ಭಾನುವಾರ, ಏಪ್ರಿಲ್ 18, 2021
25 °C

ವಿಜ್ಞಾನ ಭಾಷೆ ಸರಳವಾಗಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜ್ಞಾನ ಭಾಷೆ ಸರಳವಾಗಿರಲಿ

ಬೆಂಗಳೂರು: `ವಿಜ್ಞಾನಕ್ಕೆ ಸಂಬಂಧಿಸಿದ ಲೇಖನಗಳಲ್ಲಿ ಬಳಸುವ ಭಾಷೆ ಸರಳವಾಗಿರಬೇಕು~ ಎಂದು ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಹೇಳಿದರು. 

 

ರಾಜ್ಯ ವಿಜ್ಞಾನ ಪರಿಷತ್ತು ಮತ್ತು ಉದಯಭಾನು ಕಲಾಸಂಘ ಜಂಟಿಯಾಗಿ ಸೋಮವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಿದ್ದ `ಬೆಳ್ಳಾವೆ ವೆಂಕಟನಾರಣಪ್ಪ ಮತ್ತು ನಂಗಪುರಂ ವೆಂಕಟೇಶಯ್ಯಂಗಾರ‌್ಯ~ ಅವರು 1918-19ರಲ್ಲಿ ಪ್ರಕಟಿಸಿದ ವಿಜ್ಞಾನ ಲೇಖನಗಳ ಸಂಕಲನದ `ವಿಜ್ಞಾನ~ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದರು.`ವೈಜ್ಞಾನಿಕ ಬರಹಗಳು ಎಲ್ಲರಿಗೂ ಅರ್ಥವಾಗುವಂತಿರಬೇಕು. ವಿಜ್ಞಾನದ ಲೇಖನಗಳು ಎಂದರೆ ಇಂಗ್ಲಿಷ್‌ನಲ್ಲಿ ಮಾತ್ರ ಬರೆಯಬೇಕು ಎಂಬ ಕಾಲವಿತ್ತು. ಆದರೆ ಕನ್ನಡದಲ್ಲಿಯೂ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ವಿಜ್ಞಾನದ ಲೇಖನವನ್ನು ಬರೆದಿರುವುದು ಕನ್ನಡದ ಹೆಮ್ಮೆ~ ಎಂದರು.`ವೈಜ್ಞಾನಿಕ ವಿಷಯಗಳನ್ನು ತಿಳಿದುಕೊಳ್ಳಲು  ಆಸಕ್ತಿ ಇರುವವರಿಗೆ `ವಿಜ್ಞಾನ~ ಪುಸ್ತಕ ಉತ್ತಮ ಮಾಹಿತಿ ನೀಡುತ್ತದೆ.  ಶಾಲೆ-ಕಾಲೇಜುಗಳಲ್ಲಿ ಈ ಪುಸ್ತಕ ಸಿಗುವಂತಾಗಬೇಕು~ ಎಂದು ಹೇಳಿದರು.ಸಾಹಿತಿ ಪ್ರೊ.ಎಲ್.ಎಸ್.ಶೇಷಗಿರಿ ರಾವ್ ಅವರು ಮಾತನಾಡಿ, `ವಿಜ್ಞಾನ~ ಸಂಕಲನವು ಶತಮಾನಗಳಷ್ಟು ಹಳೆಯದಾಗಿದೆ. ಆದರೂ ಅಸಲಿ ವಜ್ರವನ್ನು ಕಂಡುಹಿಡಿಯುವುದು ಹೇಗೆ ?,  ಪ್ಲೇಗ್, ಮಲೇರಿಯಾ ರೋಗಗಳ ಕುರಿತ ಮಾಹಿತಿ, ಬಾಹ್ಯಾಕಾಶ, ರಸಾಯನವಿಜ್ಞಾನ ಮುಂತಾದ ವೈಜ್ಞಾನಿಕ ವಿಷಯಗಳ ಕುರಿತು ಮಾಹಿತಿ ನೀಡುತ್ತದೆ~ ಎಂದರು.`ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ಜ್ಞಾನವನ್ನು ಹರಡಲು ಭಾಷೆ ಪ್ರಮುಖ ಮಾಧ್ಯಮವಾಗಿರುತ್ತದೆ. ಅಂತಹ ಸರಳವಾದ ಭಾಷೆಯಲ್ಲಿ ವಿಜ್ಞಾನದ ಲೇಖನಗಳು ರಚನೆಯಾಗಿವೆ. ವಿದ್ಯಾರ್ಥಿಗಳು, ಶಿಕ್ಷರೆಲ್ಲರೂ ಕಡ್ಡಾಯವಾಗಿ ಓದಲೇಬೇಕಾದ ಪುಸ್ತಕ ಇದಾಗಿದೆ~ ಎಂದು ಹೇಳಿದರು.ರಾಜ್ಯ ವಿಜ್ಞಾನ ಪರಿಷತ್ತಿನ ಅಧ್ಯಕ್ಷ ಡಾ.ಎಚ್.ಎಸ್.ನಿರಂಜನ ಆರಾಧ್ಯ, ಸಂಚಿಕೆಯ ಸಂಕಲನಕಾರರಾದ ಟಿ.ಆರ್.ಅನಂತರಾಮು ಮತ್ತು ಪ್ರೊ.ಎಚ್.ಅರ್.ರಾಮಕೃಷ್ಣ, ಉದಯಭಾನು ಕಲಾಸಂಘದ ಅಧ್ಯಕ್ಷ ಬಿ.ಕೃಷ್ಣ, ವಿಜ್ಞಾನ ಪರಿಷತ್ತಿನ ಕಾರ್ಯದರ್ಶಿ ಡಾ.ವಸುಂದರಾ ಭೂಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.