ಸೋಮವಾರ, ಮೇ 10, 2021
25 °C

`ವಿಜ್ಞಾನ, ತಂತ್ರಜ್ಞಾನಕ್ಕೆ ಗಣಿತ ಅಗತ್ಯ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: `ಯುರೋಪ್‌ನಲ್ಲಿ ಮೊದಲು ಬಿಡಿ ಗಣಿತಕ್ಕೆ ಹೆಚ್ಚಿನ ಪ್ರಾತಿನಿಧ್ಯ ಸಿಗುತ್ತಿತ್ತು. ಆದರೆ, ಈಗ ಪ್ರಪಂಚದಾದ್ಯಂತ ಈ ವಿಷಯವನ್ನು ಅನೇಕ ಗಣಿತ ತಜ್ಞರು ವ್ಯಾಸಂಗ ಮಾಡುತ್ತಿದ್ದಾರೆ. ಬಿಡಿ ಗಣಿತ ಪ್ರಸ್ತುತ ಗಣಿತ ಕ್ಷೇತ್ರದಲ್ಲಿ ತೀಕ್ಷ್ಣ ಬೆಳವಣಿಗೆಯ ವಿಷಯವಾಗಿ ಹೊರಹೊಮ್ಮುತ್ತಿದೆ' ಎಂದು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್. ಮಹೇಶಪ್ಪ ಹೇಳಿದರು.ಇಲ್ಲಿಯ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಐದು ದಿನಗಳ ಅಂತರರಾಷ್ಟ್ರೀಯ ಬಿಡಿ ಗಣಿತ ತಜ್ಞರ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿಯಾಗಬೇಕಾದರೆ ಅಲ್ಲಿ ಗಣಿತದ ಬೆಳವಣಿಗೆ ಬಹುಮುಖ್ಯವಾಗಿರುತ್ತದೆ. ವಿಜ್ಞಾನ ಕ್ಷೇತ್ರದಲ್ಲಿ ಗಣಿತ ಮಹತ್ವದ ಪಾತ್ರ ವಹಿಸುವ ಮೂಲಕ ತಂತ್ರಜ್ಞಾನದ ಬೆಳವಣಿಗೆಗೆ ಉತ್ಕೃಷ್ಟ ಕೊಡುಗೆ ನೀಡಿದೆ. ಬಿಡಿ ಗಣಿತವು ಗಣಿತದ ಒಂದು ಭಾಗವಾಗಿ ಕೇವಲ ಗಣಿತ ತಜ್ಞರಿಗೆ ಸೀಮಿತಗೊಳ್ಳದೇ, ಕಲಾ, ಸಮಾಜಶಾಸ್ತ್ರ ಸೇರಿದಂತೆ ಮತ್ತಿತರ ಕ್ಷೇತ್ರಗಳಲ್ಲಿಯೂ ತನ್ನ ಛಾಪು ಮೂಡಿಸಿದೆ' ಎಂದು ಅವರು ಹೇಳಿದರು.ಹಂಗೇರಿಯ ಪ್ರೊ.ಡಿ.ಎಚ್.ಕಟೋನಾ ಮಾತನಾಡಿ, `ಬಿಡಿ ಗಣಿತ ಇಂದು ತನ್ನ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಈ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಅನೇಕ ಅಂತರರಾಷ್ಟ್ರೀಯ ಸಂಸ್ಥೆಗಳು ಹಾಗೂ ಸರ್ಕಾರಗಳು ಸಾಕಷ್ಟು ಹಣ ನೀಡುತ್ತಿವೆ' ಎಂದರು.ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಎಚ್. ಬಿ.ವಾಲೀಕಾರ, `ಬಿಡಿ ಗಣಿತ ತಜ್ಞರು ಒಂದು ಕುಟುಂಬವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಬಿಡಿ ಗಣಿತ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ ಎಂದ ಅವರು, 1970ರಲ್ಲಿ ಬಿಡಿ ಗಣಿತ ವಿಷಯದ ವಿದ್ಯಾರ್ಥಿಗಳಿಗೆ ಕೇವಲ ಒಂದು ಸಂಶೋಧನಾ ಗ್ರಂಥ ಹಾಗೂ ಎರಡು ಬಿಡಿ ಗಣಿತದ ಪುಸ್ತಕಗಳು ಲಭ್ಯವಿದ್ದವು.ಆದರೆ, ಇಂದು 30ಕ್ಕೂ ಅಧಿಕ ಸಂಶೋಧನಾ ಗ್ರಂಥಗಳು ಹಾಗೂ 170 ಪುಸ್ತಕಗಳು ಲಭ್ಯವಿವೆ. ಇಂಥ ಬಿಡಿ ಗಣಿತ ಸಮ್ಮೇಳನಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 10 ಲಕ್ಷ ರೂಪಾಯಿ ಧನ ಸಹಾಯ ಮಾಡಿರುವುದು ಶ್ಲಾಘನೀಯ' ಎಂದರು.ಈ ಸಮ್ಮೇಳನದಲ್ಲಿ ಅಮೇರಿಕಾ, ಹಂಗೇರಿ, ಫ್ರಾನ್ಸ್, ಚೀನಾ, ರಷ್ಯಾ, ತೈವಾನ್ ಸೇರಿದಂತೆ ವಿವಿಧೆಡೆಯ ಸುಮಾರು 50ಕ್ಕೂ ಅಧಿಕ ಗಣಿತ ತಜ್ಞರು ಭಾಗವಹಿಸಿದ್ದಾರೆ. ಸುಮಾರು 200ಕ್ಕೂ ಅಧಿಕ ಯುವ ವಿಜ್ಞಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗಣಿತ ತಜ್ಞ ಡಾ.ಪಿ.ಜೆ.ಸ್ಲೇಟರ್, ಕುಲಸಚಿವ ಡಾ.ಜಿ.ಬಿ.ನಂದನ್ ವೇದಿಕೆಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.