ನು ಹೋಗಲಾಡಿಸಬೇಕಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವುದರಿಂದ ದೇಶದ ಅಭಿವೃದ್ಧಿ ಕಾರ್ಯಕ್ರಮಗಳು ಯಶಸ್ಸು ಕಾಣಲು ಸಾಧ್ಯ ಎಂದು ಹೇಳಿದರು.



ಅಮೆರಿಕದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪಿಎಚ್.ಡಿ ಪಡೆದವರ ಪ್ರಮಾಣ ಈಚೆಗೆ ಹೆಚ್ಚಾಗಿದೆ. ಇದರಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ರಾವ್ ಅವರು ಉದಾಹರಣೆ ನೀಡಿದರು.



ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಸಮಾನ ಸಹಭಾಗಿತ್ವ ಇಲ್ಲದೇ ಮಹಿಳೆಯರ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ರಾಜ್ಯ ಸಚಿವೆ ಡಿ.ಪುರಂದೇಶ್ವರಿ ಅವರು ಹೇಳಿದರು.



ಮಂಗಳವಾರ ಆರಂಭವಾಗಿರುವ ವಿಜ್ಞಾನ ಸಮಾವೇಶದ ಮುಖ್ಯ ವಿಷಯ `ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ~. ಐದು ದಿನಗಳ ಸಮಾವೇಶ ವಿಜಾಪುರದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಗೀತಾ ಬಾಲಿ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ.

 

Post Comments (+)