ವಿಟ್ಲ: ಜಾಗ ಮಾರಾಟ ಜಗಳ.ಸೊಸೆಯನ್ನೇ ಕೊಚ್ಚಿ ಕೊಂದ ಅತ್ತೆ

7

ವಿಟ್ಲ: ಜಾಗ ಮಾರಾಟ ಜಗಳ.ಸೊಸೆಯನ್ನೇ ಕೊಚ್ಚಿ ಕೊಂದ ಅತ್ತೆ

Published:
Updated:

ವಿಟ್ಲ: ವಿಟ್ಲ ಕಸಬಾ ಗ್ರಾಮದಲ್ಲಿ ವಾಸವಿದ್ದ ಜಾಗವನ್ನು ಮಾರಾಟ ಮಾಡುವ ವಿಚಾರವಾಗಿ ಶುರುವಾದ ಕೌಟುಂಬಿಕ ಜಗಳ ಸೊಸೆಯ ಕೊಲೆಯಲ್ಲಿ ಪರ್ಯಾವಸಾನಗೊಂಡಿದೆ. ಜಾಗದ ಮಾರಾಟಕ್ಕೆ ಸೊಸೆ ಅಡ್ಡಿಪಡಿಸುತ್ತಿದ್ದಳು ಎಂದು ಅತ್ತೆಯೇ ಗುರುವಾರ ಬೆಳಿಗ್ಗೆ ಕೊಲೆ ಮಾಡಿದ್ದಾಳೆ. ಪತ್ನಿಯ ಕೊಲೆಗೆ ಗಂಡನೂ ತಾಯಿಗೆ ನೆರವಾಗಿದ್ದಾನೆ ಎಂದು ದೂರಲಾಗಿದೆ.ಗ್ರಾಮದ ಅಪ್ಪೆರಿಪಾದೆ ಎಂಬಲ್ಲಿ ಘಟನೆ ನಡೆದಿದ್ದು, ಪಾರ್ವತಿ(60) ಮತ್ತು ಆಕೆಯ ಪುತ್ರ ರವೀಶ್ ನಾಯ್ಕ (32) ಕೊಲೆ ಆರೋಪಿಗಳು. ರವೀಶ್‌ನಿಗೆ ಏಳು ವರ್ಷದ ಹಿಂದೆ ಬಾಳ್ತಿಲ ಗ್ರಾಮದ ಬಿ.ಆರ್.ನಗರದ ಪೂವಪ್ಪ ನಾಯ್ಕ ಅವರ ಪುತ್ರಿ ಸರಸ್ವತಿ ಜತೆ ವಿವಾಹವಾಗಿದ್ದಿತು. ದಂಪತಿಗೆ ಲೋಹಿತಾಶ್ವ ಎಂಬ 4 ವರ್ಷದ ಪುತ್ರ ಇದ್ದಾನೆ.ಘಟನೆ ಹಿನ್ನೆಲೆ:  ‘ಅತ್ತೆ-ಸೊಸೆ ನಡುವೆ ಐದಾರು ವರ್ಷಗಳಿಂದಲೂ ಒಂದಲ್ಲ ಒಂದು ವಿಚಾರಕ್ಕೆ ಜಗಳವಾಗುತ್ತಲೇ ಇದ್ದಿತು. ನಿವೇಶನ ಮಾರಾಟ ವಿಚಾರವಾಗಿ ಗುರುವಾರವೂ ಸರಸ್ವತಿ(27), ಪತಿ ರವೀಶ್ ಮತ್ತು ಅತ್ತೆ ನಡುವೆ ಮಾತು ಬೆಳೆದು ಕೊಲೆಯಲ್ಲಿ ಕೊನೆಗೊಂಡಿದೆ’ ಎಂದು ಗ್ರಾಮಸ್ಥರು ತಿಳಿಸಿದರು.ಗುರುವಾರ ಬೆಳಿಗ್ಗೆ 8 ಗಂಟೆಗೆ ಘಟನೆ ನಡೆದಿದ್ದು, ಸರಸ್ವತಿ ದೇಹದಲ್ಲಿ ತಲೆ, ಕುತ್ತಿಗೆ, ಕೈ, ಕಾಲು, ಪಾದ ಸೇರಿದಂತೆ 20ಕ್ಕಿಂತಲೂ ಹೆಚ್ಚು ಕಡೆ ಗಾಯಗಳಾಗಿದ್ದು, ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾಳೆ.ನಂತರ ಅತ್ತೆ ಪಾರ್ವತಿ ನೇರ ವಿಟ್ಲ ಪೊಲೀಸ್ ಠಾಣೆಗೆ ತೆರಳಿ ‘ಸೊಸೆಯನ್ನು ನಾನೇ ಕೊಲೆ ಮಾಡಿದೆ’ ಎಂದು ಶರಣಾಗಿದ್ದಾಳೆ. ಸೊಸೆಯನ್ನು ತಾನೊಬ್ಬಳೇ ಕೊಲೆ ಮಾಡಿದೆ ಎಂದು ಹೇಳಿಕೆ ನೀಡಿದ್ದರೂ, ದಢೂತಿ ದೇಹದ ಸರಸ್ವತಿಯನ್ನು ಪಾರ್ವತಿ ಒಬ್ಬಳೇ ಕೊಲೆ ಮಾಡಲು ಅಸಾಧ್ಯ. ಅಲ್ಲದೇ ಎರಡು ಕತ್ತಿಗಳು ಸ್ಥಳದಲ್ಲಿ ಪತ್ತೆಯಾಗಿರುವುದರಿಂದ ಇಬ್ಬರು ಸೇರಿಯೇ ಈ ಕೊಲೆ ಮಾಡಿರಬಹುದು ಎಂಬ ಅಂಶಗಳು ಸಂಶಯಕ್ಕೆಡೆ ಮಾಡಿವೆ.ಈ ಮಧ್ಯೆ ಸರಸ್ವತಿಯ ತಂದೆ, ಮನೆ ಸಮೀಪದ ಕಲ್ಲಿನ ಕ್ವಾರಿ ನಡೆಸುತ್ತಿರುವ ಕುಂಞೆ ಎಂಬ ವ್ಯಕ್ತಿ ಬಗ್ಗೆ ಸಂಶಯ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದಾರೆ. ಕುಂಞೆ ಈ ಕೊಲೆಯ ಸೂತ್ರಧಾರ ಎಂದು ದೂರಿದ್ದಾರೆ. ಕೊಲೆ ನಡೆದ ಸ್ಥಳದಲ್ಲಿ ಎರಡು ಕತ್ತಿಗಳು ಸಿಕ್ಕಿವೆ. ವಿಟ್ಲ ಪೊಲೀಸರು ಪಾರ್ವತಿ ಮತ್ತು ರವೀಶನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.ಮಗುವೇ ಪ್ರತ್ಯಕ್ಷ ಸಾಕ್ಷಿ: ಘಟನೆ ಸಂದರ್ಭ ಸ್ಥಳದಲ್ಲಿಯೇ ಇದ್ದ ಸರಸ್ವತಿಯ ಪುತ್ರ ಲೋಹಿತಾಶ್ವ ಭಯದಿಂದ ಸ್ತಂಭೀಭೂತನಾಗಿದ್ದು, ಘಟನೆಗೆ ಪ್ರತ್ಯಕ್ಷ ಸಾಕ್ಷಿಯೇ ಆಗಿದ್ದಾನೆ. ‘ಅಮ್ಮನನ್ನು ಅಪ್ಪ ಮತ್ತು ಅಜ್ಜಿ ಸೇರಿ ಕಡಿದು ಹಾಕಿದರು’ ಎಂದು ಲೋಹಿತಾಶ್ವ ತಿಳಿಸಿದ್ದಾನೆ ಎಂದೂ ತಿಳಿದುಬಂದಿದೆ.ಸ್ಥಳಕ್ಕೆ ಪುತ್ತೂರು ಎಚ್ಚುವರಿ ಎಸ್‌ಪಿ ರೋಹಿಣಿ ಕಟೊಚ್ ಭೇಟಿ ನೀಡಿದ್ದರು. ಬಂಟ್ವಾಳ ಪೊಲೀಸ್ ಇನ್‌ಸ್ಪೆಕ್ಟರ್ ನಂಜುಂಡೇ ಗೌಡ ತನಿಖೆ ಮುಂದುವರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry