ವಿಜ್ಞಾನ ವಸ್ತುಸಂಗ್ರಹಾಲಯಕ್ಕೆ ನತದೃಷ್ಟ ಯುವತಿಯ ಹೆಸರು

7
ದಕ್ಷಿಣ ದೆಹಲಿ ಮೇಯರ್ ಹೇಳಿಕೆ

ವಿಜ್ಞಾನ ವಸ್ತುಸಂಗ್ರಹಾಲಯಕ್ಕೆ ನತದೃಷ್ಟ ಯುವತಿಯ ಹೆಸರು

Published:
Updated:
ವಿಜ್ಞಾನ ವಸ್ತುಸಂಗ್ರಹಾಲಯಕ್ಕೆ ನತದೃಷ್ಟ ಯುವತಿಯ ಹೆಸರು

ನವದೆಹಲಿ (ಪಿಟಿಐ): `ಡಿಸೆಂಬರ್‌ನಲ್ಲಿ ರಾಜಧಾನಿಯಲ್ಲಿ ಚಲಿಸುತ್ತಿದ್ದ ಬಸ್‌ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಯುವತಿಯ ಹೆಸರನ್ನು ನಗರದ ವಿಜ್ಞಾನ ವಸ್ತುಸಂಗ್ರಹಾಲಯಕ್ಕೆ ಇಡಲು ನಿರ್ಧರಿಸಲಾಗಿದೆ' ಎಂದು ದಕ್ಷಿಣ ದೆಹಲಿ ಮೇಯರ್ ಸವಿತಾ ಗುಪ್ತಾ ತಿಳಿಸಿದ್ದಾರೆ.ದೆಹಲಿ ಬಿಜೆಪಿ ಅಧ್ಯಕ್ಷ ವಿಜೇಂದ್ರ ಗುಪ್ತಾ ಹಾಗೂ ಯುವತಿಯ ತಂದೆಯೊಂದಿಗೆ ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, `ಡಿಸೆಂಬರ್16ರಂದು ಘಟನೆ ನಡೆಯುವುದಕ್ಕೆ ಮುನ್ನ ಯುವತಿ ತನ್ನ ಸ್ನೇಹಿತನೊಂದಿಗೆ ಆರ್.ಕೆ.ಪುರಂನ ವಿಜ್ಞಾನ ವಸ್ತುಸಂಗ್ರಹಾಲಯ ಬಳಿ ಬಸ್ ಏರಿದ್ದಳು. ಹಾಗಾಗಿ ಆ ವಸ್ತುಸಂಗ್ರಹಾಲಯಕ್ಕೆ ಆಕೆಯ ಹೆಸರು ಇಡಲು ದಕ್ಷಿಣ ದೆಹಲಿ ಮಹಾನಗರ ಪಾಲಿಕೆ ನಿರ್ಧರಿಸಿದೆ. ತಮ್ಮ ಮಗಳ ಹೆಸರನ್ನು ಬಹಿರಂಗಪಡಿಸಲು ಅಭ್ಯಂತರವಿಲ್ಲ ಎಂದು ಯುವತಿಯ ತಂದೆ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ' ಎಂದರು.ಭಾರತೀಯ ದಂಡ ಸಂಹಿತೆಯ 228ಎ ಕಲಂ ಅನ್ವಯ ಅತ್ಯಾಚಾರಕ್ಕೆ ಒಳಪಟ್ಟ ಯುವತಿಯ ಹೆಸರನ್ನು ಬಹಿರಂಗಪಡಿಸಿದರೆ 2 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ. ಆದರೆ ಸಂತ್ರಸ್ತೆಯ ಕುಟುಂಬದವರು ಲಿಖಿತ ರೂಪದಲ್ಲಿ ಒಪ್ಪಿಗೆ ನೀಡಿದರೆ ಆಕೆಯ ಹೆಸರನ್ನು ಬಹಿರಂಗಪಡಿಸಬಹುದು.