ವಿಜ್ಞಾನ ಶಿಕ್ಷಕನ ಸಂಗೀತ ಪ್ರಯೋಗ...!

7
ಶಿಕ್ಷಕರ ದಿನದಂದು ಸಾಧಕರ ಸ್ಮರಣೆ

ವಿಜ್ಞಾನ ಶಿಕ್ಷಕನ ಸಂಗೀತ ಪ್ರಯೋಗ...!

Published:
Updated:

ಹಾವೇರಿ: ಶಾಲೆಯಲ್ಲಿ ಡಾರ್ವಿನ್‌ನ ವಿಕಾಸವಾದ ಸಿದ್ಧಾಂತ, ಐನ್‌ಸ್ಟೀನ್‌ನ ಅನ್ವೇಷಣೆಗಳು, ಶ್ವಾಸಕೋಶ, ಹೃದಯ, ಚರ್ಮದ ಕಾರ್ಯವೈಖರಿ, ಎಚ್2ಓ, ಕಾರ್ಬನ್ ಡೈ ಆಕ್ಸೈಡ್, ನೈಟ್ರೋಜನ್ ಪ್ರಯೋಜನಗಳು ಹೀಗೆ ವಿಜ್ಞಾನದ ಹಲವು ಮಜಲುಗಳನ್ನು ಬೋಧಿಸುವ ಶಿಕ್ಷಕ, ಮನೆಯಲ್ಲಿ ವಯಲಿನ್, ಹಾರ್ಮೋನಿಯಂ, ಸಂತೂರ, ಕೊಳಲು, ಕ್ಯಾಸಿಯೋ ಸೇರಿದಂತೆ ಹಲವು ಸಂಗೀತ ಪರಿಕರಗಳನ್ನು ನುಡಿಸುವ ಮಹಾನ್ ಸಂಗೀತಗಾರ.`ಎತ್ತಣ ಮಾಮರ, ಎತ್ತಣ ಕೋಗಿಲೆ, ಎತ್ತಣದಿಂದೆತ್ತ ಸಂಬಂಧವಯ್ಯ' ಎನ್ನುವಂತೆ ವಿಜ್ಞಾನಕ್ಕೂ, ಸಂಗೀತಕ್ಕೂ ಯಾವುದೇ ಸಂಬಂಧ ಇಲ್ಲ. ಆದರೂ, ಅವೆರಡನ್ನು ಒಂದೇ ದೋಣಿಯಲ್ಲಿ ತೆಗೆದುಕೊಂಡು ಸಾಗುತ್ತಿರುವ ವಿಜ್ಞಾನ ಶಿಕ್ಷಕ ಹಾಗೂ ಯಶಸ್ವಿ ಸಂಗೀತ ಕಲಾವಿದನ ಯಶೋಗಾಥೆಯಿದು.ವೃತ್ತಿಯಲ್ಲಿ ಶಿಕ್ಷಕ, ಪ್ರವೃತ್ತಿಯಲ್ಲಿ ಹತ್ತಾರು ಸಂಗೀತ ವಾದ್ಯಗಳನ್ನು ನುಡಿಸುವ ಸಂಗೀತ ಕಲಾವಿದನಾಗಿ ಎರಡೂ ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದಾರೆ. ಹಾವೇರಿ ತಾಲ್ಲೂಕಿನ ಚಿಕ್ಕಲಿಂಗದಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ರವೀಂದ್ರ ಪಿ.ಮಳಗಿ.ಮೂಲತಃ ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲ್ಲೂಕಿನ ಚಿಕ್ಕಮಾಗೂರ ಗ್ರಾಮದ ರವೀಂದ್ರ, ವಿಜ್ಞಾನ ಮತ್ತು ಸಂಗೀತ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದು, ಎಂ.ಮ್ಯೂಜಿಕ್‌ನ ವಯಲಿನ್ ವಿಷಯದಲ್ಲಿ ರಾಜ್ಯಕ್ಕೆ ಪ್ರಥಮ ರ‌್ಯಾಂಕ್ ಪಡೆದುಕೊಂಡವರು.

ಹಾಗಂತ ಅವರು, ಸಂಗೀತ ಕುಟುಂಬದ ಹಿನ್ನೆಲೆಯಿಂದ ಬಂದವರಲ್ಲ. ತಮಗಿರವ ಸಂಗೀತದ ಬಗೆಗಿನ ಆಸಕ್ತಿ ಹಾಗೂ ಕುವೆಂಪು ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ವಿಭಾಗದ ಮುಖ್ಯಸ್ಥರಾಗಿದ್ದ ತಂದೆ ಮೇಜರ್ ಪಿ.ಎಂ.ಮಳಗಿ ಅವರಿಗಿದ್ದ ಸಂಗೀತದ ಮೇಲಿನ ವಿಶೇಷ ಪ್ರೀತಿ. ರವೀಂದ್ರರನ್ನು ಸಂಗೀತದತ್ತ ವಾಲುವಂತೆ ಮಾಡಿದೆ.ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ, ಬಿ.ಇಡಿ ಪದವಿ ಪಡೆದ ನಂತರವೂ ಅವರಲ್ಲಿನ ಸಂಗೀತದ ಗೀಳು ಕಡಿಮೆಯಾಗಲಿಲ್ಲ. ಬದಲಾಗಿ ಸಂಗೀತದಲ್ಲಿಯೂ ಸ್ನಾತಕೋತ್ತರ ಪದವಿ ಪಡೆಯುವಂತೆ ಮಾಡಿತು.ವಿದ್ವಾನ್ ನರಹರಿ, ಉಸ್ತಾದ್ ಹುಮಾಯೂನ್ ಹರ್ಲಾಪುರ, ಪಂಡಿತ ಇಂಧೂದರ ನಿರೋಡಿ ಅವರ ಬಳಿ ಸಂಗೀತ ಅಭ್ಯಾಸ ನಡೆಸಿದರಲ್ಲದೇ, ವಯಲಿನ್ ತಮ್ಮ ವಿಶೇಷ ಆಸಕ್ತಿಯ ವಾದ್ಯವಾದರೂ, ಸಂತೂರ, ಸೀತಾರ್ ಬಾನ್ಸೂರಿ (ಕೊಳಲು), ಮ್ಯಾಂಡೋಲಿನ್, ಹಾರ್ಮೋನಿಯಂ, ಚೈನಾ ಬ್ಲಾಕ್(ಬಿದಿರು ಬಳಸಿ ತಯಾರಿಸಿದ ವಾದ್ಯ), ಕಾಸ್ಟ್ ತರಂಗ, ಕ್ಯಾಸಿಯೋ, ಜಲತರಂಗ, ಕಂಜೀರಾ, ಗೆಜ್ಜೆ, ಸಂಬಾಳ, ಡೊಳ್ಳು, ತಾಳ, ಮೃದಂಗ, ಹವಾಯಿ ಗಿಟಾರ, ಸೇರಿದಂತೆ ಅನೇಕ ವಾದ್ಯಗಳನ್ನು ಪ್ರಬುದ್ಧವಾಗಿ ನುಡಿಸುವಷ್ಟು ಸಾಧನೆ ಮಾಡಿದ್ದಾರೆ.ವೃತ್ತಿ ಸಂಗೀತದಿಂದಲೇ ಆರಂಭ

ತಮ್ಮ ವಿಶೇಷ ಆಸಕ್ತಿ ಕ್ಷೇತ್ರವಾಗಿದ್ದ ಸಂಗೀತದಲ್ಲಿಯೇ ವೃತ್ತಿಯನ್ನು ಆರಂಭಿಸುವ ಅವಕಾಶ ರವೀಂದ್ರ ಅವರಿಗೆ ದೊರಕಿತು. ಭದ್ರಾವತಿಯ ಅಂತರಗಂಗೆ ಶಾಲೆಯಲ್ಲಿ ಆರು ವರ್ಷಗಳ ಕಾಲ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ನಂತರ ವಿಜ್ಞಾನ ಶಿಕ್ಷಕರಾಗಿ ಬಡ್ತಿಪಡೆದು ಶಿವಮೊಗ್ಗ ಜಿಲ್ಲೆ ಮಲ್ಲೇನಹಳ್ಳಿ, ಈಗ ಹಾವೇರಿ ತಾಲ್ಲೂಕಿನ ಚಿಕ್ಕಲಿಂಗದಹಳ್ಳಿ ಬಸವೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿದ್ದಾರೆ. ಆದರೂ ಅವರಲ್ಲಿನ ಸಂಗೀತದ ಶೃತಿ ಕಡಿಮೆಯಾಗಿಲ್ಲ.ಸಾಧಕರಿಗೆ ಸಾಥ್

ಶಾಸ್ತ್ರೀಯ ಹಾಗೂ ಲಘು ಶಾಸ್ತ್ರೀಯ ಸಂಗೀತದಲ್ಲಿ ವಾದ್ಯ ನುಡಿಸುವ ಅವರು, ಹಿಂದೂಸ್ತಾನಿ ಸಂಗೀತದ ದಿಗ್ಗಜರಾದ ಪಂಡಿತ ವೆಂಕಟೇಶಕುಮಾರ, ಕುಮಾರದಾಸ ಸೇರಿದಂತೆ ಅನೇಕ ಕಲಾವಿದರಿಗೆ ಹಾರ್ಮೋನಿಯಂ ಹಾಗೂ ವಯಲಿನ್ ಸಾಥ್ ನೀಡಿದ್ದಾರೆ.

ದೆಹಲಿ, ಕೊಲ್ಕತ್ತಾ, ಚನ್ನೈ, ಹೈದರಾಬಾದ್, ಕೇರಳದ ಕೊಟ್ಟಾಯಂ ಸೇರಿ ಅನೇಕ ಹೊರರಾಜ್ಯಗಳಲ್ಲಿ, ರಾಜ್ಯದ ಬೆಂಗಳೂರು, ಉಡುಪಿ, ಧಾರವಾಡ, ಶಿವಮೊಗ್ಗ ಸೇರಿದಂತೆ ಹತ್ತು ಹಲವು ಜಿಲ್ಲೆಗಳಲ್ಲಿ ಹತ್ತು ಹಲವಾರು ಸಂಗೀತ ಕಾರ್ಯಕ್ರಮಗಳನ್ನು ನೀಡಿ ಯಶಸ್ವಿ ಸಂಗೀತ ರಸಿಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾ ರಲ್ಲದೇ, ಆಕಾಶವಾಣಿಯ ದ್ವಿತೀಯ ಹೈಗ್ರೇಡ್ ಕಲಾವಿದರಾಗಿ ಜನಜನಿತರಾಗಿದ್ದಾರೆ.ತಾವೊಬ್ಬ ದೊಡ್ಡ ಸಂಗೀತಗಾರ ಎಂಬ ಅಹಂ ಇಟ್ಟುಕೊಳ್ಳದೇ ಶಾಲೆಯಲ್ಲಿ ಎಲ್ಲ ಶಿಕ್ಷಕರ ಜತೆ ಶಿಕ್ಷಕರಾಗಿ, ವಿದ್ಯಾರ್ಥಿಗಳ ಜತೆ ವಿದ್ಯಾರ್ಥಿಗಳಾಗಿ ಬೆರೆತು ವಿಜ್ಞಾನ ವಿಷಯದ ಬೋಧನೆ ಜತೆ ಜತೆಗೆ ಮಕ್ಕಳಿಗೆ ಸಂಗೀತ, ವಾದ್ಯಗಳ ಪಾಠ ಹೇಳಿಕೊಡುವುದರ ಜೊತೆಗೆ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸಾಂಸ್ಕೃತಿಕ ಹಾಗೂ ಪ್ರತಿಭಾ ಪುರಸ್ಕಾರಗಳಿಗೆ ಸಜ್ಜುಗೊಳಿಸುತ್ತಾರೆ.ಚಿತ್ರ ಕಲಾವಿದರೂ ಹೌದು

ಕೇವಲ ವಿಜ್ಞಾನ ಶಿಕ್ಷಕ, ಸಂಗೀತಗಾರರಷ್ಟೇ ಅಲ್ಲದೇ ಚಿತ್ರಕಲಾವಿದ, ನಾಣ್ಯಗಳ, ಅಂಚೆ ಚೀಟಿಗಳ ಸಂಗ್ರಹದ ಹವ್ಯಾಸ ರೂಢಿಸಿಕೊಂಡಿದ್ದಾರೆ.ತಮ್ಮ ವೃತ್ತಿ, ಪ್ರವೃತ್ತಿ ಹಾಗೂ ಹವ್ಯಾಸಗಳ ಬಗ್ಗೆ ಹೆಮ್ಮೆ ಹೊಂದಿರುವ ರವೀಂದ್ರ ಅವರ ಪ್ರಭಾವ ಅವರ ಕುಟುಂಬದ ಸದಸ್ಯರ ಮೇಲೆಯೂ ಆಗಿದೆ. ಇವರ ಇಬ್ಬರು ಸಹೋದರರಲ್ಲಿ ಒಬ್ಬರು ತಬಲಾ ವಾದಕ, ಇನ್ನೊಬ್ಬ ಹಾಡುಗಾರ, ಸಹೋದರಿ ನೃತ್ಯಗಾರ್ತಿಯಾಗಿ ರೂಪಗೊಂಡಿದ್ದಾರೆ. ಮಗ ತುಷಾರ್ ಸೇರಿದಂತೆ ಸಹೋದರ, ಸಹೋದರಿಯರ ಮಕ್ಕಳು ಇವರ ಬಳಿ ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ.ಪರಿಕರಗಳ ಸಂಗ್ರಹಾಲಯ

ತಂದೆಯ ಸಂಗೀತ ಪ್ರೀತಿ ಹಾಗೂ ಮಗನ ಸಂಗೀತದ ಉಸಿರು ಸೇರಿಕೊಂಡು ಮನೆಯಲ್ಲಿ ಸಂಗೀತ ವಾದ್ಯ ಪರಿಕರಗಳ ಸುಂದರ ಹಾಗೂ ಸುಸಜ್ಜಿತ ಸಂಗ್ರಹಾಲವೇ ನಿರ್ಮಾಣವಾಗಿದೆ. ಈಗಾಗಲೇ ಸುಮಾರು 3-4 ಲಕ್ಷ ರೂಪಾಯಿ ಖರ್ಚು ಮಾಡಿ ಅಪರೂಪದ ಸಂಗೀತ ವಾದ್ಯಗಳನ್ನು ಸಂಗ್ರಹಿಸಿರುವ ಅವರು, ಅದನ್ನೊಂದು ಸಂಗೀತ ಪ್ರಿಯರಿಗೆ ಅಚ್ಚುಮೆಚ್ಚಿನ ತಾಣ ಮಾಡುವ ಸದುದ್ದೇಶ ಹೊಂದಿದ್ದಾರೆ.`ವಿಜ್ಞಾನ ಹಾಗೂ ಸಂಗೀತ ಇವೆರಡು ಒಂದೇ ನಾಣ್ಯದ ಎರಡು ಮುಖಗಳು. ಎರಡರಲ್ಲಿಯೂ ಹೊಸ ಪ್ರಯೋಗ, ವಿಸ್ಮಯ ಸದಾ ನಡೆಯುತ್ತಲೇ ಇರುತ್ತವೆ. ಅದು ಅಲ್ಲದೇ ಸಂಗೀತ ಎನ್ನುವುದು ಕೂಡಾ ಒಂದು ವಿಜ್ಞಾನವೇ. ವಿಜ್ಞಾನ ಮತ್ತು ಸಂಗೀತ ಯಾವತ್ತು ನನಗೆ ಬೇರೆ ಎನಿಸಿಲ್ಲ. ಅದೇ ಕಾರಣಕ್ಕಾಗಿ ವಿಜ್ಞಾನದ ಜತೆಗೆ ಸಂಗೀತವನ್ನು ಮೇಳೈಸಿಕೊಂಡು ಹೋಗಲು ಸಾಧ್ಯವಾಗಿದೆ ಎನ್ನುತ್ತಾರೆ ಶಿಕ್ಷಕ ರವೀಂದ್ರ ಮಳಗಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry