ವಿಜ್ಞಾನ ಪರಿಕರ ಖರೀದಿ: ರೂ. 12 ಲಕ್ಷ ಗೋಲ್‌ಮಾಲ್

7

ವಿಜ್ಞಾನ ಪರಿಕರ ಖರೀದಿ: ರೂ. 12 ಲಕ್ಷ ಗೋಲ್‌ಮಾಲ್

Published:
Updated:

ಗಂಗಾವತಿ: ಸಮೀಪದ ಹೊಸಬಂಡಿ ಹರ್ಲಾಪೂರ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ಪರಿಕರಗಳ ಖರೀದಿಗೆಂದು ಸರ್ಕಾರ ನೀಡಿದ್ದ ಅನುದಾನದಲ್ಲಿ ಸುಮಾರು ರೂ.12 ಲಕ್ಷ ಮೊತ್ತದಷ್ಟು ಅವ್ಯವಹಾರ ನಡೆದ ಬಗ್ಗೆ ದೂರು ವ್ಯಕ್ತವಾಗಿವೆ.ಮಹಾ ವಿದ್ಯಾಲಯಕ್ಕೆ ಇದೇ ವರ್ಷದಿಂದ ಬಿಎಸ್ಸಿ ವಿಜ್ಞಾನ ಪದವಿಯ ಮಾನ್ಯತೆ ದೊರೆತಿದೆ. ಈ ಹಿನ್ನೆಲೆಯಲ್ಲಿ ವಿಜ್ಞಾನ ವಿಷಯಕ್ಕೆ ಅಗತ್ಯವಾಗುವ ಪರಿಕರ, ಪ್ರಯೋಗಲಯದ ಸಾಮಾಗ್ರಿ ಖರೀದಿಗೆ ಸರ್ಕಾರ ಸುಮಾರು 35 ಲಕ್ಷ ರೂಪಾಯಿ ಮಂಜೂರು ಮಾಡಿದೆ.ಈ ಪೈಕಿ ಸುಮಾರು 12 ಲಕ್ಷ ಮೊತ್ತದಷ್ಟು ಅನುದಾನದಲ್ಲಿ ಪ್ರಾಚಾರ್ಯರು ತಮಗಿಷ್ಟ ಬಂದ ಕಡೆಯಲ್ಲಿ ಹಾಗೂ ಆಪ್ತರ ಮೂಲಕ ಕೆಳ ದರ್ಜೆ ಗುಣಮಟ್ಟದ ಕುರ್ಚಿ, ಮೇಜು ಮೊದಲಾದ ಪರಿಕರ ಖರೀದಿಸಿದ್ದಾರೆ ಎನ್ನಲಾಗಿದೆ.ಕೊಪ್ಪಳ ಶಾಸಕ ಕರಡಿ ಸಂಗಣ್ಣ ಈ ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿದ್ದಾರೆ. ಜ. 28ರಂದು ಸಮಿತಿ ಸದಸ್ಯರು ಸಭೆ ನಡೆಸಿದಾಗ ಪ್ರಕರಣ ಬಯಲಾಗಿದೆ. ಪ್ರಭಾರಿ ಪ್ರಾಚಾರ್ಯ ಪರಸಪ್ಪ ಭಜಂತ್ರಿ ಅವರನ್ನು ಸದಸ್ಯರು ತೀವ್ರ ತರಾಟೆಗೆ ತೆಗೆದುಕೊಂಡರು ಎಂದು ತಿಳಿದು ಬಂದಿದೆ.ಉಲ್ಲಂಘನೆ: ಸರ್ಕಾರದಿಂದ ಬಂದ ಅನುದಾನ ಬಳಕೆ ಮಾಡುವ ಪೂರ್ವದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸಭೆಯಲ್ಲಿ ವಿಷಯ ಮಂಡಿಸಿ, ಚರ್ಚಿಸಿ ಅನುಮತಿ ಪಡೆಯಬೇಕೆಂಬ ನಿಯಮಯನ್ನು ಪ್ರಾಚಾರ್ಯರು ಉಲ್ಲಂಘಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಕನಿಷ್ಠ ಒಂದು ಲಕ್ಷ ರೂಪಾಯಿ ಮೇಲ್ಪಟ್ಟು ಯಾವುದೆ ವಸ್ತು ಖರದಿಸಿದರೆ ಟೆಂಡರ್ ಕರೆಯಬೇಕು. ಉತ್ತಮ ಗುಣಮಟ್ಟ ಪೂರೈಸುವ ಮತ್ತು ಕನಿಷ್ಠ ಬೆಲೆ ಸೂಚಿಸುವ ವ್ಯಕ್ತಿಗಳಿಗೆ ಮಾತ್ರ ಸರಬರಾಜಿಗೆ ಅವಕಾಶ ಕಲ್ಪಿಸಬೇಕೆಂಬ ನಿಯಮ ಗಾಳಿಗೆ ತೂರಲಾಗಿದೆ ಎನ್ನಲಾಗಿದೆ.ಹಸ್ತಾಂತರ: ಪ್ರಕರಣ ಸಿಡಿಸಿ ಸದಸ್ಯರ ಗಮನಕ್ಕೆ ಬರುತ್ತಿದ್ದಂತಯೆ ಉಪಾಧ್ಯಕ್ಷ ಐಸಿಎಲ್ ಚಂದ್ರಶೇಖರ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿದ ಸದಸ್ಯರು, ಕೂಡಲೆ ಪ್ರಭಾರಿ ಪ್ರಾಚಾರ್ಯರ ಅಧಿಕಾರವನ್ನು ಬೇರೊಬ್ಬರಿಗೆ ವಹಿಸುವಂತೆ ಸೂಚಿಸಿದರು ಎನ್ನಲಾಗಿದೆ.   ಪರಿಕರಗಳ ಖರೀದಿಸಿದ್ದಕ್ಕೆ ಸೂಕ್ತ ಬಿಲ್, ಕೊಟೇಶನ್ ಮತ್ತಿತರ ಮಾಹಿತಿ ನೀಡುವಂತೆ ಸದಸ್ಯರು  ಕೋರಿದರೆ ಪರಸಪ್ಪ ಭಜಂತ್ರಿ ಅವರ ಬಳಿ ಯಾವುದೇ ಪೂರಕ ಮಾಹಿತಿ ಲಭ್ಯವಿರಲಿಲ್ಲ. ಸರಿ ಹೊಂದಿಸಲು ವಾರದ ಗಡುವು ಕೋರಿದರು ಎನ್ನಲಾಗಿದೆ.ಎಡಿ ಭೇಟಿ: ಗುಲ್ಬರ್ಗ ಪ್ರಾದೇಶಿಕ ಕಚೇರಿಯಿಂದ ಕಾಲೇಜು ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕರು ಇತ್ತೀಚಿಗೆ ಭೇಟಿ ನೀಡಿ ಬಿಲ್ ಬುಕ್, ಕ್ಯಾಷ್, ಹಾಜರಾತಿ ಪುಸ್ತಕ ಪರಿಶೀಲಿಸಿ ತೆರಳಿದರು. ಜಂಟಿ ನಿರ್ದೇಶಕರು ಶೀಘ್ರ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry