ವಿಜ್ಞಾನ, ಶಿಕ್ಷಣಕ್ಕೆ ಆದ್ಯತೆ ಅಗತ್ಯ

7

ವಿಜ್ಞಾನ, ಶಿಕ್ಷಣಕ್ಕೆ ಆದ್ಯತೆ ಅಗತ್ಯ

Published:
Updated:

ಬೆಂಗಳೂರು: `ರಾಜಕೀಯ ಕ್ಷೇತ್ರದ ಅನೇಕರಿಗೆ ವಿಜ್ಞಾನದ ಮಹತ್ವವೇ ಗೊತ್ತಿಲ್ಲ. ಭಾರತ ವಿಶ್ವದ ಮುಂಚೂಣಿ ರಾಷ್ಟ್ರಗಳಲ್ಲಿ ಮೊದಲ ನಾಲ್ಕೈದನೇ ಸ್ಥಾನದಲ್ಲಿ ನಿಲ್ಲಬೇಕಾದರೆ ವಿಜ್ಞಾನ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ~ ಎಂದು ವಿಜ್ಞಾನ ಮತ್ತು ದಾರ್ಶನಿಕ ಸಮೂಹದ ಅಧ್ಯಕ್ಷ ಪ್ರೊ.ಸಿ.ಎನ್.ಆರ್. ರಾವ್ ಗುರುವಾರ ಇಲ್ಲಿ ಅಭಿಪ್ರಾಯಪಟ್ಟರು.ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹದ ವತಿಯಿಂದ ನಗರದ ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆ ಆವರಣದಲ್ಲಿರುವ ಜೆಆರ್‌ಡಿ ಟಾಟಾ ಸ್ಮಾರಕ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಸಂಶೋಧನಾ ಕ್ಷೇತ್ರದಲ್ಲಿ ಉತ್ತಮ ಕೆಲಸ ನಿರ್ವಹಿಸಿದ ಸಂಶೋಧಕರು, ವಿಜ್ಞಾನ ಸಂವಹನಕಾರರು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರಶಸ್ತಿ ಹಾಗೂ ಅನುದಾನ ನೆರವು ನೀಡಿ ಅವರು ಮಾತನಾಡಿದರು.`ದೇಶವು ಕೈಗಾರಿಕೆ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಬೆಳವಣಿಗೆ ಸಾಧಿಸಿದರಷ್ಟೇ ಸಾಲದು. ಎಲ್ಲ ಕ್ಷೇತ್ರಗಳಲ್ಲಿಯೂ ನಾವು ಮುಂದೆ ಬರಬೇಕಾದರೆ ವಿಜ್ಞಾನ ಕ್ಷೇತ್ರದಲ್ಲಿಯೂ ಪ್ರಗತಿ ಸಾಧಿಸಬೇಕು. ಅದಕ್ಕಾಗಿ ವಿಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಬೇಕಾಗಿದೆ~ ಎಂದರು.`ಕರ್ನಾಟಕವು ವಿಜ್ಞಾನ ಕ್ಷೇತ್ರದಲ್ಲಿ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಇನ್ನು ಮುಂದೆಯೂ ರಾಜ್ಯವು ಪ್ರಥಮ ಸ್ಥಾನ ಕಾಯ್ದುಕೊಳ್ಳಬೇಕಾದರೆ ಈ ಕ್ಷೇತ್ರದಲ್ಲಿ ಆಸಕ್ತಿಯಿರುವ ಯುವಕರು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡಬೇಕಾಗಿದೆ~ ಎಂದರು.ಉಪಕರಣಗಳೇ ಇಲ್ಲ: 
`ನಮ್ಮ ಅನೇಕ ಶಾಲೆಗಳಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಯೋಗಗಳನ್ನು ನಡೆಸಲು ಉಪಕರಣಗಳೇ ಇಲ್ಲ. ಈ ಹಿನ್ನೆಲೆಯಲ್ಲಿ ಮೂಲಸೌಲಭ್ಯಕ್ಕೆ 10 ಕೋಟಿ ರೂಪಾಯಿ ನೀಡುವಂತೆ ಮುಖ್ಯಮಂತ್ರಿಗಳನ್ನು ಕೋರಲಾಗುವುದು~ ಎಂದು ಅವರು ಹೇಳಿದರು.`ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ವಿಜ್ಞಾನ ಕಲಿಕೆಯ ಗುಣಮಟ್ಟ ಸ್ವಲ್ಪ ಉತ್ತಮವಾಗಿದೆ. ಆದರೆ, ಕಾಲೇಜುಗಳಲ್ಲಿ ಅಷ್ಟು ತೃಪ್ತಿಕರವಾಗಿಲ್ಲ. ಶಿಕ್ಷಣ ಲಾಭದಾಯಕ ವ್ಯವಹಾರ ಅಲ್ಲ. ಆದರೆ, ಶಿಕ್ಷಣ ಪಡೆದ ಶೇ 10ರಷ್ಟು ಮಂದಿ ಸಾಧನೆ ಮಾಡಿದರೂ ಅದು ದೊಡ್ಡದು~ ಎಂದರು.ಹೆಚ್ಚಿನ ಅನುದಾನ ನೀಡುವ ಭರವಸೆ: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಈ ಹಿಂದಿನ ಸರ್ಕಾರಗಳು ಕೇವಲ ಎರಡೂವರೆಯಿಂದ ಮೂರು ಕೋಟಿ ರೂಪಾಯಿ ಅನುದಾನ ನೀಡುತ್ತಿದ್ದವು. ಆದರೆ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ 30 ಕೋಟಿ ರೂಪಾಯಿ ಅನುದಾನ ನೀಡಿದೆ. ಈ ವರ್ಷದ ಬಜೆಟ್‌ನಲ್ಲಿಯೂ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಆನಂದ್ ಅಸ್ನೋಟಿಕರ್ ಭರವಸೆ ನೀಡಿದರು.ವಸತಿ ಶಾಲೆ ಆರಂಭ: ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹದ ಸದಸ್ಯ ಕಾರ್ಯದರ್ಶಿ ಎಂ.ಎನ್. ವಿದ್ಯಾಶಂಕರ್ ಮಾತನಾಡಿ, 2010ರಿಂದ 2020ರವರೆಗಿನ ದಶಕವನ್ನು ಕೇಂದ್ರ ಸರ್ಕಾರ `ಆವಿಷ್ಕಾರಗಳ ದಶಕ~ ಎಂದು ಘೋಷಿಸಿದೆ. ಇದಕ್ಕೆ ಪೂರಕವಾಗಿ ವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿಯಿರುವ ಗ್ರಾಮೀಣ ಪ್ರತಿಭಾನ್ವಿತ ಮಕ್ಕಳ ಅನುಕೂಲಕ್ಕಾಗಿ 2012-13ನೇ ಸಾಲಿನಿಂದ 12ನೇ ತರಗತಿಯಿಂದ ಉಚಿತ ವಸತಿ ಶಾಲೆ ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದರು.ದಾರ್ಶನಿಕ ಸಮೂಹದ ಸದಸ್ಯ ಹಾಗೂ ಉಪ ಸಮಿತಿ ಅಧ್ಯಕ್ಷ ಪ್ರೊ. ರೊದ್ದಂ ನರಸಿಂಹ ಮಾತನಾಡಿದರು. ಸಮೂಹದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಎಸ್. ಅನಂತ್‌ರಾಜ್ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry