ವಿಟ್ಲ: ವಿಷ ಪದಾರ್ಥ ಸೇವಿಸಿ ಸಾಕುಪ್ರಾಣಿ ಸಾವು, ಆತಂಕ

ಶುಕ್ರವಾರ, ಜೂಲೈ 19, 2019
24 °C

ವಿಟ್ಲ: ವಿಷ ಪದಾರ್ಥ ಸೇವಿಸಿ ಸಾಕುಪ್ರಾಣಿ ಸಾವು, ಆತಂಕ

Published:
Updated:

ವಿಟ್ಲ: ಐದಕ್ಕಿಂತ ಹೆಚ್ಚು ಮನೆಗಳ ಸುಮಾರು 30ಕ್ಕೂ ಅಧಿಕ ಕೋಳಿಗಳು ಮತ್ತು ನಾಲ್ಕು ನಾಯಿಗಳು ವಿಷಪದಾರ್ಥ ಸೇವಿಸಿ ಸಾವನ್ನಪ್ಪಿದ ಘಟನೆ ವಿಟ್ಲಮೂಡ್ನೂರು ಗ್ರಾಮದ ಕುಂಡಡ್ಕ ವಿಷ್ಣುಮೂರ್ತಿ ದೇವಸ್ಥಾನದ ಸಮೀಪದಲ್ಲಿ ನಡೆದಿದೆ.ಇದೊಂದು ಸಾಮೂಹಿಕ ಹತ್ಯೆಯಾಗಿದ್ದು, ಈ ಪ್ರಾಣಿಗಳು ಹೇಗೆ ಸಾವನ್ನಪ್ಪಿವೆ ಎಂಬುದರ ಕಾರಣ ಇನ್ನೂ ನಿಗೂಢವಾಗಿದೆ.ಭಾನುವಾರ ರಾತ್ರಿ 25 ಸಾವಿರ ರೂಪಾಯಿ ನಗದು ಕಳವಾದ ಸುಲೈಮಾನ್ ಅವರ ಅಂಗಡಿ ಪಕ್ಕದ ಮನೆಯಿಂದ ಮಾರ್ಪು ತನಕ ಈ ಘಟನೆ ನಡೆದಿದೆ. ವಿಷ್ಣುನಗರ ನಿವಾಸಿ, ಕೇಪು ದೇಗುಲದ ಅರ್ಚಕ ಗಂಗಾಧರ ಅವರ ನಾಯಿ ಸೋಮವಾರ ಬೆಳಿಗ್ಗೆ ಇದ್ದಕ್ಕಿದ್ದ ಹಾಗೇ ವಾಂತಿ ಮಾಡಲಾರಂಭಿಸಿ ಮೃತಪಟ್ಟಿದೆ. ಆಹಾರ ಸೇವಿಸದೇ ಇದ್ದ ನಾಯಿ ಸ್ವಲ್ಪ ರಕ್ತವನ್ನೂ ವಾಂತಿ ಮಾಡಿ ಸಾವನ್ನಪ್ಪಿತು. ಸಂಕಪ್ಪ ಮೂಲ್ಯ ಅವರ ಒಂದು ನಾಯಿ, ಎಣ್ಣೆದಕಳ ಮೋನಪ್ಪ ಮೂಲ್ಯ ಅವರ 16 ಕೋಳಿ, ತುಕ್ರ ಮೂಲ್ಯರ  1 ನಾಯಿ, ಮಾರ್ಪು ದಾಮೋದರ ಗೌಡರ 10 ಕೋಳಿ, 1 ನಾಯಿ, ಮಾರ್ಪು ಭೋಜ ಗೌಡರ 4 ಕೋಳಿಗಳು ಸತ್ತಿವೆ.ವಿಷ ಹಾಕಿದವರು ಯಾರು? ಕುಂಡಡ್ಕದ ಸುಲೈಮಾನ್ ಅಂಗಡಿಯ ಕಳ್ಳತನಕ್ಕೂ ಈ ಪ್ರಕರಣಕ್ಕೂ ಸಂಬಂಧವಿದೆಯೇ? ಎಂಬಿತ್ಯಾದಿ ವಿಚಾರಗಳು ಕಗ್ಗಂಟಾಗಿ ಉಳಿದಿವೆ. ಮನೆಯಲ್ಲಿ ಕಟ್ಟಿ ಹಾಕಿದ್ದ ನಾಯಿ ಕೋಳಿಗಳಿಗೆ ಏನೂ ಆಗಿಲ್ಲ. ಹೊರಗಡೆ ತೆರಳಿದವು ಮಾತ್ರ ಮೃತಪಟ್ಟಿರುವುದರಿಂದ ಇದೊಂದು ವ್ಯವಸ್ಥಿತ ಕೃತ್ಯ ಎಂಬ ಸಂಶಯ ವ್ಯಕ್ತವಾಗಿದೆ.ಸುಲೈಮಾನ್ ಅಂಗಡಿಯಲ್ಲಿಟ್ಟಿದ್ದ ಹಣವನ್ನು ದೋಚಿದವರು ಸ್ಥಳೀಯರೇ ಎಂಬ ಆರೋಪವು ಇದೆ. ಅವರ ಕಿಟಕಿಗೆ ಕಬ್ಬಿಣದ ಸರಳಿಲ್ಲ. ಅದರ ಬಾಗಿಲನ್ನು ಹಾಕಿ ಆತ ಬೀಗ ಹಾಕುತ್ತಾರೆ. ಅಂಗಡಿಯಲ್ಲಿ ಹಣ ಸಂಗ್ರಹ ಅಧಿಕ. ಬೀಡಿ ಕಟ್ಟಿದವರು, ಮತ್ತಿತರ ವಾರದ ವೇತನ ಪಡೆಯುವವರು ಭಾನುವಾರ ಹಣ ನೀಡುವ ಬಗ್ಗೆ ಮಾಹಿತಿ ಇರುವ ಕಳ್ಳ ಬೀಗ ಒಡೆದು ಅದೇ ಕಿಟಕಿ ಮೂಲಕ ಒಳಗೆ ಪ್ರವೇಶಿಸಿ, ಹಣ ಇಡುವ ಮೇಜಿನಿಂದ ನಗದು ಮತ್ತು ಚಿಲ್ಲರೆಯನ್ನು ಕದ್ದೊಯ್ದಿದ್ದಾನೆ.ಕುಂಡಡ್ಕದ ಮಾರ್ಪು ಎಂಬಲ್ಲಿ ಪಂಪು, ಬೈಕ್, ಚಿಲ್ಲರೆ, ನಗದನ್ನು ಕಳ್ಳತನ ಮಾಡಬಲ್ಲ ಒಬ್ಬ ಕುಖ್ಯಾತ ಕಳ್ಳನಿದ್ದಾನೆ ಎಂದು ಊರಿನವರು ಹೇಳಿದ್ದಾರೆ. ಸುಲೈಮಾನ್ ಅಂಗಡಿಯಲ್ಲಿ ಕಳ್ಳತನವಾದ ಮರುದಿನ ವಿಟ್ಲ ಪೊಲೀಸರು ಆತನ ಮನೆಗೆ ತೆರಳಿ ತನಿಖೆ ನಡೆಸಿದ್ದರು. ಆತ ಮೂರು ದಿನಗಳಿಂದ ಮನೆಯಲ್ಲಿರಲಿಲ್ಲ ಎಂಬ ಮಾಹಿತಿ ಪೊಲೀಸರಿಗೆ ದೊರಕಿದೆ.ನಾಯಿಗಳಿದ್ದರೆ ಕಳ್ಳತನ ನಡೆಸಲು ಅಡ್ಡಿಯಾಗುತ್ತದೆ. ರವಿವಾರ ರಾತ್ರಿ ಕಳ್ಳರು ಸುಲೈಮಾನ್ ಅಂಗಡಿಗೆ ನುಗ್ಗುವುದಕ್ಕಿಂತ ಮುನ್ನ ನಾಯಿಗಳಿಗೆ ವಿಷ ಹಾಕಿರಬಹುದು. ಅವುಗಳ ಮೇಲೆ ನಿಧಾನಗತಿಯ ಪರಿಣಾಮ ಬೀರಿದ್ದರಿಂದ ಅವು ಸೋಮವಾರ ವಾಂತಿ ಮಾಡಿದ್ದು ಅದನ್ನು ಕೋಳಿಗಳು ತಿಂದಿರಬಹುದು. ಅದಕ್ಕೇ ನಾಯಿಯ ಜತೆಯಲ್ಲೇ ಕೋಳಿಗಳೂ ಸತ್ತಿರಬಹುದು ಎನ್ನುತ್ತಾರೆ ಇಲ್ಲಿನ ನಾಗರಿಕರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry