ಭಾನುವಾರ, ಆಗಸ್ಟ್ 25, 2019
28 °C

ವಿಜ್ಞಾನ ಪ್ರದರ್ಶನ; `ಬಾಲ ವಿಜ್ಞಾನಿ'ಗಳ ಮೋಡಿ

Published:
Updated:

ವಿಜಾಪುರ ನಗರದಲ್ಲಿ ಈಗ `ಬಾಲ ವಿಜ್ಞಾನಿ'ಗಳ ಮೋಡಿ. ಅವರು ತಯಾರಿಸಿರುವ ವಿಜ್ಞಾನ ಮಾದರಿಗಳನ್ನು ಕಣ್ಣಾರೆ ಕಂಡು-ಮಾಹಿತಿ ಪಡೆಯುವ ಯೋಗ ಇತರ ವಿದ್ಯಾರ್ಥಿಗಳಿಗೆ.ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯಿಂದ ಹಮ್ಮಿಕೊಂಡಿರುವ ಇನ್‌ಸ್ಪೈರ್ ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿಗಳು ತಯಾರಿಸಿರುವ ವಿಜ್ಞಾನ ಮಾದರಿ ಪ್ರದರ್ಶನ ಗಮನ ಸೆಳೆಯುತ್ತಿದೆ.ಎರಡು ದಿನಗಳ ಈ ಪ್ರದರ್ಶನ ಶನಿವಾರದಿಂದ ಆರಂಭಗೊಂಡಿದೆ. ವಿ.ಬಿ. ದರಬಾರ ಪ್ರೌಢ ಶಾಲೆ, ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಪಿ.ಡಿ.ಜೆ. ಪ್ರೌಢ ಶಾಲೆಯಲ್ಲಿ ಆಯೋಜಿಸಿರುವ ಈ ಪ್ರದರ್ಶನದಲ್ಲಿ ಅವಳಿ ಜಿಲ್ಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.`ಮಕ್ಕಳು ತಯಾರಿಸಿರುವ ವಿಜ್ಞಾನ ಮಾದರಿ ಮತ್ತು ಆ ಕುರಿತು ಅವರು ನೀಡುವ ವಿವರಣೆ ಬೆರಗು ಹುಟ್ಟಿಸುತ್ತದೆ. ಪ್ರದರ್ಶನದಲ್ಲಿ ಒಂದು ಸುತ್ತು ಹಾಕಿದರೆ ವೈಜ್ಞಾನಿಕ ಆವಿಷ್ಕಾರಗಳ ಅರಿವು ಆಗುತ್ತದೆ' ಎಂದು ದರಬಾರ ಪ್ರೌಢ ಶಾಲೆಯ ವಿದ್ಯಾರ್ಥಿ ಶ್ರೀಧರ ಹೇಳಿದ.

ಉದ್ಘಾಟನಾ ಸಮಾರಂಭದಲ್ಲಿ ಬುರಣಾಪುರ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಮಹಾನಂದಾ ಪೂಜಾರ, ತಾನು ತಯಾರಿಸಿದ ಬಾಹ್ಯಾಕಾಶ ಕುರಿತ ವಿಜ್ಞಾನ ಮಾದರಿಯ ಮಾಹಿತಿ ನೀಡಿದರು.ಜಿಲ್ಲಾಧಿಕಾರಿ ಶಿವಯೋಗಿ ಕಳಸದ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಬಿ. ಶಿವಕುಮಾರ, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ ಕೋಳಕೂರ, ಡಯಟ್ ಉಪ ಪ್ರಾಚಾರ್ಯ ಸಿಂಧೂರ, ಆರ್.ವೈ. ಕೊಣ್ಣೂರ ಇತರರು ಉಪಸ್ಥಿತರಿದ್ದರು.ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ಉಪನಿರ್ದೇಶಕ ಕೆ.ಜಿ. ರಾಜೇಂದ್ರ ಸ್ವಾಗತಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ವೈ. ಹಳಿಂಗಳಿ ವಂದಿಸಿದರು.

Post Comments (+)