ಕಾಮುಕರನ್ನು ಗಲ್ಲಿಗೇರಿಸಿ: `ನನ್ನ ಮಗಳ ಸಾವಿಗೆ ಕಾರಣರಾದ ಕಾಮುಕರನ್ನು ನೇಣಿಗೆ ಹಾಕಬೇಕು' ಎಂದು ಯುವತಿ ತಂದೆ ಆಗ್ರಹಿಸಿದರು.`ನನ್ನ ಮಗಳು ದೇಶದ ಆತ್ಮಸಾಕ್ಷಿಬಡಿದೆಬ್ಬಿಸಿದ್ದಾಳೆ.ಹಾಗಾಗಿ ಇಡೀ ವಿಶ್ವಕ್ಕೆ ಅವಳ ಹೆಸರು ತಿಳಿಸಬೇಕು' ಎಂದರು.`ಅತ್ಯಾಚಾರಕ್ಕೆ ಬಲಿಯಾದವಳು ಎಂದು ಆಕೆಯನ್ನು ಗುರುತಿಸುವಾಗ ನಮಗೆ ನೋವಾಗುತ್ತದೆ. ಅವಳು ಈ ದೇಶದ ದಿಟ್ಟ ಮಗಳು. ಇಡೀ ಜಗತ್ತಿಗೆ ಆಕೆಯ ಹೆಸರು ತಿಳಿಯಬೇಕು. ಅವಳ ಬದುಕನ್ನು ನುಂಗಿ ಹಾಕಿದ ಪಾತಕಿಗಳನ್ನು ಗಲ್ಲಿಗೇರಿಸಬೇಕು' ಎಂದು ಆಕ್ರೋಶ ವ್ಯಕ್ತಪಡಿಸಿದರು.ಖಾಸಗಿತನವನ್ನು ಗೌರವಿಸಿ: `3 ದಿನಗಳಿಂದ ನಾನು ನಿದ್ದೆ ಮಾಡಿಲ್ಲ. ಹಗಲಿನಲ್ಲಿ ಮಾಧ್ಯಮವರು ಮನೆಗೆ ಬರುತ್ತಾರೆ. ಹಾಗಾಗಿ ನಿದ್ದೆ ಮಾಡುವುದು ಅಸಾಧ್ಯ. ದಯವಿಟ್ಟು ನಮ್ಮ ಖಾಸಗಿತನವನ್ನು ಗೌರವಿಸಿ' ಎಂದು ಯುವತಿಯ ಸಹೋದರ ಮನವಿ ಮಾಡಿಕೊಂಡರು.`ವರ್ಮಾ ಸಮಿತಿಯ ಶಿಫಾರಸುಗಳ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ನನ್ನ ಸಹೋದರಿಗೆ ನ್ಯಾಯ ಸಿಗಬೇಕು ಅಷ್ಟೆ. ಈ ಪ್ರಕರಣದಲ್ಲಿ ಭಾಗಿಯಾದ ಬಾಲಕನನ್ನು ಇತರ ಆರೋಪಿಗಳಂತೆಯೇ ಪರಿಗಣಿಸಬೇಕು. 14 ವರ್ಷ ದಾಟಿದ ಬಳಿಕ ಎಲ್ಲರಿಗೂ ಸರಿ-ತಪ್ಪಿನ ಅರಿವು ಇರುತ್ತದೆ. ಹಾಗಾಗಿ ಆತನನ್ನು ಸುಮ್ಮನೆ ಬಿಡಬಾರದು' ಎಂದೂ ತಾಕೀತು ಮಾಡಿದರು.

ಸಾಕ್ಷ್ಯ ನುಡಿದ ಸ್ನೇಹಿತ

ದೆಹಲಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಯುವತಿಯ ಸ್ನೇಹಿತ ಮಂಗಳವಾರ ಇಲ್ಲಿನ ತ್ವರಿತ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ. ಈ ನಡುವೆ ದೆಹಲಿ ಪೊಲೀಸರು ಯುವತಿಯ ಮರಣೋತ್ತರ ವರದಿಯನ್ನು ಒಳಗೊಂಡ ಹೆಚ್ಚುವರಿ ಆರೋಪಟ್ಟಿ ಸಲ್ಲಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry